Important
Trending

ಮೋದಿ ಮತ್ತೆ ಪ್ರಧಾನಿ ಆಗಲೆಂದು ಪ್ರಾರ್ಥನೆ: ಕಾಳಿಮಾತೆಗೆ ಕೈಬೆರಳು ಸಮರ್ಪಿಸಿದ ಯುವಕ

ಕಾರವಾರ: ತಮ್ಮ ನೆಚ್ಚಿನ ನಾಯಕ ಚುನಾವಣೆಯಲ್ಲಿ ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು, ವಿಶೇಷ ಪೂಜೆ ಮಾಡುವುದು, ಕಿಲೋಮೀಟರ್ ಗಟ್ಟಲೆ ಬರಗಾಲಿನಲ್ಲಿ ನಡೆದುಕೊಂಡು ದೇವರಿಗೆ ಹೊಗುವುದು ನೋಡಿರ್ತಿವಿ. ಆದರೆ ಇಲ್ಲೊರ್ವ ವ್ಯಕ್ತಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಕಾಳಿ ದೇವಿಗೆ ತನ್ನ ಬೆರಳನ್ನೆ ಕಟ್ ಮಾಡಿ ಅರ್ಪಿಸುವ ಮೂಲಕ ಹುಚ್ಚು ಭಕ್ತಿ ಪ್ರದರ್ಶಿಸಿದ್ದಾನೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದ ನಿವಾಸಿ ಅರುಣ್ ವರ್ಣೇಕರ್ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಕಾಳಿ ಮಾತಾ ದೇವಿಗೆ ಹರಕೆ ಹೊತ್ತು ತನ್ನ ಎಡಗೈ ತೋರು ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಮಾತ್ರವಲ್ಲದೆ ಕತ್ತರಿಸಿದ ಬೆರಳಿನ ರಕ್ತದಲ್ಲಿ “ಮಾ ಕಾಳಿಮಾತ ಮೋದಿ ಬಾಬಾಕೋ ರಕ್ಷಾ ಕರೋ ಎಂದು ಗೋಡೆ ಹಾಗೂ ಪೋಸ್ಟರ್ ನಲ್ಲಿ ಬರೆದಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ ಅಪ್ಪಟ ಅಭಿಮಾನಿಯಾಗಿರುವ ಅರುಣ್ ಮನೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಗುಡಿ ನಿರ್ಮಿಸಿದ್ದಾನೆ. ಗುಡಿಯನ್ನು ಹೂಗಳಿಂದ ಶೃಂಗರಿಸಿ ನಿತ್ಯವೂ ಪ್ರಧಾನಿ ನರೇಂದ್ರ ಮೋದಿಗೆ ಪೂಜೆ ಕೂಡ ಮಾಡುತ್ತಿದ್ದಾನೆ. ಇನ್ನು ಈ ಹಿಂದೆಯೂ ಪ್ರಧಾನಿ ನರೇಂದ್ರ ವೋದಿ ಪ್ರಧಾನಿಯಾಗಬೇಕೆಂದು ತನ್ನ ಬಲಗೈ ತೋರು ಬೆರಳನ್ನು ಕಟ್ ಮಾಡಿಕೊಂಡು ರಕ್ತದಲ್ಲಿ ಬರೆದು ಕಾಳಿ ಮಾತೆಗೆ ಹರಕೆ ತೀರಿಸಿದ್ದ ಈತ ಇದೀಗ ಕೈ ಬೆರಳನ್ನೆ ಕಟ್ ಮಾಡಿಕೊಂಡು ಹುಚ್ಚು ಅಭಿಮಾನ ಪ್ರದರ್ಶಿಸಿದ್ದಾನೆ.

