Important
Trending

ಸ್ವರ್ಣವಲ್ಲೀ ಶ್ರೀಗಳಿಂದ ನೂತನ ಶಿಷ್ಯ ಸ್ವೀಕಾರ : ಯಲ್ಲಾಪುರದ ವಿದ್ವಾನ್ ನಾಗರಾಜ್ ಭಟ್ಟ ಅವರಿಗೆ ಒಲಿದ ಶ್ರೀಗಳ ಆಶೀರ್ವಾದ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚರ‍್ಯ ಶ್ರೀಗಂಗಾಧರೇoದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನೂತನ ಶಿಷ್ಯರ ಸ್ವೀಕಾರಕ್ಕೆ ತೀರ್ಮಾನಿಸಿ, ನೇಮಕಗೊಳಿಸಿದ್ದಾರೆ. ಆಧ್ಯಾತ್ಮ, ಧಾರ್ಮಿಕ, ಸಮಾಜಮುಖಿ, ಶೈಕ್ಷಣಿಕ, ಪರಿಸರದ ಸಂರಕ್ಷಣೆ, ಭಗವದ್ಗೀತಾ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಸ್ವರ್ಣವಲ್ಲೀ ಶ್ರೀಗಳ ಅಪೇಕ್ಷೆ ಹಾಗೂ ಸೂಚನೆಯಂತೆ ಕಳೆದ ಹಲವು ವರ್ಷಗಳಿಂದ ಶಿಷ್ಯರ ಹುಡುಕಾಟ ನಡೆದಿತ್ತು. ಜೋತಿಷ್ಯರ ಸಲಹೆ, ಸೂಚನೆ ಪಡೆದು ಯಲ್ಲಾಪುರ ತಾಲೂಕಿನ ಈರಾಪುರ ತಾಲೂಕಿನ ಗಂಗೇಮನೆಯ ವಿದ್ವಾನ್ ನಾಗರಾಜ್ ಭಟ್ಟ ಅವರನ್ನು ಶ್ರೀಗಳ ಶಿಷ್ಯರಾಗಿ ಸ್ವೀಕರಿಸಲು ತೀರ್ಮಾನಿಸಲಾಗಿದೆ.

ಸ್ವರ್ಣವಲ್ಲೀ ಮಠದಲ್ಲೇ ಕಳೆದ ಒಂದು ದಶಕಗಳಿಂದ ವೇದಾಧ್ಯಯನ ನಡೆಸಿ, ಇದೀಗ ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿರುವ 23ರ ವಯೋಮಾನದ ನಾಗರಾಜ್ ಭಟ್ಟ ಅವರು ಗಣಪತಿ ಭಟ್ಟ ಹಾಗೂ ಭುವನೇಶ್ವರಿ ಅವರ ಪ್ರಥಮ ಪುತ್ರರು. ನಾಗರಾಜ್ ಭಟ್ಟ ಅವರನ್ನು ಶ್ರೀಗಳ ಶಿಷ್ಯರನ್ನಾಗಿ ಸ್ವೀಕರಿಸಲು ಕಳೆದ ಡಿಸೆಂಬರ್ 25ರಂದು ನಡೆದ ಆಡಳಿತ ಮಂಡಳಿ ಸಭೆ ಕೂಡ ನಿರ್ಣಯಿಸಿ ಸಮ್ಮತಿಸಿದೆ.

ಮೂಲತಃ ಈರಾಪುರ ಗಂಗೆಮನೆಯ ಕೃಷಿ ಕುಟುಂಬದ ನಾಗರಾಜ ಭಟ್ಟ ಅವರಿಗೆ ಮೊದಲಿಂದಲೂ ಆಧ್ಯಾತ್ಮದ ಆಸಕ್ತಿ ಇತ್ತು. ಸ್ವರ್ಣವಲ್ಲೀ ಮಠದಲ್ಲೀ ಅತ್ಯಂತ ಆಸ್ಥೆಯಿಂದ ವೇದಾಧ್ಯಯನ, ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿದ್ದು, ನಾಗರಾಜ ಭಟ್ಟ ಅವರ ಕುಂಡಲಿಯನ್ನೂ ಮೂರು ಪ್ರಮುಖ ಜೋತಿಷ್ಯ ರತ್ನರ ಮೂಲಕ ಪರಿಶೀಲಿಸಿ ಒಪ್ಪಿಗೆ ಪಡೆದು ನೇಮಕ ಮಾಡಲಾಗಿದೆ. ನಾಗರಾಜ್ ಭಟ್ಟ ಅವರ ಸಹೋದರ ಉಡುಪಿಯಲ್ಲಿ ಜೋತಿಷ್ಯ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದಾರೆ.

ಶಿಷ್ಯ ಸ್ವೀಕಾರದ ಕಾರ್ಯಕ್ರಮ ಮಾಘ ಶುದ್ಧ ತ್ರಯೋದಶಿ ಫೆ 22ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button