Big News
Trending

15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮಾದಕ ದ್ರವ್ಯ ನಾಶ: ಪೋಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಭಟ್ಕಳ, ಶಿರಸಿ ದಾಂಡೇಲಿ ಉಪ ವಿಭಾಗ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡಿರುವ ಒಟ್ಟು 34 ಪ್ರಕರಣಗಳಲ್ಲಿಯ ಗಾಂಜಾ, ಚರಸ್, ಗಾಂಜಾ ಗಿಡ ಸೇರಿದಂತೆ ಅಂದಾಜು ರೂ 15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮಾದಕ ದ್ರವ್ಯವನ್ನು ಪೋಲೀಸ್ ವರಿಷ್ಠಾಧಿಕಾರಿ ವಿಷ್ಣು ವರ್ಧನ ಮಾರ್ಗದರ್ಶನದಲ್ಲಿ ಅಂಕೋಲಾದಲ್ಲಿ ನಾಶಪಡಿಸಲಾಯಿತು.

ಉತ್ತರ ಕನ್ನಡ ಜಿಲ್ಲಾ ಪೋಲಿಸ್ ಕಛೇರಿ ವ್ಯಾಪ್ತಿಯ ಕಾರವಾರ, ಶಿರಸಿ, ದಾಂಡೇಲಿ ಮತ್ತು ಭಟ್ಕಳ ಸೇರಿ 4 ಉಪ ವಿಭಾಗಗಳ ವಿವಿಧ ಪೊಲಿಸ್ ಠಾಣೆಗಳಲ್ಲಿ ಒಟ್ಟೂ 34 ಬೇರೆ ಬೇರೆ ಪ್ರಕರಣಗಳಲ್ಲಿ ವಶ ಪಡಿಸಿಕೊಂಡ ಮಾದಕ ದ್ರವ್ಯಗಳನ್ನು, ಅಂಕೋಲಾ ತಾಲೂಕಿನ ಬೊಗ್ರಿಬೈಲ್ ನ ಘನ ತ್ಯಾಜ್ಯ ವಿಲೇವಾರಿ ಘಟಕದ ಅಗ್ನಿ ಸ್ಥಾವರದಲ್ಲಿ ಹಾಕಿ ಸುಟ್ಟು ನಾಶ ಪಡಿಸಲಾಯಿತು.

ನ್ಯಾಯಾಲಯದ ಆದೇಶದಂತೆ ಜಪ್ತಿ ಪಡಿಸಿಕೊಂಡ ಮಾದಕ ದ್ರವ್ಯಗಳನ್ನು ನಾಶ ಪಡಿಸಲು ಜಿಲ್ಲಾ ಮಾದಕ ದ್ರವ್ಯ ವಿಲೇವಾರಿ ಸಮಿತಿ ಮುಂದೆ ಹಾಜರು ಪಡಿಸಿ, ವಿಲೇವಾರಿ ಮಾಡಲು ನ್ಯಾಯಾಲಯದ ಅನುಮತಿ ಪಡೆಯಲಾಗಿತ್ತು. ವಿವಿಧ ಠಾಣಾ ವ್ಯಾಪ್ತಿಯ ಒಟ್ಟು 32 ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 14 ಕೆ.ಜಿ 221 ಗ್ರಾಂ ತೂಕದ ಗಾಂಜಾ ನಾಶಪಡಿಸಲಾಗಿದ್ದು ಇದರ ಅಂದಾಜು ಮೌಲ್ಯ 5 ಲಕ್ಷದ ಎರಡು ನೂರು ರೂ ಆಗಿರುತ್ತದೆ. ಪ್ರತ್ಯೇಕ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು 573 ಗ್ರಾಂ ಒಟ್ಟೂ ತೂಕದ 48 ಗಾಂಜಾ ಗಿಡಗಳನ್ನು ನಾಶಪಡಿಸಲಾಯಿತು.

