Focus News
Trending

ಹೃದಯಾಘಾತ: 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅರ್ಚಕ ಇನ್ನಿಲ್ಲ

ಅಂಕೋಲಾ: ತೆಂಕಣಕೇರಿಯ ಶ್ರೀಬೊಮ್ಮಯ್ಯ ದೇವಸ್ಥಾನದ ಮುಖ್ಯ ಅರ್ಚಕರಾಗಿ ಸುಮಾರು 5 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ನಾಗೇಶ ಗುನಗಾ ಅವರು, ಶಿವರಾತ್ರಿ ಸಂದರ್ಭದಲ್ಲಿ ಶ್ರೀ ದೇವರ ಪಾದ ಸೇರಿದ್ದಾರೆ ಅಂಕೋಲಾ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ತೆಂಕಣಕೇರಿಯ ಶ್ರೀಬೊಮ್ಮಯ್ಯ ದೇವರೂ ಒಂದಾಗಿದೆ.

ನಾಗೇಶ ಗುನಗಾ ಅವರು ಈ ದೇವಸ್ಥಾನದಲ್ಲಿ ಸುಮಾರು 5 ದಶಕಗಳಿಗೂ ಹೆಚ್ಚು ಕಾಲ ಪೂಜಾ ವಿಧಿ ವಿಧಾನ ನಡೆಸುತ್ತಾ, ಸರಿ ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಬಂಡಿಹಬ್ಬದ ಸಂದರ್ಭದಲ್ಲಿ ಬೊಮ್ಮಯ್ಯ ದೇವರ ಕಳಸ ಹೊತ್ತು ತಮ್ಮ ಸೇವೆ ಸಲ್ಲಿಸಿದ್ದರಲ್ಲದೇ ತಮ್ಮ 70 ರ ಇಳಿವಯಸ್ಸಿನ ನಂತರವೂ ಕಳಸ ಹೊತ್ತು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಶ್ರೀಬೊಮ್ಮಯ್ಯ ದೇವರ ಭಕ್ತ ಸಮೂಹದ ಗೌರವ ಗಳಿಸಿದ್ದರು.

ಊರಿನಲ್ಲಿ ನಡೆಯುತ್ತಿದ್ದ ಹಲವು ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದ ಇವರು,ಅಪ್ಪಟ ಯಕ್ಷಗಾನ ಕಲಾಭಿಮಾನಿಯಾಗಿ,ಕಲಾಪೋತ್ಸಾಹಕರಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ನಾಗೇಶ ಗುನಗಾ ಅವರ ಆರೋಗ್ಯದಲ್ಲಿ ಏರುಪೇರಾಗಿ
ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ನಂತರ ಅಲ್ಲಿಯೇ ಅವರು ಹೃದಯಾಘಾತದಿಂದ ಮೃತಪಟ್ಟರು ಎನ್ನಲಾಗಿದೆ.

ಮಣಿಪಾಲದಿಂದ ಅವರ ಮೃತ ದೇಹವನ್ನು ಅಂಕೋಲಾ ತಾಲೂಕಿನ ತೆಂಕಣಕೇರಿ ಗ್ರಾಮಕ್ಕೆ ತರಲಾಗಿತ್ತು. ಊರಿನ ಹಾಗೂ ಸುತ್ತಮುತ್ತಲ ನೂರಾರು ಜನರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ರವಿವಾರ ರಾತ್ರಿ ತೆಂಕಣಕೇರಿಯ ರುದ್ರಭೂಮಿಯಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೃತರ ಅಂತ್ಯ ಸಂಸ್ಕಾರ ನಡೆಸಲಾಯಿತು.ಮೃತರ ಕುಟುಂಬಸ್ಥರು ಬಂಧು ಬಳಗ ಹಾಗೂ ಊರ ನಾಗರಿಕರು,ಮತ್ತಿತರರಿದ್ದರು. ನಾಗೇಶ ಎಂಬ ಹೆಸರಿನೊಂದಿಗೆ ಹಲವು ಕಾಲ ದೇವರ ಸೇವೆ ಮಾಡಿದ್ದ ಇವರು ಶಿವರಾತ್ರಿ ಸಂದರ್ಭದಲ್ಲಿಯೇ ಶಿವನಪಾದ ಸೇರುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button