ಕಾರವಾರದ ಬಳಿ ಕಂದಕಕ್ಕೆ ಉರುಳಿದ ಬಸ್: ಅದೃಷ್ಟವಶಾತ್ ಪಾರಾದ 30 ಕ್ಕೂ ಹೆಚ್ಚು ಕಾರ್ಮಿಕರು

ಕಾರವಾರ: ನೌಕಾನೆಲೆಗೆ ಗುತ್ತಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಲುವೆಗೆ ಬಿದ್ದು ಚಾಲಕ ಸೇರಿ ಹಲವರು ಗಾಯಗೊಂಡಿದ್ದು ಅದೃಷ್ಟವಶಾತ್ ಬಸ್ ನಲ್ಲಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾದ ಘಟನೆ ಕಾರವಾರದ ಬಳಿ ನಡೆದಿದೆ.

ಕಾರವಾರದಿಂದ ನೌಕಾನೆಲೆಗೆ ಕಾರ್ಮಿಕರನ್ನು ಕೊಂಡೋಯ್ಯುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಸಂಕ್ರುಭಾಗ್ ಘಟ್ಟದಲ್ಲಿ ಆಳೆತ್ತರದ ಕಾಲುವೆಗೆ ಇಳಿದಿದೆ. ಮಳೆಯಿಂದ ಸ್ಕಿಡ್ ಆಗಿ ಘಟನೆ ಸಂಭವಿಸಿದೆ ಎನ್ನಲಾಗುತ್ತಿದ್ದು ಘಟನೆಯಲ್ಲಿ ಚಾಲಕ ಬಡೇಸಾಬ್ ಮುಜಾವರ್ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಸುಮಾರು 5-6 ಕಾರ್ಮಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ 30ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಕಾರವಾರ ಬಸ್ ಡಿಪೋ ಮ್ಯಾನೇಜರ್, ಕಾರವಾರ ಗ್ರಾಮೀಣ ಠಾಣಾ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಎರಡು ದಿನಗಳ ಹಿಂದಷ್ಟೇ ಕಾರವಾರದ ಹಬ್ಬುವಾಡದಲ್ಲಿ ಎಕ್ಸೆಲ್ ತುಂಡಾದ ಪರಿಣಾಮ 50ಕ್ಕೂ ಅಧಿಕ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಅದೃಷ್ಟವಶಾತ್ ಸ್ಥಳೀಯರು ಬಸ್ ಹಿಡಿದು ನಿಲ್ಲಿಸಿದ್ದರಿಂದ ಅಪಾಯ ತಪ್ಪಿತ್ತು.

ವಿಸ್ಮಯ ನ್ಯೂಸ್, ಕಾರವಾರ

Exit mobile version