ಕಾರವಾರ: ಸಿದ್ದಿ ಸಮುದಾಯ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭಾಗದಲ್ಲಿ ಬರುವ ವಿಶಿಷ್ಟ ಬುಡಕಟ್ಟು ಸಮುದಾಯ. ಆಫ್ರಿಕಾ ದೇಶದವರ ರೀತಿಯಲ್ಲಿ ಕಾಣಬರುವ ಸಿದ್ದಿ ಸಮುದಾಯದವರ ಆಚರಣೆ, ಸಂಸ್ಕೃತಿ, ಆಹಾರ ಪದ್ದತಿ, ಜೀವನ ಶೈಲಿ ಸಂಪೂರ್ಣ ವಿಭಿನ್ನ. ಅರಣ್ಯವೇ ತಮ್ಮ ಬದುಕು ಎಂದು ಕಂಡುಕೊoಡಿರುವ ಸಿದ್ದಿ ಸಮುದಾಯದ ಈ ಎಲ್ಲ ಆಚರಣೆಯನ್ನು ಪ್ರವಾಸಿಗರಿಗೆ ತಿಳಿಸುವ ಹಾಗೂ ಸಿದ್ದಿ ಸಮುದಾಯದ ಮಹಿಳೆಯರ ಜೀವನೋಪಾಯಕ್ಕಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವಿಭಿನ್ನ ಪ್ರಯತ್ನಕ್ಕೆ ಇಳಿದಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಸಿದ್ದಿ ಸಮುದಾಯ ಎಂದರೆ ನೆನಪಾಗುವುದು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ. ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಮುಂಡಗೋಡ, ಅಂಕೋಲಾ, ಭಾಗದಲ್ಲಿ ಹೆಚ್ಚಾಗಿ ಕಾಣಬರುವ ಸಿದ್ದಿ ಸಮುದಾಯ ಅರಣ್ಯ ದೊಂದಿಗೆ ತಮ್ಮ ಜೀವನವನ್ನು ಕಂಡು ಕೊಂಡ ಸಮುದಾಯ. ನೋಡಲು ಆಫ್ರೀಕಾ ದೇಶದವರ ರೀತಿ ಕಂಡು ಬರುವ ಸಿದ್ದಿ ಸಮುದಾಯ ಬುಡಕಟ್ಟು ಸಮಾಜಕ್ಕೆ ಸೇರಿದ್ದು ಈ ಸಮುದಾಯದ ಆಚರಣೆಗಳು, ಆಹಾರ ಪದ್ದತಿ, ಸಂಸ್ಕೃತಿ, ಜೀವನ ಶೈಲಿ ಸಂಪೂರ್ಣ ವಿಭಿನ್ನ.
ಸಿದ್ದಿ ಸಮುದಾಯದ ಈ ವಿಭಿನ್ನ ಆಚರಣೆಗಳು ಆಕರ್ಷಿತರಾಗಿ ಸಮುದಾಯದ ಹಲವರನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಬುಡಕಟ್ಟು ಸಮುದಾಯ ಮಹಿಳೆಯವರ ಜೀವನೋಪಾಯಕ್ಕಾಗಿ ಹಾಗೂ ಸಿದ್ದಿ ಸಮುದಾಯದ ಸಂಸ್ಕೃತಿ ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವಿಭಿನ್ನ ಪ್ರಯತ್ನಕ್ಕೆ ಇಳಿದಿದೆ. ಜಿಲ್ಲಾ ಪಂಚಾಯತ್ ಅಡಿ ಬರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಹಾಗೂ ಸಂಜೀವಿನಿ ಯೋಜನೆಯಡಿ ಸಿದ್ದಿ ಹೋಂ ಸ್ಟೇ ಪ್ರಾರಂಭಿಸಲಾಗಿದೆ.
ಯಲ್ಲಾಪುರ ತಾಲೂಕಿನ ಲಿಂಗದಬೈಲು ಎನ್ನುವ ಗ್ರಾಮದಲ್ಲಿ ಸಿದ್ದಿ ಸಮುದಾಯದ ಸ್ವಸಹಾಯ ಸಂಘದ ಮಹಿಳೆಯರಿಗಾಗಿಯೇ ಹೋಂ ಸ್ಟೇ ನಿರ್ಮಿಸಿದ್ದು ಈ ಹೋಂ ಸ್ಟೇ ನಲ್ಲಿ ಸಿದ್ದಿ ಸಮುದಾಯದ ಸಂಸ್ಕೃತಿಯನ್ನು ಬರುವ ಪ್ರವಾಸಿಗರಿಗೆ ತಿಳಿಸುವ ಜೊತೆಗೆ ಅವರ ಆಚರಣೆ, ಜೀವನ ಪದ್ದತಿಯ ಬಗ್ಗೆ ತಿಳಿಸುವ ಜೊತೆಗೆ ಪ್ರವಾಸಿಗರನ್ನು ಸಹ ಆಕರ್ಷಿಸಿ ಸಿದ್ದಿ ಸಮುದಾಯದ ಮಹಿಳೆಯರಿಗೆ ಆದಾಯ ಮಾಡಿಕೊಡುವ ಕೆಲಸಕ್ಕೆ ಜಿಲ್ಲಾ ಪಂಚಾಯತ್ ಮುಂದಾಗಿದೆ.
