ಶಿರಸಿ: ನಗರದ ಯೋಗಮಂದಿರದಲ್ಲಿ ಪ್ರತಿ ತಿಂಗಳ ಮೊದಲ ಇಲ್ಲಿಯ ರಾಗಮಿತ್ರ ಪ್ರತಿಷ್ಠಾನ ನಡೆಸುವ ಗುರು ಅರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ಗೌರವ ಸನ್ಮಾನ ಸಂಭ್ರಮದಿoದ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ಧರ್ಮಸ್ಥಳದ ಗೋವಿಂದ ಭಟ್ ನಿಡ್ಲೆ ಹಾಗೂ ವಿದುಷಿ ರೇಖಾ ಭಟ್ಟ ಕೋಟೆಮನೆಯವರನ್ನು ಶಾಲು ಹೊದೆಸಿ ಫಲ ತಾಂಬೂಲದೊoದಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಿರಸಿ ಮಹಾಲಕ್ಷ್ಮಿ ಪೇಪರ್ ನ ನಾಗರಾಜ ಭಟ್ಟ ಮಾತನಾಡಿ, ಶಾಸ್ತ್ರೀಯ ಸಂಗೀತ ನುಡಿಸುವುದು ಹಾಗೂ ಆಲಿಸುವುದರಿಂದ ದೈನಂದಿನ ಜಂಜಾಟ ಮರೆಯಲು ಸಹಾಯವಾಗುತ್ತದೆ ಹಾಗೂ ಅನುಭವಿ ಕಲಾವಿದರಿಗೆ ಸನ್ಮಾನಿಸುವುದು ಶ್ಲಾಘನೀಯವಾಗಿದೆ ಎಂದರು.
ಅತಿಥಿಯಾಗಿದ್ದ ಎಂ. ಎನ್. ಹೆಗಡೆ ಮಾಳೆನಳ್ಳಿ, ಅಧ್ಯಕ್ಷತೆ ವಹಿಸಿದ್ದ ಸಂಗೀತಾಭಿಮಾನಿ ಆರ್.ಎನ್. ಭಟ್ಟ ಸುಗಾವಿ ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿದ ಗೋವಿಂದ ಭಟ್ಟ ನೀಡ್ಲೆ ಮಾತನಾಡಿ, ಯಕ್ಷಗಾನ – ಸಂಗೀತ ಇವೆರಡು ಒಂದೇ ನಾಣ್ಯದ ಎರಡು ಮುಖಗಳಂತಿದ್ದು ಇದು ಜೀವನದ ಸಂಸ್ಕಾರ ಕೊಡುವ ಕಲೆ, ಭಾಷೆ ಅರುಹುತ್ತದೆ. ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ ಎನ್ನುತ್ತ ಕೃತಜ್ಞತೆ ಹೇಳಿದರು.
ನಂತರ ನಡೆದ ಸಂಗೀತ ಕಾರ್ಯಕ್ರಮದ ಆರಂಭದಲ್ಲಿ ಸಿದ್ಧಾಪುರ ತಾಲೂಕಿನ ತ್ಯಾರಗಲ್ ಶ್ರೀದುರ್ಗಾ ಮಹಿಳಾ ಮಂಡಳದವರು ಭಕ್ತಿಸಂಗೀತವನ್ನು ಸುಂದರವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ತಬಲಾದಲ್ಲಿ ಕಿರಣ ಕಾನಗೋಡ್, ಹಾರ್ಮೋನಿಯಂನಲ್ಲಿ ಭಾರತಿ ಹೆಗಡೆ ಸಹಕರಿಸಿದರು.
ನಂತರದಲ್ಲಿ ನಡೆದ ಹಾರ್ಮೋನಿಯಂ ಸೋಲೋದಲ್ಲಿ ಅಜಯ ಹೆಗಡೆ ವರ್ಗಾಸರ ತಮ್ಮ ಸೋಲೋ ನಡೆಸಿಕೊಡುತ್ತ ರಾಗ್ ಪೂರಿಯಾ ಕಲ್ಯಾಣ್ ನುಡಿಸಿ ನಂತರ ಭಕ್ತಿ ಹಾಡೊಂದನ್ನು ನುಡಿಸಿದರು. ಈ ಸಂದರ್ಭದಲ್ಲಿ ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ ಸಾಥ್ ನೀಡಿದರು.
ನಂತರದಲ್ಲಿ ನಡೆದ ಶಾಸ್ತ್ರೀಯ ಕಾರ್ಯಕ್ರಮದಲ್ಲಿ ಗಾಯಕಿ ವಿದುಷಿ ರೇಖಾ ಭಟ್ಟ ಕೋಟೆಮನೆ ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ರಾಗ್ ಯಮನ್ ವಿಸ್ತಾರವಾಗಿ ಹಾಡಿದರು, ಮೀರಾ ಭಜನ್, ರಾಮ್ ಭಜನ್‌ಗಳನ್ನು ಸುಶ್ರಾವ್ಯವಾಗಿ ಹಾಡಿದಾಗ ಸಭೆಯ ಕರತಾಡನ ಕಾರ್ಯಕ್ರಮದ ಯಶಸ್ಸನ್ನು ಸಾಕ್ಷೀಕರಿಸಿತು.
ಕೊನೆಯಲ್ಲಿ ರಾಗ್ ಭೈರವಿಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ಕೋಟೆಮನೆಯವರ ಗಾಯನಕ್ಕೆ ಹಾರ್ಮೋನಿಯಂನಲ್ಲಿ ವಿ. ಪ್ರಕಾಶ ಹೆಗಡೆ ಯಡಳ್ಳಿ, ತಬಲಾದಲ್ಲೆ ವಿ. ಶಂಕರ ಹೆಗಡೆ ಶಿರಸಿ ಸಮರ್ಥವಾಗಿ ಸಾಥ್ ನೀಡಿದರು. ಹಿನ್ನಲೆಯ ಸಹಗಾನ ಮತ್ತು ತಾನ್ಪುರದಲ್ಲಿ ಸುಪ್ರಿಯಾ ಭರತ್ ಸಹಕರಿಸಿದರು. ರಾಗಮಿತ್ರ ಪ್ರತಿಷ್ಠಾನದ ಯಡಳ್ಳಿ ಪ್ರಕಾಶ ಹೆಗಡೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಪ್ರಾಸ್ತಾವಿಕ ಮಾತಾಡಿ ಕಾರ್ಯಕ್ರಮ ನಿರೂಪಿಸಿದರು.
ವಿಸ್ಮಯ ನ್ಯೂಸ್, ಶಿರಸಿ