Important

ತೋಟದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಬೃಹತ್ ಕಾಳಿಂಗ ಸರ್ಪದ ರಕ್ಷಣೆ

ಅಂಕೋಲಾ :ತಾಲೂಕಿನ ಡೂಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳವಳ್ಳಿ ಸಮೀಪದ ಮಳಗಾಂವ್ ನಲ್ಲಿ ವ್ಯಕ್ತಿಯೋರ್ವರ ಅಡಿಕೆ ತೋಟದ‌‌ಲ್ಲಿ ಆಗಾಗ ಕಾಣಿಸಿಕೊಂಡು, ನಂತರ ನೀರಿನ ತೊರೆ ಮತ್ತು ಕಲ್ಲಿನ ಪೊಟರೆ ಬಳಿ ಅವಿತು ಮರೆಯಾಗುತ್ತಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪ ತೋಟದ ಮಾಲಕರ ಕುಟುಂಬಕುಟುಂಬ ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.

ಸ್ಥಳೀಯ ನಿವಾಸಿ ಸಂತೋಷ ಭಟ್ಟ ಎಂಬುವವರ ಮನೆಯ ತೋಟದ ಬಳಿ ಕಾಳಿಂಗ ಸರ್ಪ ಕಂಡು ಬಂದಿರುವ ವಿಷಯವನ್ನು ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಅವರಿಗೆ ಕರೆ ಮಾಡಿ ತಿಳಿಸಲಾಗಿತ್ತು . ಸ್ಥಳಕ್ಕೆ ಬಂದ ಮಹೇಶ ನಾಯ್ಕ ಸುಮಾರು 2-3 ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ,ಸುಮಾರು 14 ಅಡಿ ಉದ್ದವಿರುವ ಬಾರಿ ಗಾತ್ರದ ಕಾಳಿಂಗವನ್ನು ಯಶಸ್ವಿಯಾಗಿ ಹಿಡಿದು, ಸ್ಥಳೀಯರ ಆತಂಕ ದೂರ ಮಾಡಿದರು.

ತಂದೆಯ ಜೊತೆ ಮಗ ಗಗನ್ ನಾಯ್ಕ ಕೂಡಾ,ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿ ಗಮನ ಸೆಳೆದರೆ, ಸ್ಥಳೀಯರಾದ ತುಳಸಿದಾಸ,ಗಂಗಾಧರ ಸಿದ್ದಿ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಗುರುನಾಥ ಈಟಿ, ಎಮ್.ಡಿ‌ ಅಂಕಲಿ, ವಿಠ್ಠಲ್, ಉಮೇಶ ನಾಯ್ಕ ಮತ್ತಿತರರು ಸಹಕರಿಸಿದರು. ನಂತರ ಅರಣ್ಯ ಇಲಾಖೆಯವರೊಡಗೂಡಿ ಕಾಳಿಂಗ ಸರ್ಪವನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿದೆ.ಈವರೆಗೆ ಮಹೇಶ ನಾಯ್ಕ 15 ಕಾಳಿಂಗ ಸರ್ಪ ಸಂರಕ್ಷಣೆ ಮಾಡಿದಂತಾಗಿದ್ದು,ಸ್ಥಳೀಯರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button