ಎಪಿಎಂಸಿ ಕಾರ್ಯದರ್ಶಿ ನೀಡಿದ ನೋಟಿಸ್‌ಗೆ ಖಂಡನೆ: ವ್ಯಾಪಾರ ಸ್ಥಗಿತಗೊಳಿಸಿ ದಲಾಲರ ಪ್ರತಿಭಟನೆ

ಕುಮಟಾ: ತಾಲೂಕಿನ ಎಪಿಎಂಸಿಯಲ್ಲಿ ರೈತರು ನೀಡುವ ಅಡಿಕೆಯ ತೂಕದ ವಿಷಯಕ್ಕೆ ಸಂಬoಧಪಟ್ಟ ಕೆಲ ದೂರಿನ ಆಧಾರದ ಮೇಲೆ ಎಪಿಎಂಸಿ ಕಾರ್ಯದರ್ಶಿಯವರು ಎಲ್ಲಾ ದಲಾಲರಿಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್‌ವೊಂದನ್ನು ನೀಡಿದ ಹಿನ್ನಲೆಯಲ್ಲಿ ಇಂದು ದಲಾಲರು ವ್ಯಾಪಾರ ಸ್ಥಗಿತಗೊಳಿಸಿದ್ದರಿಂದ ರೊಚ್ಚಿಗೆದ್ದ ರೈತರು ಎಪಿಎಂಸಿಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ದಲಾಲರು ಏಕಾಏಕಿ ವ್ಯಾಪಾರ ಸ್ಥಗಿತಗೊಳಿಸಿದ್ದರಿಂದ ದೂರ ದೂರದಿಂದ ಅಡಿಕೆ ತಂದ ರೈತರಿಗೆ ವ್ಯಾಪಾರ ನಡೆಯದೇ ಸಮಸ್ಯೆಯಾಯಿತು. ಇದರಿಂದ ಆಕ್ರೋಶಗೊಂಡ ರೈತರು ಮತ್ತು ದಲಾಲರು ಎಪಿಎಂಸಿಗೆ ಮುತ್ತಿಗೆ ಹಾಕಿ, ಕಾರ್ಯದರ್ಶಿಗಳು ನೀಡಿದ ನೋಟಿಸ್‌ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಲಾಲರು ಮತ್ತು ಎಪಿಎಂಸಿ ಕಾರ್ಯದರ್ಶಿಯವರ ನಡುವೆ ಮಾತಿನ ಚಕಮಕಿ ಕೂಡ ನಡೆದು, ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಬಳಿಕ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಸತೀಶ ಗೌಡ ಅವರು ರೈತರು, ದಲಾಲರು ಮತ್ತು ಎಪಿಎಂಸಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಎಪಿಎಂಸಿ ಸದಸ್ಯ ಅರವಿಂದ ಪೈ ಅವರು, ಜಿಪಂ ಮಾಜಿ ಸದಸ್ಯ ಪಿ ಎಸ್ ಭಟ್ ಅವರು, ರೈತರಿಗೆ ಅಡಿಕೆ ತೂಕದಲ್ಲಿ ಮೋಸವಾಗುತ್ತಿದೆ ಎಂಬ ನಿರಾಧಾರವಾದ ದೂರು ನೀಡಿದ್ದರು. ಆ ದೂರಿನಂತೆ ಅವರನ್ನು ಮತ್ತು ಸಂಬoಧಪಟ್ಟ ದಲಾಲರನ್ನು ಕರೆಯಿಸಿ ಸಮಸ್ಯೆ ಇತ್ಯರ್ಥ ಮಾಡಬೇಕಾದ ಎಪಿಎಂಸಿ ಅಧಿಕಾರಿಗಳು ನೇರವಾಗಿ ದಲಾಲರಿಗೆ ನೋಟಿಸ್ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ. ದೂರು ನೀಡಿದ ಪ್ರಕರಣ ಇತ್ಯರ್ಥವಾಗುವವರೆಗೆ ಮೊದಲಿನಂತೆ ಯಥಾ ಸ್ಥಿತಿಯಲ್ಲಿ ಎಪಿಎಂಸಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುವಂತೆ ವಿನಂತಿಸಿದರು.

ಯಥಾ ಸ್ಥಿತಿಯಲ್ಲಿ ಎಪಿಎಂಸಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುವ ಬಗ್ಗೆ ಎಲ್ಲ ರೈತರು ಮತ್ತು ದಲಾಲರು ಸಮ್ಮತಿ ಸೂಚಿಸಿದ್ದರಿಂದ ತಹಶೀಲ್ದಾರ್ ಸತೀಶ್ ಗೌಡ ಅವರು ಯಥಾ ಸ್ಥಿತಿ ಕಾಯ್ದುಕೊಂಡು ವ್ಯಾಪಾರ ನಡೆಸಲು ಅನುವು ಮಾಡಿಕೊಡುವಂತೆ ಎಪಿಎಂಸಿ ಕಾರ್ಯದರ್ಶಿಯವರಿಗೆ ಸೂಚಿಸಿದರು. ಬಳಿಕ ಎಪಿಎಂಸಿಯಲ್ಲಿ ರೈತರು ಮತ್ತು ದಲಾಲರು ವ್ಯಾಪಾರ ಪ್ರಕ್ರಿಯೆ ನಡೆಸಿದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Exit mobile version