ಅಂಕೋಲಾ: ನಾಡಿನ ನಾನಾ ಪ್ರಮುಖ ದೇಗುಲಗಳಲ್ಲಿ ಈಗ ಬಹುತೇಕ ತೇರು ಮಹೋತ್ಸವ ದ ಪರ್ವ ಕಾಲ. ಇದೇ ವೇಳೆ ದೊಡ್ಡ ದೇವರೆಂದೇ ಖ್ಯಾತವಾಗಿ, ದೇಶ ವಿದೇಶಿಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಅಂಕೋಲೆಯ ಶ್ರೀ ವೆಂಕಟರಮಣದೇವರ ತೇರು ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿoದ ನಡೆಯಿತು.
ಸಾವಿರಾರು ಭಕ್ತರು ಏಣಿ ಏರಿ ರಥಾರೂಢ ಶ್ರೀದೇವರ ದರ್ಶನ ಪಡೆದು ಪುನೀತರಾದರು.ನೂರಾರು ಭಕ್ತರು ದೇವರ ತೇರು ಎಳೆದು ಜೈಕಾರ ಮೊಳಗಿಸಿದರು. ರಥಬೀದಿಯಿಂದ ಹೊರಟ ತೇರು ಕಣಕಣೇಶ್ವರ ಮಾರ್ಗವಾಗಿ ದುರ್ಗಾ ದೇವಸ್ಥಾನದವರೆಗೆ ಬಂದು,ಭಕ್ತರ ಆರತಿ ಮತ್ತಿತರ ಸೇವೆ ಸ್ವೀಕರಿಸಿ,ಪುನಹ ಮೂಲಸ್ಥಾನಕ್ಕೆ ಮರಳಿ ತೇರು ಸಂಪನ್ನಗೊoಡಿತು. ಕಿಕ್ಕಿರಿದ್ದು ಸೇರಿದ್ದ ಭಕ್ತ ಸಮೂಹ ವಿಜೃಂಭಣೆಯ ತೇರು ಉತ್ಸವಕ್ಕೆ ಸಾಕ್ಷಿಯಾದರು.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನವಧಾನ್ಯ ಹಣ್ಣು ಮತ್ತಿತರ ಹರಕೆ ಸೇವೆಯನ್ನು ದೇವರಿಗೆ ಸಮರ್ಪಿಸುವ ರೂಢಿ ಇದ್ದು ಈ ಬಾರಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮತ್ತು ಮಾಜಿ ಶಾಸಕಿ ರೂಪಾಲಿ ನಾಯ್ಕ ಮತ್ತೊಮ್ಮೆ ಮೋದಿ ಎಂದು ಬಾಳೆಹಣ್ಣಿನ ಮೇಲೆ ಅಕ್ಷರ ಮೂಡಿಸಿ,ತೇರಿನತ್ತ ಅದನ್ನು ಎಸೆದು ಪ್ರಾರ್ಥನೆ ಸಲ್ಲಿಸಿದರು. ಕೆಲ ಗಣ್ಯರು ತೇರು ಉತ್ಸವದಲ್ಲಿ ಪಾಲ್ಗೊಂಡು ಶ್ರೀದೇವರ ದರ್ಶನ ಪಡೆದರು. ತದನಂತರ ರಾತ್ರಿ ಮೃಗಬೇಟೆ ಮತ್ತಿತರ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿವಿಧಾನ ನಡೆಸಲಾಯಿತು.
