ಹೆದ್ದಾರಿಯಲ್ಲಿ ಮಣ್ಣಿನ ಧರೆಗೆ ವಾಲಿದ ಆಟೋ ಗ್ಯಾಸ್ ಹೊತ್ತು ತಂದಿದ್ದ ಟ್ಯಾಂಕರ್ : ಸರಿಯಾಗದ ಹೆದ್ದಾರಿ ಕಾಮಗಾರಿ: ಮತ್ತೆಷ್ಟು ವಾಹನ ಬೀಳಬೇಕೋ ?
ಅಂಕೋಲಾ: ಗಂಗಾವಳಿ ಬ್ರಿಜ್ ಸಮೀಪ ಕೊಡಸನಿ ಕ್ರಾಸ್ ಬಳಿ ಆಟೋ ಗ್ಯಾಸ್ ( ಸಿ ಎನ್ ಜಿ ) ಟ್ಯಾಂಕರ ಒಂದು ಚಾಲಕನ ನಿಯಂತ್ರಣ ತಪ್ಪಿ,ಚತುಷ್ಪಥ ಹೆದ್ದಾರಿ ಮಧ್ಯದ ಮಣ್ಣಿನ ಧರೆಗೆ ವಾಲಿಬಿದ್ದ ಘಟನೆ ನಡೆದಿದೆ.ಐ ಆರ್ ಬಿ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ
ಈ ಪ್ರದೇಶದಲ್ಲಿ ಪದೇ ಪದೇ ರಸ್ತೆ ಅವಘಡಗಳು ಸಂಭವಿಸುತ್ತಲೇ ಇದ್ದರೂ, ಹೆದ್ದಾರಿ ಗುತ್ತಿಗೆದಾರ ಐ ಆರ್ ಬಿ ಕಂಪನಿಯವರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸೂಚಿಸಿದಾಗ, ನಾಮಕಾ ವಾಸ್ತೆ ಅರೆಬರೆ ಡಾಂಬರಿಕರಣ ಮತ್ತಿತರ ಕಾಮಗಾರಿ ನಡೆಸಿ ಕಣ್ಣೊರೆಸುವ ತಂತ್ರ ನಡೆಸಿದಂತಿದೆ.
ಈಗಲೂ ಈ ಅಪಾಯಕಾರಿ ತಿರುವಿನಲ್ಲಿ ಅರೆ-ಬರೆ ಡಾಂಬರ್ ಕಾಮಗಾರಿ,ಮತ್ತಿತರ ಕಾರಣಗಳಿಂದ ವಾಹನಗಳು ನಿಯಂತ್ರಣ ತಪ್ಪುವುದು ಹೆಚ್ಚುತ್ತಲೇ ಇದ್ದು ಇನ್ನೆಷ್ಟು ಅವಫಡಗಳು ಸಂಭವಿಸಲಿದೆಯೋ ಎಂದು ಸ್ಥಳೀಯರು,ಮತ್ತು ರಸ್ತೆ ಸಂಚಾರಿಗಳು ಐ ಆರ್ ಬಿ ವಿರುದ್ಧ ಹಿಡಿ ಶಾಪ ಹಾಕುವಂತಾಗಿದೆ.ಈಗಲಾದರೂ ಸಂಬಂಧಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಖಡಕ್ ಸೂಚನೆ ನೀಡಿ ನಾಗರಿಕ ಸುರಕ್ಷತೆಗೆ ಒತ್ತು ನೀಡುವರೇ ಕಾದುನೋಡಬೇಕಿದೆ.
ಮಂಗಳೂರಿನಿಂದ ಬಂದಿದ್ದ ಇದೇ ಟ್ಯಾಂಕರ್ ಹೊನ್ನಾವರದಲ್ಲಿ ಅಲ್ಪ ಪ್ರಮಾಣದ ಸಿ ಎನ್ ಜಿ (ಆಟೋ ಗ್ಯಾಸ್) ಖಾಲಿ ಮಾಡಿ, ನಂತರ ಅಂಕೋಲಾ ಕಡೆ ಸಾಗಿಸುತ್ತಿರುವಾಗ ದಾರಿ ಮಧ್ಯೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಟ್ಯಾಂಕರ್ ಚಾಲಕನನ್ನು 1033 ಹೆದ್ದಾರಿ ಸುರಕ್ಷತಾ ಅಂಬುಲೆನ್ಸ್ ಮೂಲಕ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಅದೃಷ್ಟ ವಶಾತ್ ಗ್ಯಾಸ್ ಸೋರಿಕೆ ಮತ್ತಿತರ ಅಪಾಯವಿಲ್ಲದೇ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಪಿ ಎಸ್ ಐ ಗಳಾದ ಉದ್ದಪ್ಪ ಧರೆಪ್ಪನವರ,ಸುನೀಲ್ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು, 112 ತುರ್ತು ವಾಹನ , ಹೆದ್ದಾರಿ ಗಸ್ತು ವಾಹನ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