Important
Trending

ಕುಮಟಾ ಪೊಲೀಸರಿಗೆ ಏನಾಗಿದೆ? ಬೇರೆಲ್ಲೂ ಇರದ ಕಟ್ಟುಪಾಡುಗಳು ಇಲ್ಲಿನ ಪೊಲೀಸರಿಗೆ ಇದೆಯೇ?

ಕುಮಟಾ: ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆದ ಬಳಿಕ ಸಾಮಾನ್ಯವಾಗಿ ಕಾರ್ಯನಿರತ ಅಥವಾ ಅಧಿಕೃತ ಪತ್ರಕರ್ತರ ಸಂಘದ ಸದಸ್ಯರಿಗೆ ಸಂಬoಧಪಟ್ಟ ಮಾಹಿತಿ ರವಾನೆಯಾಗುತ್ತದೆ. ಇಲ್ಲವೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಇದೆ. ಆದರೆ, ಇತ್ತಿಚೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಸತ್ಯಾಸತ್ಯೆಯನ್ನು ನೈಜವಾಗಿ ಬಿತ್ತರಿಸುವ ಕಾರ್ಯನಿರತ ಪತ್ರಕರ್ತರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಇತ್ತಿಚೆಗೆ ಕೇಳಿಬಂದಿದೆ. ಪೋಕ್ಸೋದಂತ ಪ್ರಕರಣ ನಡೆದಾಗ, ಪೊಲೀಸ್ ಇಲಾಖೆ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದೆಯೇ? ಇಂಥದೊoದು ಪ್ರಶ್ನೆ ಈಗ ಪತ್ರಕರ್ತರನ್ನು ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ.

ಮೊನ್ನೆ ಮೊನ್ನೆ ಕುಮಟಾದಲ್ಲಿ ನಡೆದ ಪೋಕ್ಸೋ ಪ್ರಕರಣದ ಕುರಿತ ಮಾಹಿತಿ ಕೇಳಿ ಪತ್ರಕರ್ತರು ಸಂಬoಧಿಸಿದ ಪೊಲೀಸ್ ಅಧಿಕಾರಿಗಳಿಗೆ ಹತ್ತಾರು ಬಾರಿ ದೂರವಾಣಿ ಕರೆ ಮಾಡಿದ ಬಳಿಕವೂ ಎಫ್‌ಐಆರ್ ಪ್ರತಿ ಕಳುಹಿಸಿಲ್ಲ, ಆರೋಪಿಯ ಫೋಟೋ ಬಹಿರಂಗಪಡಿಸಿಲ್ಲ. ಈಗ ಕಳುಹಿಸುತ್ತೇವೆ, ಆಗ ಕಳುಹಿಸುತ್ತೇವೆ ಎಂದು ಕಾಲಹರಣ ಮಾಡಿದ್ದಾರೆ. ಇದೊಂದೆ ಅಲ್ಲ, ಅಪಘಾತ, ಕಳ್ಳತನ ಸೇರಿ ಯಾವುದೇ ಎಫ್‌ಐಆರ್ ಪ್ರತಿಯನ್ನು ಕೇಳುವಾಗ ಹತ್ತಾರು ಬಾರಿ ದೂರವಾಣಿ ಮೂಲಕ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುವ ಅನಿವಾರ್ಯತೆ ಎದುರಾಗಿದೆ.

ರಾಜ್ಯದೆಲ್ಲೆಡೆ ಪೋಕ್ಸೋ ಪ್ರಕರಣ ದಾಖಲಾದರೆ, ಆರೋಪಿಯ ಫೋಟೋ ಸಹಿತ ಸುದ್ದಿ ಕ್ಷಣಮಾತ್ರದಲ್ಲಿ ಬಿತ್ತರವಾಗುತ್ತದೆ. ಹೀಗುರುವಾಗ ಕುಮಟಾ ಪೊಲೀಸ್ ಠಾಣೆ ಮಾತ್ರ ಇದಕ್ಕೆ ಹೊರತಾಗಿದೆಯೇ? ಅಥವಾ ಬೇರೆಲ್ಲೂ ಇರದ ಕಟ್ಟುಪಾಡುಗಳು ಇಲ್ಲಿನ ಪೊಲೀಸರಿಗೆ ಇದೆಯೇ? ಕುಮಟಾದಲ್ಲಿ ಪೋಕ್ಸೋ ಪ್ರಕರಣ ದಾಖಲಾದ ದಿನವೇ ಕುಮಟಾ ಪಕ್ಕದ ತಾಲೂಕಾದ ಅಂಕೋಲಾದಲ್ಲೂ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅಂಕೋಲಾ ಪೋಕ್ಸೋ ಪ್ರಕರಣದ ಮಾಹಿತಿ ಸಮರ್ಪಕವಾಗಿ ಪತ್ರಕರ್ತರಿಗೆ ಸಿಕ್ಕಿದ್ದು, ಎಲ್ಲೆಡೆ ಫೋಟೋ ಸಹಿತ ವಿವರ ಪ್ರಕಟವಾಗಿತ್ತು. ಅಂದರೆ ಅಂಕೋಲಾ ಪೊಲೀಸರಿಗೆ ಇರದ ಕಟ್ಟುಪಾಡುಗಳು ಕುಮಟಾದ ಪೊಲೀಸರಿಗೆ ಇದೆಯೇ? ಅಥವಾ ರಾಜ್ಯದ, ದೇಶದ ಬೇರೆಲ್ಲೂ ಇರದ ವಿಶೇಷ ನಿಬಂಧನೆಗಳು ಕುಮಟಾ ಪೊಲೀಸರಿಗೆ ಇದೆಯೇ? ಇಂಥ ಪ್ರಶ್ನೆಗಳು ಸಹಜವಾಗಿ ಉದ್ಭವವಾಗುತ್ತದೆ. ಈ ಎಲ್ಲಾ ಕಾರಣದಿಂದ ಕುಮಟಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕುಮಟಾ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ, ಲಿಖಿತ ರೂಪದಲ್ಲಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಯೋಗೀಶ್ ಮಡಿವಾಳ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button