ಇನ್ನು ಈ ಬಗ್ಗೆ ಮಾತನಾಡಿದ ಅರುಣ್ ವೆರ್ಣೇಕರ್ ಹಿಂದೆ ಮುಂಬೈ ನಗರದ ಫಿಲ್ಮ್ ಇಂಡಸ್ಟಿಯಲ್ಲಿ ಕೆಲಸ ಮಾಡಿಕೊಂಡಿದ್ದೆ. ಇದೀಗ ಜಿಮ್ ನಡೆಸುತ್ತಿದ್ದೇನೆ. ನಾನು ಅಪ್ಪಟ ಕಾಳಿ ದೇವಿಯ ಭಕ್ತ. ಮದುವೆ ಆಗಿಲ್ಲ. ನನ್ನ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದೇನೆ. ಆದರೆ ನನಗೆ ನರೇಂದ್ರ ಮೋದಿ ಪ್ರಧಾನಿಯಾಗುವ ಪೂರ್ವದಲ್ಲಿ ಯಾರೆಂದು ತಿಳಿದಿರಲಿಲ್ಲ. ಅವರು ಪ್ರಧಾನಿಯಾದ ಬಳಿಕ ಅವರು ದೇಶಕ್ಕಾಗಿ ಮಾಡುತ್ತಿರುವ ಕೆಲಸ, ಯಾವುದೇ ಭ್ರಷ್ಟಾಚಾರ ಇಲ್ಲದೆ ಕೈಗೊಳ್ಳುವ ಕಾರ್ಯಗಳು ತುಂಬಾ ಇಷ್ಟ ಆಗಿದೆ.

ಅಂದಿನಿoದಲೂ ಪ್ರಧಾನಿ ಮೇಲೆ ಅಭಿಮಾನ ಹೆಚ್ಚಾಗಿ ಇದೀಗ ನನ್ನ ಪಾಲಿಗೆ ದೇವರಾಗಿದ್ದಾರೆ. ಸದ್ಯ ಮನೆಯಲ್ಲಿಯೇ ಗುಡಿ ನಿರ್ಮಿಸಿದ್ದೇನೆ. ನರೇಂದ್ರ ಮೋದಿ ಅವರು ಈ ಬಾರಿ ಅತ್ಯಧಿಕ ಮತಗಳಿಂದ ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ಇತಿಹಾಸ ಸೃಷ್ಟಿಸಬೇಕೆಂಬ ಭಯಕೆ ಇದೆ. ಇದೇ ಕಾರಣಕ್ಕೆ ಇಷ್ಟ ದೇವರಿಗೆ ಹರಕೆಯಾಗಿ ಕೈ ಬೆರಳನ್ನು ನೀಡಿದ್ದೇನೆ. ಇದರಿಂದ ನನಗೆ ಯಾವುದೇ ನೋವು, ಭಯ ಇಲ್ಲ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನ ಕೂಡ ನಿರ್ಮಿಸುವ ಭಯಕೆ ಇರುವುದಾಗಿ ತಿಳಿಸಿದರು.

ಇನ್ನು ಎಲ್ಲರಂತೆ ಮೋದಿ ಅಭಿಮಾನಿಯಾಗಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದ ಈತನ ಕೆಲಸಕ್ಕೆ ಇದೀಗ ಬಿಜೆಪಿಯ ಕಾರ್ಯರ್ತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ಮೋದಿ ಯಾವತ್ತೂ ಇಂತಹದನ್ನು ಇಷ್ಟ ಪಡುವುದಿಲ್ಲ. ಬೇಕಾದ್ರೆ ಮೋದಿ ಪರವಾಗಿ ಬಂದು ಪ್ರಚಾರ ಮಾಡಲಿ ಆದರೆ ಈ ರೀತಿ ಮಾಡಿಕೊಳ್ಳುವುದು ಸರಿ ಅಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಮೋದಿ ಮೇಲಿನ ಅತೀವ ಅಭಿಮಾನದಿಂದ, ಎಡ ಗೈ ಬೆರಳನ್ನೆ ಕಳೆದುಕೊಂಡಿದ್ದು, ಈತನ ಹುಚ್ಚು ಅಭಿಮಾನಕ್ಕೆ ಇದೀಗ ವಿರೋಧವೂ ವ್ಯಕ್ತವಾಗತೊಡಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button