ಹೊನ್ನಾವರ: ಇಲ್ಲಿನ ಪಂಚಕ್ಷೇತ್ರಗಳಲ್ಲೊಂದಾದ ಗುಣವಂತೆಯಲ್ಲಿ ಸ್ವರ ಸಂಸ್ಕಾರ ಸಂಗೀತ ಸಂಸ್ಥೆ ಗುಣವಂತೆ ಇವರು 21ನೇ ವರ್ಷದ ಶಿವರಾತ್ರಿ ನಿಮಿತ್ತವಾದ ನಾದಾರಾಧನೆ ಸಂಗೀತ ಕಾರ್ಯಕ್ರಮವನ್ನು ಅಹೋರಾತ್ರಿ ನಡೆಸುವುದರ ಮೂಲಕ ಮಹಾಶಿವನಿಗೆ ನಾದಾರಾಧನೆಯ ಗಾನಸುಧೆ ಅತ್ಯಂತ ಶ್ರದ್ಧೆ ಸಂಭ್ರಮದಿಂದ ಸಮರ್ಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯದ ಅಧ್ಯಕ್ಷರಾದ ಶ್ರೀ ನರಸಿಂಹ ಪಂಡಿತ್ ವಹಿಸಿ ಮಾತನಾಡಿ ಈ ಸಂಸ್ಥೆ ಅತ್ಯುತ್ತಮ ಕಲಾ ಕೊಡುಗೆ ನೀಡುತ್ತಿದ್ದು ಈ ಭಾಗದ ಮನೆ ಮನೆಯಲ್ಲಿ ಸಂಗೀತ ಮೊಳಗಬೇಕು. ಸಂಗೀತ ಮನರಂಜನೆ ಅಷ್ಟೇ ಅಲ್ಲದೆ ಮೋಕ್ಷ ಮಾರ್ಗದ ಸಾಧನವು ಆಗಿದೆ ಎಂದು ನುಡಿದರು. ಮುಖ್ಯ ಅತಿಥಿಗಳಾದ ಶ್ರೀ ಶಂಭು ಹೆಗಡೆ(ಮಾನಾಸುತ) ಮುರುಡೇಶ್ವರ ಮಾತನಾಡಿ ಗುಣವಂತೆಯ ಸಕಲ ಕಲಾ ಕೊಡುಗೆಯನ್ನು ಸ್ಮರಿಸಿ ಮಾನಸಿಕ ಒತ್ತಡ ನಿರ್ವಹಿಸಲು ಸಂಗೀತ ಅತ್ಯುತ್ತಮ ಮಾರ್ಗ ಎಂದರು.
ಇದೇ ಸಂದರ್ಭದಲ್ಲಿ ಸಂಗೀತ ಸಾಧಕರಾದ ಶ್ರೀ ಸುಬ್ರಹ್ಮಣ್ಯ ಹೆಗಡೆ ದೊಡ್ಡೋಡಿ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗಜಾನನ ಹೆಬ್ಬಾರ್, ಶ್ರೀ ಎಲ್ ಎಂ ಹೆಗಡೆ ಉಪಸ್ಥಿತರಿದ್ದರು. ಶ್ರೀ ಶೇಷಾದ್ರಿ ಅಯ್ಯಂಗಾರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಜಿ ಐ ಹೆಗಡೆ ವಂದಿಸಿದರು. ಪೂರ್ವದಲ್ಲಿ ಸ್ವರ ಸಂಸ್ಕಾರದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ಪ್ರಸನ್ನ ಭಟ್ಟ ಉಡುಪಿ ರಾಗ ಯಮನ್ ಪ್ರಸ್ತುತಪಡಿಸಿದರು.
