Important
Trending

ಕಡಲತೀರಕ್ಕೆ ಬರುತ್ತೇ ಏಳು ಗ್ರಾಮದ ದೇವರ ಪಲ್ಲಕ್ಕಿ: ಉತ್ಸವ ಮೂರ್ತಿಗಳಿಗೆ ಸಮುದ್ರದ ನೀರಿನ ಸ್ನಾನ

ಕಾರವಾರ: ಒಂದೆಡೆ ಕಡಲತೀರದಲ್ಲಿ ಮಾದೇವ್, ಮಾದೇವ್ ಘೋಷಣೆ ಕೂಗುತ್ತಾ ಪಲ್ಲಕ್ಕಿಗಳನ್ನ ಹೊತ್ತು ತರುತ್ತಿರುವ ಭಕ್ತರ ದಂಡು. ಇನ್ನೊಂದೆಡೆ ಕಡಲತೀರದಲ್ಲಿ ಮರಳಿನ ಶಿವಲಿಂಗ ಮಾಡಿ, ಪೂಜಾ ಕಾರ್ಯದಲ್ಲಿ ತೊಡಗಿರುವ ಜನರು. ಮತ್ತೊಂದೆಡೆ ಕಡಲಿಗೆ ಇಳಿದು ಸ್ನೇಹಿತರು, ಕುಟುಂಬದವರ ಜೊತೆ ನೀರಿನಲ್ಲಿ ಎಂಜಾಯ್ ಮಾಡುತ್ತಿರುವ ಭಕ್ತಸಮೂಹ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯ ಕಡಲತೀರದಲ್ಲಿ.

ಪ್ರತಿವರ್ಷದಂತೆ ಈ ವರ್ಷ ಸಹ ಗಾಂವಗೇರಿಯಲ್ಲಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯಿತು. ಶಿವರಾತ್ರಿಯ ಮಾರನೇ ದಿನ ಅಥವಾ ಶಿವರಾತ್ರಿ ನಂತರ ಬರುವ ಅಮವಾಸ್ಯೆಯ ದಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರೆಯಲ್ಲಿ ಈ ಭಾಗದ ಅಸ್ನೋಟಿ, ಮಾಜಾಳಿ, ಕೃಷ್ಣಾಪುರ, ಚಿತ್ತಾಕುಲ, ಮುಡಗೇರಿ, ಹೊಸಳ್ಳಿ ಗ್ರಾಮಗಳಿಂದ ಬೇರೆಬೇರೆ ದೇವರುಗಳನ್ನ ಪಲ್ಲಕ್ಕಿಯಲ್ಲಿ ಕಡಲತೀರಕ್ಕೆ ತರಲಾಗುತ್ತದೆ. ಬಳಿಕ ಪಲ್ಲಕ್ಕಿಯಲ್ಲಿನ ದೇವರನ್ನ ಸಮುದ್ರದಲ್ಲಿ ಸ್ನಾನ ಮಾಡಿಸುವುದು ಇಲ್ಲಿನ ವಿಶೇಷ.

ಅದರಂತೆ ಈ ಬಾರಿ ಸಹ ಪಲ್ಲಕ್ಕಿಯಲ್ಲಿ ತಂದ ಏಳು ಗ್ರಾಮದ ದೇವರುಗಳಿಗೆ ಸಮುದ್ರದ ನೀರನ್ನ ಹಾಕಿ ಸ್ನಾನ ಮಾಡಿಸಿ ದರ್ಶನಕ್ಕೆ ಇರಿಸಲಾಯಿತು. ಜಾತ್ರೆಗೆ ಬಂದoತಹ ಭಕ್ತರು ಸಮುದ್ರಸ್ನಾನ ಮಾಡಿ ಪಲ್ಲಕ್ಕಿಯಲ್ಲಿನ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಆಚರಣೆಯನ್ನ ಮುಕ್ತಾಯಗೊಳಿಸಿದರು.

ಇನ್ನು ಗಾಂವಗೇರಿಯಲ್ಲಿ ನಡೆಯುವ ಈ ರಾಮನಾಥ ದೇವರ ಜಾತ್ರಾ ಮಹೋತ್ಸವದಲ್ಲಿ ಗೋವಾ, ಮಹಾರಾಷ್ಟ್ರ, ಸೇರಿದಂತೆ ವಿವಿಧ ಭಾಗಗಳಿಂದ ಸಹ ಭಕ್ತರು ಆಗಮಿಸಿ ಪಾಲ್ಗೊಳ್ಳುತ್ತಾರೆ. ಶಿವರಾತ್ರಿಯ ದಿನದಂದು ಉಪವಾಸ ಮಾಡಿ ನಂತರ ಸಮುದ್ರಸ್ನಾನ ಮಾಡುವ ಮೂಲಕ ಉಪವಾಸ ಬಿಡುವುದು ಸಹ ಈ ಜಾತ್ರೆಯ ವಿಶೇಷ. ಅಲ್ಲದೆ ಸಮುದ್ರ ಸ್ನಾನಗಳಿಂದ ಪಾಪಗಳು ತೊಳೆದು, ರೋಗ ರುಜಿನಗಳು ದೂರಾಗುತ್ತವೆ ಎನ್ನುವ ನಂಬಿಕೆ ಇದೆ.

ಜೊತೆಗೆ ಮೃತರಾದ ಹಿರಿಯರಿಗೆ ಇದೇ ಸಂದರ್ಭದಲ್ಲಿ ಕಡಲತೀರದಲ್ಲಿ ಪಿಂಡ ಪ್ರಧಾನವನ್ನ ಮಾಡಲಾಗುತ್ತದೆ. ಹಾಗೂ ಸಮುದ್ರಸ್ನಾನ ಮಾಡಿ ವಾಪಸ್ ತೆರಳುವ ವೇಳೆ ರಸ್ತೆ ಬದಿಯಲ್ಲಿ ಹಾಕಲಾಗುವ ಬಟ್ಟೆಯ ಮೇಲೆ ಪಡಿ ಅಂದರೆ ಅಕ್ಕಿ ಹಾಕಲಾಗುತ್ತದೆ. ಇದರಿಂದ ಹಿರಿಯರಿಗೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲಿನವರದ್ದು. ಒಟ್ಟಿನಲ್ಲಿ ಮಾಜಾಳಿಯ ರಾಮನಾಥ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿoದ ಜರುಗಿದ್ದು ಸಾಮೂಹಿಕ ಸಮುದ್ರಸ್ನಾನದ ಜೊತೆಗೆ ವಿವಿಧ ಆಚರಣೆಗಳೊಂದಿಗೆ ಇದು ವಿಭಿನ್ನ ಜಾತ್ರೆಯಾಗಿರೋದಂತೂ ಸತ್ಯ.

ವಿಸ್ಮಯ ನ್ಯೂಸ್, ಕಾರವಾರ

Back to top button