Big News
Trending

ಸರ್ಕಾರಿ ಶಾಲೆಯ ತೋಟವನ್ನು ಹಾಳುಮಾಡಿ ವಿಕೃತಿ ಮೆರೆದ ಕಡಿಗೇಡಿಗಳು

ಅಂಕೋಲಾ: ತಾಲೂಕಿನ ಅವರ್ಸಾ ದಂಡೇಭಾಗದ ಸ.ಹಿ.ಪ್ರಾ ಶಾಲೆಯಲ್ಲಿ ಆಗಾಗ ಕಿಡಿಗೇಡಿಗಳ ಕೃತ್ಯ ಕಂಡು ಬರುತ್ತಿದ್ದು, ಇತ್ತೀಚೆಗೆ ಶಾಲೆಯ ತೋಟವನ್ನು ಹಾಳುಗೆಡವಿ ವಿಕೃತಿ ಮೆರೆದಿದ್ದಾರೆ. ಈ ಕುರಿತು ಎಸ್ ಡಿ ಎಂ ಸಿ ಅಧ್ಯಕ್ಷ ರತ್ನಾಕರ ನಾಯ್ಕ ಮತ್ತಿತರ ಸ್ಥಳೀಯ ಪ್ರಮುಖರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಶಾಲೆ ಹಿಂದಿನಿಂದಲೂ ಪಠ್ಯ ಮತ್ತು ಪಠ್ಯೇ ತರ ಚಟುವಟಿಕೆಗಳಲ್ಲಿ ಸದಾ ಮುಂದಿದ್ದು, ತಾಲೂಕಿನ ಉತ್ತಮ ಶಾಲೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

ಶಾಲೆ ದೇಗುಲ ಎಂಬ ಮಾತಿದ್ದು, ಶಾಲಾ ಆವರಣದಲ್ಲಿ ಬಾಳೆ, ಅಡಿಕೆ ಮತ್ತಿತರ ಸಸಿಗಳನ್ನು ನೆಟ್ಟು, ಸುಂದರ ತೋಟ ನಿರ್ಮಾಣ ಮಾಡುವ ಕನಸು ಹೊಂದಲಾಗಿತ್ತು . ಅದಕ್ಕೆ ಪೂರಕವಾಗಿ ಗಿಡಗಳಿಗೆ ನೀರುಣಿಸಲು ಪೈಪ್ ಲೈನ್ ವ್ಯವಸ್ಥೆ ಸಹ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಯಾರೋ ಕಿಡಿಗೇಡಿಗಳು, ಶಾಲಾವಧಿ ಮುಕ್ತಾಯವಾದೊಡನೆ ಇಲ್ಲವೇ ರಜಾ ದಿನದಲ್ಲಿ ಶಾಲೆಯ ಆವರಣದಲ್ಲಿ ಅಕ್ರಮವಾಗಿ ನುಗ್ಗಿ, ತೋಟದ ಕೆಲ ಗಿಡಗಳನ್ನು ಕಿತ್ತು ನಾಶಪಡಿಸಿ, ತಮ್ಮ ವಿಕೃತಿ ಮೆರೆದಿರುವುದಲ್ಲದೇ ನೀರಿನ ಪೈಪ್ ಲೈನಗಳನ್ನು ಹಾಳುಗೆಡವಿದ್ದಾರೆ. ಈ ಹಿಂದೆ ಇದೇ ಶಾಲೆಯಲ್ಲಿ ಕೆಲವರು ಅಶ್ಲೀಲ ಪದಗಳನ್ನು ಬರೆದದ್ದು ಇದೆ.

ಕಿಡಿಗೇಡಿಗಳ ಇಂತಹ ಕೃತ್ಯ ಬಾಲ ಮಕ್ಕಳ ಮನಸ್ಸಿನ ಮೇಲೆ ತೀವೃ ಪರಿಣಾಮ ಬೀರುವ ಸಾಧ್ಯತೆ ಇದ್ದು,ಇಂತಹ ಘಟನೆಗಳು ಪದೇಪದೇ ಮುಂದುವರಿಯುತ್ತಿರುವುದರಿಂದ ವಿದ್ಯಾರ್ಥಿ ಪಾಲಕರು ಪೋಷಕರು ಆತಂಕ ಗೊಳ್ಳುವಂತಾಗಿದೆ. ಶಾಲೆಯ ಆವರಣದಲ್ಲಿ ನಡೆದಿರುವ ಕೃತ್ಯದ ಕುರಿತಂತೆ ಶಿಕ್ಷಕರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಬೇಸರ ವ್ಯಕ್ತಪಡಿಸಿದ್ದು,ಪೊಲೀಸರು ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಎಸ್. ಡಿ.ಎಂ.ಸಿ ಅಧ್ಯಕ್ಷ ರತ್ನಾಕರ ನಾಯ್ಕ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ವಿಠೋಬ ನಾಯ್ಕ ಸೇರಿದಂತೆ ಸ್ಥಳೀಯ ಕೆಲ ಪ್ರಮುಖರು, ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಂಬಂಧಿಸಿದವರ ಅನುಮತಿ ಇಲ್ಲದೇ ಶಾಲಾ ಆವರಣದಲ್ಲಿ ಸಂಜೆ 6 ಗಂಟೆ ನಂತರ ಸಾರ್ವಜನಿಕರು ಪ್ರವೇಶ ಮಾಡುವಂತಿಲ್ಲ. ಸಾರ್ವಜನಿಕರು ಯುವಕರು ಶಾಲೆಗಳ ಆವರಣದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡುವಂತಿಲ್ಲ, ಶಾಲಾ ಆವರಣದಲ್ಲಿ ಮತ್ತು ಶಾಲೆಯ ನೂರು ಮೀಟರ್ ಒಳಗಡೆ ಕುಳಿತು ಮದ್ಯಪಾನ, ಧೂಮಪಾನ ಮಾಡುವಂತಿಲ್ಲ ಎಂಬ ಸೂಚನೆ ಹಲವೆಡೆ ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿದೆಯಾದರೂ,ತಾಲೂಕಿನ ಕೆಲ ಶಾಲಾ ಕಾಲೇಜು ಆವರಣಗಗಳು ಮೋಜು ಮಸ್ತಿಯ ತಾಣವಾಗಿ ಬದಲಾಗುತ್ತಿದ್ದು,ಅದಕ್ಕೆ ಅವಕಾಶವಿಲ್ಲದಂತೆ ಸೂಕ್ತ ಕಣ್ಗಾವಲು ಇಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

Back to top button