ಅಂಕೋಲಾ: ಹಾಸುಗಲ್ಲು ತುಂಬಿ ಸಾಗುತ್ತಿದ್ದ ಲಾರಿಯ ಟಯರ್ ಸ್ಪೋಟಗೊಂಡ ಪರಿಣಾಮ ಲಾರಿಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಅಂಕೋಲಾ ತಾಲೂಕಿನ ಸುಂಕಸಾಳ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ.ತೆಲಂಗಾಣದಿಂದ ಹುಬ್ಬಳ್ಳಿ ಯಲ್ಲಾಪುರ ಅಂಕೋಲಾ ಮಾರ್ಗವಾಗಿ ಉಡುಪಿಗೆ ಹಾಸುಗಲ್ಲು ಸಾಗಿಸುತ್ತಿರುವಾಗ ದಾರಿ ಮಧ್ಯೆ ಅಂಕೋಲಾದ ಸುಂಕಸಾಳ ಬಳಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.
14 ಚಕ್ರದ ಲಾರಿಯಲ್ಲಿ ಸುಮಾರು 30 ಟನ್ ಪರ್ಷಿ ಕಲ್ಲು ಸಾಗಿಸಲಾಗುತಿತ್ತು, ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿ ಸುಟ್ಟು ಕರಕಲಾಗಿದ್ದು ಲಾರಿಯಲ್ಲಿ ತುಂಬಿದ ಸರಕಿಗೂ ಹಾನಿ ಸಂಭವಿಸಿದ್ದು ಒಟ್ಟಾರೆಯಾಗಿ ಸುಮಾರು 30 ಲಕ್ಷಕ್ಕೂ ಹೆಚ್ಚು ಹಾನಿಯಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಬೆಂಕಿ ಅವಘಡದಿಂದ ಕೆಲ ಕಾಲ ಹೆದ್ದಾರಿ ಸಂಚಾರ ವ್ಯತ್ಯವಾಗಿತ್ತು. ಮತ್ತು ದಟ್ಟ ಹೊಗೆ ಆವರಿಸಿತ್ತು.
ಅಂಕೋಲಾ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದರು, ಹೆದ್ದಾರಿ ಗಸ್ತು ವಾಹನ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು, ಹೆದ್ದಾರಿಯಲ್ಲಿ ಸಾಗುವ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