Important
Trending

ಮೋದಿ ನಾಮಬಲವೇ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಶ್ರೀರಕ್ಷೆ : ಮೈತ್ರಿಯಿಂದ ಬಲ ಹೆಚ್ಚಿಸಿಕೊಂಡರೇ ಬಿಜೆಪಿ ಅಭ್ಯರ್ಥಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಕದನಕಣ ರಂಗೇರಿದೆ. ಬಿಜೆಪಿಯಿಂದ ಅಖಾಡಕ್ಕಿಳಿದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯ ಎಲ್ಲೆಡೆ ಮತಬೇಟೆಗೆ ಇಳಿದಿದ್ದು, ತಮ್ಮ ರಾಜಕೀಯ ಅನುಭವವನ್ನು ಪಣಕ್ಕಿಟ್ಟಿದ್ದಾರೆ. ಬಿಜೆಪಿ ಕಟ್ಟಾಳು, ಮುತ್ಸದ್ದಿ ರಾಜಕಾರಣಿ ಕಾಗೇರಿಗೆ ಚುನಾವಣೆ ಇದೇನು ಹೊಸದಲ್ಲ. ಈಗಾಗಲೇ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಚುನಾವಣಾ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಅಲ್ಲದೆ, 2008 ರಿಂದ 2013ರ ಅವಧಿಯಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಧಾನ ಸಭಾ ಸ್ಪೀಕರ್ ಆಗಿಯೂ ಕೆಲಸ ಮಾಡಿದ್ದಾರೆ.

ಈಗಾಗಲೇ ಉತ್ತರಕನ್ನಡ ಜಿಲ್ಲೆಯಾದ್ಯಂತ ಪ್ರಚಾರ ಆರಂಭಿಸಿದ್ದು, ಗೆಲುವಿಗೆ ಬೇಕಾದ ಎಲ್ಲ ರಣತಂತ್ರವನ್ನು ಹೆಣೆದಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಮಬಲವೇ ಶ್ರೀರಕ್ಷೆ ಎಂಬ ಮಾತುಗಳು ಕೇಳಬರಲಾರಂಭಿಸಿದೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ವರ್ಚಸ್ಸು ಖಂಡಿತ ಕೆಲಸ ಮಾಡಲಿದ್ದು, ಕಾಗೇರಿಯವರ ರಾಜಕೀಯ ಅನುಭವ, ಅಭಿವೃದ್ಧಿ ಕಾರ್ಯಗಳಿಂದ ಗೆಲುವು ಸುಲಭವಾಗಲಿದೆ ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿ ಸುಳಿದಾಡುತ್ತಿದೆ.

ಅಲ್ಲದೇ, ಜೆಡಿಎಸ್‌ನ ಪ್ರಭಾವಿ ಮುಖಂಡ ಮತ್ತು ಸಮಾಜ ಸೇವಕ ಸೂರಜ್ ನಾಯ್ಕ ಸೋನಿ, ಬಿಜೆಪಿಗೆ ಬೆಂಬಲಿಸಿರುವುದು ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬಲವನ್ನು ಹೆಚ್ಚಿಸಿದೆ. ಜೊತೆಗೆ ಮೈತ್ರಿಯಿಂದಾಗಿ ಜೆಡಿಎಸ್‌ನ ಮತಗಳು ಬಿಜೆಪಿಗೆ ಒಲಿಯಲಿದ್ದು, ಇದರಿಂದಾಗಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಇನ್ನು ವಿಶ್ವೇಶ್ವರ ಹೆಗಡೆ ಕಾಗೇರಿಯ ಎದುರಾಳಿ, ಕಾಂಗ್ರೆಸ್ಸಿನ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಕೂಡಾ ಮತಬೇಟೆಗೆ ಇಳಿದಿದ್ದು, ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದಾರೆ. ಆದರೆ, ಒಂದು ಬಾರಿ ಖಾನಾಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದ ಅಂಜಲಿ ನಿಂಬಾಳ್ಕರ್, ಕಾಗೇರಿಯವರಷ್ಟು ರಾಜಕೀಯ ಅನುಭವ ಹೊಂದಿಲ್ಲದಿದ್ದರೂ, ಸಾಂಪ್ರದಾಯಿಕ ಕಾಂಗ್ರೆಸ್ಸಿನ ಓಟುಗಳ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನು ಹೋದಲ್ಲೆಲ್ಲ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇನೆಂದು ಪ್ರಚಾರ ಮಾಡುತ್ತಿದ್ದು, ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ. ಆದರೆ, ಇಷ್ಟು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಯಾಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿಲ್ಲ.? ಈಗ ಪ್ರಚಾರಕ್ಕೋಸ್ಕರ ‘ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ ಗಿಮಿಕ್ ಮಾಡಲಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಕೂಡಾ ಈ ಅವಧಿಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಾಧ್ಯವೇ ಇಲ್ಲ. ಮುಂದೆ ನೋಡೋಣ ಎಂಬ ಹೇಳಿಕೆ ನೀಡಿದ್ದು, ಇಂತಹ ಮಾತುಗಳಿಂದ ಮತದಾರರ ಓಲೈಕೆ ಸುಲಭವಲ್ಲ ಎಂಬುದು ಬಿಜೆಪಿಗರು ಹೇಳುತ್ತಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಹೋಲಿಸಿದರೆ, ಡಾ. ಅಂಜಲಿ ನಿಂಬಾಳ್ಕರ್ ಉತ್ತರಕನ್ನಡಕ್ಕೆ ಅಷ್ಟೊಂದು ಪರಿಚಿತವಲ್ಲದ ಮುಖ. ಕಿತ್ತೂರು-ಖಾನಾಪುರ ಹೊರತುಪಡಿಸಿ, ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಮಂದಿಗೆ ಅವರ ಮುಖಪರಿಚಯವೇ ಇಲ್ಲ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ಚುನಾವಣಾ ಅಖಾಡದಲ್ಲಿ ಪ್ರಚಾರ ರಂಗೇರಿದ್ದು, ಮಾತಿನ ಯುದ್ಧವೂ ಜೋರಾಗಿದೆ. ವಿಜಯಮಾಲೆ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button