ವಿದ್ಯಾರ್ಥಿಗಳ ಪಂಚ ತಬಲಾ ಸೋಲೋ ಜನಾಕರ್ಷಕವಾಯಿತು. ದೂರದ ಛತ್ತೀಸ್ಗಡದ ಪಂಡಿತ್ ಪಾರ್ಥಸಾರಥಿ ಮುಖರ್ಜಿ ಇವರ ತಬಲಾ ಸೋಲೋ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಇವರಿಗೆ ದತ್ತರಾಜ್ ಮಾಳ್ಸಿ ಗೋವಾ ಲೆಹರಾ ಸಾಥ್ ನೀಡಿದರು. ನಂತರ ಖ್ಯಾತ ಗಾಯಕರಾದ ರಜತ್ ಕುಲಕರ್ಣಿ ಬೆಳಗಾವಿ ರಾಗ ದುರ್ಗಾವನ್ನು, ಶ್ರೀ ರುದ್ರೇಶ್ ಭಜಂತ್ರಿ ರಾಗ ಮಾಲಕಂಸದಲ್ಲಿ ಶಹನಾಯಿ ವಾದನವನ್ನು, ಶ್ರೀಮತಿ ಲಕ್ಷ್ಮಿ ಹೆಗಡೆ ರಾಗ ಮಧುಕಂಸನ್ನು, ಶ್ರೀ ವಿನಾಯಕ ಹಿರೇಹದ್ದ ರಾಗ ಭಾಗೇಶ್ರಿಕಂಸನ್ನು , ಶ್ರೀ ಕೃಷ್ಣಮೂರ್ತಿ ಗುನಗಾ ಅಂಕೋಲಾ ರಾಗ ರಾಗಶ್ರೀಯನ್ನು, ಶ್ರೀ ಗಜಾನನ ಹೆಬ್ಬಾರ ಭಟ್ಕಳ ರಾಗ ಭೈರವವನ್ನು, ಶ್ರೀ ಸುಬ್ರಹ್ಮಣ್ಯ ಹೆಗಡೆ ದೊಡ್ಡೋಡಿ ರಾಗ ಅಹಿರ ಭೈರವವನ್ನು, ಹಾಗೂ ಕೊನೆಯಲ್ಲಿ ಶ್ರೀ ಶಿವಾನಂದ ಭಟ್ಟ ರಾಗ ಕೋಮಲರಿಶಭ ಅಸಾವರಿ ಹಾಗೂ ಭೈರವಿಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನ ಗೊಳಿಸಿದರು.
ಇವರುಗಳಿಗೆ ಶ್ರೀ ಶಂತನು ಶುಕ್ಲಾ, ಶ್ರೀ ಎನ್ ಜಿ ಹೆಗಡೆ, ಶ್ರೀ ಶೇಷಾದ್ರಿ ಅಯ್ಯಂಗಾರ್, ಶ್ರೀ ಗುರುರಾಜ್ ಹೆಗಡೆ, ಶ್ರೀ ರವಿಕಿರಣ್ ರಾವ್ ಮಂಗಳೂರು, ಶ್ರೀಅಕ್ಷಯ ಭಟ್ಟ, ಕೃಷ್ಣಪ್ರಸಾದ ಹೆಗಡೆ, ಶ್ರೀಮತಿ ಸರಸ್ವತಿ ಅಯ್ಯಂಗಾರ್ ತಬಲಾ ಸಾಥ್ ನೀಡಿದರೆ, ಶ್ರೀ ಗೌರೀಶ್ ಯಾಜಿ, ಶ್ರೀ ಹರಿಶ್ಚಂದ್ರ ನಾಯ್ಕ, ಶ್ರೀ ಅಜೇಯ ಹೆಗಡೆ ಇವರು ಸಂವಾದಿನಿ ಸಾಥ್ ನೀಡಿದರು. ಸಂಸ್ಥೆಯ ಅಧ್ಯಕ್ಷ ಶೇಷಾದ್ರಿ ಅಯ್ಯಂಗಾರ್ ಹಾಗೂ ಕಾರ್ಯದರ್ಶಿ ಶ್ರೀ ಜಿ ಐ ಹೆಗಡೆ ಹಾಗೂ ಸದಸ್ಯರುಸದಸ್ಯರಾದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದರು. ಶ್ರೀ ಎಲ್.ಎಂ.ಹೆಗಡೆ ಹಾಗೂ ಶ್ರೀ ನಾಗರಾಜ್ ಶಾಸ್ತ್ರಿ ನಿರೂಪಿಸಿದರು.