ಮಾರನೇ ದಿನ ಶ್ರೀ ದೇವರ ಪಲ್ಲಕ್ಕಿ ಮೆರವಣಿಗೆ ಪಟ್ಟಣದಿಂದ ಹೊರಟು ಕನಸಿಗದ್ದೆ ಮಾರ್ಗವಾಗಿ ಬೇಳಾ ಬಂದರನತ್ತ ಪಯಣ ಬೆಳೆಸಿ, ಅಲ್ಲಿಯ ಸಮುದ್ರ ಹಿನ್ನೀರಿನ ಪ್ರದೇಶದಲ್ಲಿ ಓಕುಳಿ ಸಂಪ್ರದಾಯ ನಡೆಸಿತು. ದೇವರ ಆಗಮನಕ್ಕೆ ಕಾದು ಕುಳಿತಿದ್ದ ಭಕ್ತಾದಿಗಳು ವೆಂಕಟರಮಣನಿಗೆ ಜೈ ಘೋಷ ಕೂಗಿದರು., ಹಳ್ಳದ ತೀರದಿಂದ ವಿಶೇಷವಾಗಿ ಅಲಂಕರಿಸಿದ ದೋಣಿ ಯ ಮೂಲಕ ದೇವರ ಉತ್ಸವ ಮೂರ್ತಿಯನ್ನು ನದಿಯಲ್ಲಿ ವಿಹಾರಕ್ಕೆ ಕರೆದೊಯ್ಯಲಾಯಿತು. ನಿಸರ್ಗ ನಿರ್ಮಿತ ಸುಂದರ ತಾಣಗಳಲ್ಲಿ ಒಂದಾಗಿ , ಕಾಂಡ್ಲಾ ಮತ್ತಿತರ ಗಿಡಗಳಿಂದ ಕಂಗೊಳಿಸುವ ಹಸಿರು ಪರಿಸರದ ನಡುವೆ ಸಮುದ್ರ ಸಂಗಮ ಪ್ರದೇಶದ ಬಳಿ ತೆರಳುವ ಪರಿ, ಕಣ್ಣಿಗೆ ಹಬ್ಬ ಕಟ್ಟಿದಂತಿತ್ತು. ಜಲಕ್ರೀಡೆ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಕೇಣಿಯ ಗಾಬೀತವಾಡದ ನದಿ ಸಾಗರ ಸಂಗಮ ಪ್ರದೇಶಕ್ಕೆ ಆಗಮಿಸಿದ ಜಲವಿಹಾರದ ದೋಣಿಯನ್ನು ಮೀನುಗಾರ ಗಾಬೀತ ಸಮಾಜದವರು ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡು ಶ್ರೀ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿದರು. ಗಾಬಿತ ಕೇಣಿ ಭಕ್ತರಿಂದ ದೋಣಿಯಲ್ಲಿಯೇ ಕುಳಿತು ಆರತಿ ಫಲಪುಷ್ಪ ಸೇವೆ ಸ್ರೀಕರಿಸಿದ ಶ್ರೀ ದೇವರು ,ಜಲಮಾರ್ಗವಾಗಿ ಬೇಳಾ ಬಂದರಿಗೆ ವಾಪಸಾಗಿ,ಇಲ್ಲಿಯ ಭಕ್ತರಿಂದಲೂ ಹಣ್ಣು – ಕಾಯಿ ಆರತಿ ಮುಂತಾದ ಸೇವೆ ಸ್ವೀಕರಿಸಿತು. ನಂತರ ಪಲ್ಲಕಿ ಮೆರವಣಿಗೆ ಕನಸಿಗದ್ದೆ ಬಳಿಯ ಪೀರ್ ಶೆಟ್ಟಿ ಕಟ್ಟೆ ಮತ್ತಿತರೆಡೆ ಸಾಗಿ,ದಾರಿಯುದ್ದಕ್ಕೂ ಭಕ್ತಾದಿಗಳ ಹರಕೆ ಸೇವೆ ಪಡೆದುಕೊಂಡು ವೆಂಕಟರಮಣ ದೇವಾಲಯಕ್ಕೆ ಆಗಮಿಸುವ ಮೂಲಕ ತೇರು ಉತ್ಸವದ ವಿಧಿ ವಿಧಾನಗಳು ಸಂಪನ್ನಗೊoಡವು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