ಸರಕಾರಿ ಪ್ರ.ದ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿಗಾಗಿ ಆಗ್ರಹಿಸಿ ಮನವಿ: ತರಗತಿ ಬಹಿಷ್ಕರಿಸಿ ಅನಿರ್ದಿಷ್ಠಾವಧಿ ಮುಷ್ಕರ
ಅಂಕೋಲಾ : ಸೇವಾ ಖಾಯಮಾತಿಗೆ ಒತ್ತಾಯಿಸಿ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂಕೋಲಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಅನಿರ್ದಿಷ್ಠಾವಧಿವರೆಗೆ ತರಗತಿಯನ್ನು ಬಹಿಷ್ಕರಿಸಿ ಸರಕಾರದ ಗಮನ ಸೆಳೆಯಲು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕ ಕೃಷ್ಣಾ ಬಿ ಗೌಡ ಮಾತನಾಡಿ ಹಲವು ವರ್ಷದಿಂದ ನಮ್ಮ ಹೋರಾಟ ನಡೆಯುತ್ತಿದೆ. ಆದರೆ ಯಾವುದೇ ಸರ್ಕಾರ ಬಂದರೂ ಪರಿಹಾರ ಸಿಕ್ಕಿಲ್ಲ. ವಿಪಕ್ಷದಲ್ಲಿದ್ದಾಗ ಭರವಸೆ ನೀಡಿರುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದ ಬಳಿಕ ನಿರ್ಲಕ್ಷ್ಯ ವಹಿಸುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಕೂಡ ತಮ್ಮ ಪ್ರಣಾಳಿಕೆಯಲ್ಲಿ ನಮಗೆ ಸೌಲಭ್ಯ ನೀಡುವುದಾಗಿ ತಿಳಿಸಿತ್ತು. ಆದರೆ ಈಗ ಗಮನವನ್ನೇ ಹರಿಸುತ್ತಿಲ್ಲ ಎಂದರು.
ರಾಜ್ಯದಲ್ಲಿ 11 ಸಾವಿರ ಅತಿಥಿ ಉಪನ್ಯಾಸಕರು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಕಡಿಮೆ ವೇತನ ಪಡೆದು ಯಾವುದೇ ಸೌಲಭ್ಯವಿಲ್ಲದೆ ದುಡಿಯುತ್ತಿದ್ದೇವೆ. ನಮ್ಮ ಬಗ್ಗೆ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಗಮನಸೆಳೆಯಲು ತರಗತಿಯನ್ನು ಬಹಿಷ್ಕರಿಸಿ ಹೋರಾಟ ಮಾಡುವದು ಅನಿವಾರ್ಯ. ಸರ್ಕಾರ ಈಗಲಾದರೂ ಬೇಡಿಕೆಗೆ ಸ್ಪಂದಿಸುವ ಮೂಲಕ ಸೇವೆ ಖಾಯಂಗೊಳಿಸುವುದರ ಜತೆಗೆ ಇತರೆ ಸೌಲಭ್ಯ ಒದಗಿಸಿಕೊಡಬೇಕು. ಡಿ.4 ರಿಂದ ಬೆಳಗಾವಿ ಅಧಿವೇಶನ ಆರಂಭವಾಗಲಿದ್ದು ಅಲ್ಲಿ ಈ ಕುರಿತು ಚರ್ಚೆಯಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯವರೆಗೆ ಸರಕಾರ ಸ್ಪಂದಿಸದಿದ್ದಲ್ಲಿ ಅಧಿವೇಶನದ ವೇಳೆ ಧರಣಿ ನಡೆಸಲಾಗುವದು ಎಂದು ತಿಳಿಸಿದ್ದಾರೆ. ಗ್ರೇಡ್ 2 ತಹಶೀಲ್ದಾರ ಬಿ ಜಿ ಕುಲಕರ್ಣಿ ಮನವಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಕೃಷ್ಣಾ ಬಿ ಗೌಡ, ವೀಣಾ ಎನ್ ಗೌಡ, ವಂದನಾ ನಾಯ್ಕ, ಡಾ.ಭವಾನಿ ರೇವಣಕರ, ಸಂತೋಷಿ ಹಳನಕರ, ಮಾರುತಿ ಗಾವಡಿ, ಗಂಗಾಧರ ನಾಯ್ಕ, ರೇಷ್ಮಾ ನಾಯಕ, ಹೇಮಾ ಎಚ್, ಸುಹಾಸ ನಾಯಕ, ಉಮೇಶ ಆಚಾರಿ, ನಾಗರಾಜ ಎಸ್ ನಾಯ್ಕ, ಹಕೀಮ ಶಿಲಾರ್, ರಾಧಾ ನಾಯ್ಕ, ಪ್ರದೀಪ ನಾಯಕ, ಸಚೀನ ನಾಯ್ಕ, ವಿಶ್ವನಾಥ ಭಂಡಾರಿ, ವಿನುತಾ ಭಟ್, ಜ್ಯೋತಿಲಕ್ಷ್ಮಿ ನಾಯ್ಕ, ತ್ರಿವೇಣಿ ನಾಯ್ಕ, ಪೂರ್ಣಿಮಾ ಜಿ ಆರ್, ಪ್ರತಿಭಾ ನಾಯ್ಕ, ಭವ್ಯಾ ನಾಯ್ಕ, ಪ್ರಶಾಂತ ಬಿ ಆರ್, ಸೂರಜ ಎಮ್ ಟಿ, ಸಂತೋಷ ಬಾಂದೇಕರ, ಶ್ರೀಶಾ ನಾಯಕ, ಮೋಹನ ದುರ್ಗೇಕರ ಇದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