ಅಂಕೋಲಾ: ಸಾಗರದಲ್ಲಿ ಮೀನುಗಾರಿಕೆ ನಡೆಸಿ ಜೀವನ ನಡೆಸಬೇಕಿದ್ದ ಮೀಮಗಾರ ಯುವಕ ನೋರ್ವ,ಸಾಲದ ಸುಳಿಯಿಂದ ಹೇಗೆ ಪಾರಾಗುವುದು ಎಂಬುದನ್ನೇ ಮನಸ್ಸಿಗೆ ಹಚ್ಚಿಕೊಂಡು ಪಿನಾಯಿಲ್ ಸೇವಿಸಿ,ಅಸ್ವಸ್ಥಗೊಂಡು, ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟ ಘಟನೆ ತಾಲೂಕಿನ ಮಂಜಗುಣಿಯಲ್ಲಿ ಸಂಭವಿಸಿದೆ.
ಮಂಜಗುಣಿ ನಿವಾಸಿ ಉಲ್ಲಾಸ ನಾಗೇಶ ತಾಂಡೇಲ್ (44) ಮೃತ ದುರ್ದೈವಿಯಾಗಿದ್ದಾನೆ. ಪ್ರತಿ ವರ್ಷ ಸಾಲ ಮಾಡಿ ಬೋಟು ನಡೆಸುತ್ತಿದ್ದ ಈತ ಈ ವರ್ಷ ಸಾಕಷ್ಟು ಮೀನು ದೊರಕದ ಕಾರಣ ಸಾಲ ತೀರಿಸುವುದು ಹೇಗೆ ಎಂದು ಮನಸ್ಸಿಗೆ ಹಚ್ಚಿಕೊಂಡು ಅಥವಾ ಬೇರೆ ಯಾವುದೋ ಕಾರಣದಿಂದ ಜನವರಿ 31 ರಂದು ಪಿನಾಯಿಲ್ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದು ಆತನನ್ನು ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದ್ದು, ಪಿ.ಎಸ್. ಐ ಸುನೀಲ ಹುಲ್ಲೋಳ್ಳಿ ಪ್ರಕರಣ ದಾಖಲಿಸಿದ್ದಾರೆ. ಬ್ಯಾಂಕ್, ಕೈಗಡ ಮತ್ತಿತರ ಸಾಲದ ಸುಳಿಯಲ್ಲಿ ಸಿಲುಕಿ ಈತ ಮನನೊಂದು ಸಾವಿನ ಮನೆಯತ್ತ ಹೆಜ್ಜೆ ಹಾಕಲು ನಿರ್ಧರಿಸಿದನೇ ? ಸಾಲ ನೀಡಿದವರಿಂದ ಒತ್ತಡ, ಕಿರುಕಳ ಇದ್ದಿರಲೂ ಬಹುದು ಎನ್ನುವ ಮಾತು ಅಲ್ಲಲ್ಲಿ ಕೇಳಿ ಬಂದಿದ್ದು, ಮೃದು ಮನಸ್ಸಿನ, ಊರಿನ ಹಾಗೂ ಸುತ್ತ ಮುತ್ತಲಿನ ಇತರರೊಂದಿಗೆ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದ ಉಲ್ಲಾಸ ತಾಂಡೇಲ ಅಕಾಲಿಕ ನಿಧನಕ್ಕೆ, ಆತನ ಕುಟುಂಬದ ಆಪ್ತರು, ಹಿತೈಷಿಗಳು ಕಂಬನಿ ಮಿಡಿದಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