ಇವುಗಳ ಅಂದಾಜು ಮೌಲ್ಯ 10 ಸಾವಿರ ರೂಪಾಯಿ ಇರುತ್ತದೆ ಪ್ರತ್ಯೇಕ ಇನ್ನೊಂದು ಪ್ರಕರಣದಲ್ಲಿ 1 ಕೆಜಿ 501 ಗ್ರಾಂ ತೂಕದ ಚರಸ್ ನಾಶಪಡಿಸಲಾಗಿದ್ದು, ಅದರ ಮೌಲ್ಯ 10 ಲಕ್ಷ ರೂಪಾಯಿ ಇರುತ್ತದೆ. ಒಟ್ಟಾರೆಯಾಗಿ 34 ಪ್ರಕರಣಗಳಿಂದ ಗಾಂಜಾ ಮತ್ತು ಗಾಂಜಾ ಗಿಡಗಳು ಮತ್ತು ಚರಸ್ ಸೇರಿ ಒಟ್ಟೂ ಅಂದಾಜು 15ಲಕ್ಷ 16 ಸಾವಿರದ 200 ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಅಂಕೋಲಾ ತಾಲೂಕಿನ ಬೊಗ್ರಿ ಬೈಲ್ ನಲ್ಲಿರುವ ಕೆನರಾ ಐ ಎಮ್ ಎ ಕಾನ್ ಟ್ರೀಟ್ಮೆಂಟ್ ಫೆಸಿಲಿಟಿ ಇವರ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು. ಎಸ್. ಪಿ ವಿಷ್ಣುವರ್ಧನ್ ಸ್ಥಳದಲ್ಲಿ ಹಾಜರಿದ್ದು ಮಾರ್ಗದರ್ಶನ ಮಾಡಿದರು,ವಿಲೇವಾರಿ ಸಮಿತಿ ಸದಸ್ಯರ ಸಮಕ್ಷಮ ಗಾಂಜಾ ಮತ್ತು ಗಾಂಜಾ ಗಿಡಗಳು ಮತ್ತು ಚರಸ್ ನ್ನು ಅಗ್ನಿಯಲ್ಲಿ ದಹಿಸಿ ನಾಶ ಪಡಿಸಲಾಯಿತು.

ಎಡಿಶನಲ್ ಎಸ್ಪಿ ಎಂ ಜಗದೀಶ , ಡಿವೈಎಸ್ಪಿ ಗಳಾದ ವೆಲೆಂಟೆನ್ ಡಿಸೋಜ ಕಾರವಾರ, ಮಹೇಶ ಎಂ ಕೆ ಭಟ್ಕಳ, ಕೆ. ಎಲ್ ಗಣೇಶ್ ಸಿರ್ಸಿ, ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಪಿಐಗಳಾದ ಅಂಕೋಲಾ ಠಾಣೆಯ ಶ್ರೀಕಾಂತ ತೋಟಗಿ, ಸಿ ಇ ಎನ್ ಠಾಣೆಯ ರಂಗನಾಥ ನೀಲಮ್ಮನವರ, ಸಿರ್ಸಿ ಠಾಣೆಯ ರಾಮಚಂದ್ರ ನಾಯಕ, ಭಟ್ಕಳದ ಶಿವಾನಂದ ನಾವದಗಿ , ಆಯಾ ಉಪ ವಿಭಾಗ ವ್ಯಾಪ್ತಿಯ ಕೆಲ ಪಿಎಸ್ಐ ಗಳು,ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗಳು, ವಿಧಿ ವಿಜ್ಞಾನ ಪರಿಣಿತರು, ಸಂಬಂಧಿತ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮಾತನಾಡಿ,ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಒಟ್ಟು 34 ಪ್ರಕರಣಗಳಲ್ಲಿಯ ಗಾಂಜಾ,ಮತ್ತು ಗಾಂಜಾ ಗಿಡ, ಚರಸ್ ನ ಪ್ರಮಾಣದ ಕುರಿತು ಮಾಹಿತಿ ನೀಡಿ,ಅವುಗಳ ಒಟ್ಟೂ ಅಂದಾಜು ಮೌಲ್ಯ 15 ಲಕ್ಷ ಎಂದು ತಿಳಿಸಿ,ಮಾದಕ ವಸ್ತುಗಳ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾಚರಣೆ ಮುಂದುವರೆಸಲಿದ್ದು,ಮಾದಕ ವಸ್ತು ಸೇವಿಸುವವರ ಮೇಲೆಯೂ ಪ್ರಕರಣ ದಾಖಲಿಸಲಿಸುತ್ತಿದ್ದೇವೆ ಎಂದರು.

ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾದಕ ಜಾಲ ದೊಳಗೆ ಸಿಲುಕಿ ತಮ್ಮ ಜೀವ ಹಾಗೂ ಜೀವನವನ್ನು ಕಳೆದುಕೊಳ್ಳುತ್ತಿತಿರುವುದು ಸಮಾಜಕ್ಕೆ ಮಾರಕವಾಗಿದ್ದು,ಯುವಜನತೆ,ಅವರ ಪಾಲಕರು ಹಾಗೂ ಸಂಬಂಧಿತ ಇತರರೆಲ್ಲರೂ ಮುನ್ನೆಚ್ಚರಿಕೆ ಹಾಗೂ ಜಾಗೃತಿ ತೆಗೆದುಕೊಳ್ಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button