ಇನ್ನು ಲಿಂಗದ ಬೈಲು ಗ್ರಾಮದಲ್ಲಿ ಪ್ರಾರಂಭವಾಗಿರುವ ಹೋಂ ಸ್ಟೇ ಬೇರೆಲ್ಲಾ ಹೋಂ ಸ್ಟೇ ಗಳಿಗಿಂತ ವಿಭಿನ್ನವಾಗಿದೆ. ಈ ಹೋಂ ಸ್ಟೇಗೆ ಬರುವ ಪ್ರವಾಸಿಗರಿಗೆ ಸಿದ್ದಿ ಸಮುದಾಯದ ಮಹಿಳೆಯವರು ತಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತವನ್ನ ಮೊದಲಿಗೆ ಮಾಡಿಕೊಳ್ಳುತ್ತಾರೆ. ಇದಾದ ನಂತರ ಸಿದ್ದಿ ಸಮುದಾಯದವರ ಆಹಾರ ಪದ್ದತಿಯಲ್ಲಿಯೇ ಊಟೋಪಚಾರ ಮಾಡಲಾಗುತ್ತದೆ. ಇದಾದ ನಂತರ ಸಮುದಾಯದ ಪರಿಚಯ ಮಾಡಿಕೊಟ್ಟು ನಂತರ ಕಾಡಿನಲ್ಲಿ ಸಂಚರಿಸುವ ಮೂಲಕ ಪಕ್ಷಿ ವೀಕ್ಷಣೆ, ಪ್ರಾಣಿ ವೀಕ್ಷಣೆ, ಕಾಡಿನ ಜೊತೆ ಸಿದ್ದಿಗಳ ಒಡನಾಟದ ಪರಿಚಯ ಮಾಡಿಕೊಡಲಾಗುತ್ತದೆ.
ಇದಲ್ಲದೇ ಕಾಡಿನಲ್ಲಿರುವ ಔಷದಿ ಸಸ್ಯಗಳ, ಗಿಡಮರಗಳ ಪರಿಚಯ, ಮಾಡಿಕೊಡಲಾಗುತ್ತದೆ. ರಾತ್ರಿ ವೇಳೆ ಸಮುದಾಯದ ಮಹಿಳೆಯರು ಡಮಾಮಿ ನೃತ್ಯ ಮಾಡುವ ಮೂಲಕ ಬಂದ ಪ್ರವಾಸಿಗರನ್ನ ರಂಜಿಸುವ ಕೆಲಸಕ್ಕೆ ಮುಂದಾಗಿದ್ದು ಪ್ರವಾಸಿಗರು ಸಿದ್ದಿ ಸಮುದಾಯದ ಬಗ್ಗೆ ತಿಳಿಯಲು ಈ ಹೋಂ ಸ್ಟೇಗೆ ಬನ್ನಿ ಎನ್ನುತ್ತಾರೆ ಸಮುದಾಯದ ಮಹಿಳೆಯರು.
ಇನ್ನು ಸಿದ್ದಿ ಸಮುದಾಯದ ಮಹಿಳೆಯರ ಜೀವನೋಪಾಯಕ್ಕಾಗಿ ಲಿಂಗದ ಬೈಲು ಗ್ರಾಮದಲ್ಲಿ ಮಾಡಿರುವ ಈ ಹೋಂ ಸ್ಟೇ ಯಲ್ಲಾಪುರ ಪಟ್ಟಣದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ. ಯಲ್ಲಾಪುರದಿಂದ ಬಸ್ಸಿನ ವ್ಯವಸ್ಥೆ ಸಹ ಇದ್ದು ಡಮಾಮಿ ಎಂದು ಹೋಂ ಸ್ಟೇಗೆ ಹೆಸರನ್ನ ಇಡಲಾಗಿದೆ. ಒಟ್ಟಿನಲ್ಲಿ ಅತಿ ಹಿಂದುಳಿದ ಬುಡಕಟ್ಟು ಸಮುದಾಯದ ಸಿದ್ದಿ ಮಹಿಳೆಯರ ಜೀವನೋಪಾಯಕ್ಕಾಗಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮಾಡಿರುವ ವಿಭಿನ್ನ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದು. ಈ ಪ್ರಯತ್ನ ಯಶಸ್ವಿಯಾಗಿ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಿದ್ದಿ ಸಮುದಾಯ ಇಂತಹ ಅನೇಕ ಹೋಂ ಸ್ಟೇಗಳನ್ನ ಪ್ರಾರಂಭಿಸಿ ಜಿಲ್ಲೆಯ ಪ್ರವಾಸೋದ್ಯಮ ಸಹ ಬೆಳವಣಿಗೆಗೆ ಕಾರಣವಾಗಲಿ ಎನ್ನುವುದು ನಮ್ಮ ಆಶಯ.
ವಿಸ್ಮಯ ನ್ಯೂಸ್, ಕಾರವಾರ