Important
Trending

ವೃಕ್ಷಮಾತೆಗೆ ಈಗ ವನೌಷಧಿ ಉಪಚಾರ: ವಿಶ್ರಾಂತಿ ವೇಳೆಯಲ್ಲಿ ಬೇಕಿದೆ ಸರ್ವರ ಸಹಕಾರ

ಅಂಕೋಲಾ: ಕಳೆದ ಕೆಲವು ದಿನಗಳ ಹಿಂದೆ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಅಸ್ಪತ್ರೆಗೆ ದಾಖಲಾಗಿ, ನಂತರ ಹೊನ್ನಳ್ಳಿಯ ತನ್ನ ಮನೆಗೆ ಮರಳಿದ್ದ ವೃಕ್ಷಮಾತೆ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು, ಇದೀಗ ಬೆಳಂಬಾರದ ಖ್ಯಾತ ನಾಟಿ ವೈದ್ಯ ಹನುಮಂತ ಗೌಡ ಅವರಿಂದ ಗಿಡಮೂಲಿಕೆ ಉಪಚಾರ ಪಡೆಯುತ್ತಿದ್ದಾರೆ.

ತಲೆ ತಲಾಂತರದಿಂದ ದೇಶದಾದ್ಯಂತ ಖ್ಯಾತಿ ಗಳಿಸಿರುವ, ಬೆಳಂಬಾರದ ಬೊಮ್ಮು ಶಿವು ಗೌಡ ಸ್ಮಾರಕ ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿರುವ ತುಳಸಿ ಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಬೊಮ್ಮ ಗೌಡ, ಹಾಗೂ ಶುಶ್ರೂಶಕಿ ಮೇಘನಾ ಅವರು ವಿಶೇಷ ಕಾಳಜಿಯೊಂದಿಗೆ ಚಿಕಿತ್ಸೆ ಮತ್ತು ಉಪಚಾರ ನೀಡುತ್ತಿದ್ದು, ಚಿಕಿತ್ಸೆಗೆ ಸ್ವಂದಿಸುತ್ತಿರುವ ತುಳಸಿ ಗೌಡ ಅವರ ಸ್ವಾಧೀನ ಕಳೆದುಕೊಂಡಿದ್ದ ಎಡ ಕೈ ಮತ್ತು ಕಾಲುಗಳ ಚಲನೆ ಮೂಲಕ ಚೇತರಿಕೆ ಕಂಡು ಬರುತ್ತಿದೆ.

ತುಳಸಜ್ಜಿಯ ಮಗ, ಸೊಸೆ, ಮೊಮ್ಮಗ ಮತ್ತಿತರರು ಆಕೆಯ ಜೊತೆಗಿದ್ದು ಆರೈಕೆ ಮಾಡುತ್ತಿದ್ದಾರೆ. ತುಳಸಜ್ಜಿ ಅನಾರೋಗ್ಯದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಹಾಲಿ ಹಾಗೂ ಮಾಜಿ ಜನಪ್ರತಿನಿದಿಗಳು, ಮಾಧ್ಯಮ ಮಿತ್ತರು,ಸಂಘ ಸಂಸ್ಥೆಗಳ ಪ್ರಮುಖರು, ಮಠಾದೀಶರು,ಅಧಿಕಾರಿ ವರ್ಗ,ವೈದ್ಯರು ಹಾಗು ಸಿಬ್ಬಂದಿಗಳು,ಸಮಾಜ ಬಾಂಧವರು,ಇತರೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಸೇರಿದಂತೆ ಹಲವರು ಪ್ರತ್ಯಕ್ಷ – ಅಪ್ರತ್ಯಕ್ಷವಾಗಿ ವಿಶೇಷ ಕಾಳಜಿ ವಹಿಸಿರುವುದಕ್ಕೆ ಕುಟುಂಬ ವರ್ಗದ ಪರವಾಗಿ ಧನ್ಯವಾದ ಸಲ್ಲಿಸುತ್ತಿದ್ದೇವೆ. ಅಜ್ಜಿಗೆ ತುರ್ತಾಗಿ ಕನಿಷ್ಟ ಒಂದು ವಾರದ ಮಟ್ಟಿಗಾದರೂ, ವಿಶ್ರಾಂತಿ ಮತ್ತು ಆರೈಕೆ ಬೇಕಾಗಿದೆ.

ದಯಮಾಡಿ ಈ ಸಮಯದಲ್ಲಿ ಯಾರೂ ಅನ್ಯತಾ ಭಾವಿಸದೇಫೋನ್ ಕರೆ, ವಿಡಿಯೊ ಕಾಲ್, ಅಥವಾ ನೇರವಾಗಿ ಬಂದು ಅಜ್ಜಿಯೊಂದಿಗೆ ಮಾತನಾಡಿಸಲು ಒತ್ತಾಯಿಸಬಾರದಾಗಿ ಸಾರ್ವಜನಿಕರಲ್ಲಿ ನಮ್ರವಾಗಿ ವಿನಂತಿಸುತ್ತೇವೆ ಮತ್ತು ನಿಮೆಲ್ಲರ ಪ್ರೀತಿಯ ಸಹಕಾರ ಹಾರೈಕೆ ಸದಾ ನಮ್ಮ ಕುಟುಂಬದ ಮೇಲಿದ್ದು, ಅಜ್ಜಿ ಚೇತರಿಕೆ ಬಳಿಕ ಮತ್ತೆ ನಾವು ನೀವೆಲ್ಲ ಈ ಮೊದಲಿನಂತೆ ಬೆರೆಯುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತುಳಸಜ್ಜಿ ಕುಟುಂಬದವರು ತಿಳಿಸಿ,ಸರ್ವರ ಸಹಕಾರ ಕೋರಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button