Important
Trending

ದೇವರ ಹರಕೆ ಸೇವೆ ಸಲ್ಲಿಸಿ ಮನೆಗೆ ಮರಳುತ್ತಿದ್ದವ ದೈವ ಪಾದ ಸೇರಿದ: ಜವರಾಯನಂತೆ ನುಗ್ಗಿದ ಲಾರಿ

ಅಂಕೋಲಾ : ಭಾರೀ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ,ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು,ಲಾರಿ ಕ್ಲೀನರ್ ಗೂ ಚಿಕ್ಕ ಪುಟ್ಟ ಗಾಯಗಳಾದ ಘಟನೆ, ತಾಲೂಕಿನಲ್ಲಿ ಹಾದುಹೋಗಿರುವ ರಾ.ಹೆ 63 ಹೊನ್ನಳ್ಳಿ ಬಳಿ ಸಂಭವಿಸಿದೆ. ಹೆಗ್ಗಾರ – ಮಕ್ಕಿಗದ್ದೆ ನಿವಾಸಿ ಕೀರಾ ಕೃಷ್ಣ ಹರಿಕಂತ್ರ (60 ) ಮೃತ ದುರ್ದೈವಿಯಾಗಿದ್ದಾನೆ. ಕುಮಟಾ ತಾಲೂಕಿನ ಬರ್ಗಿಯಲ್ಲಿ ನಡೆದ ಹಬ್ಬದಲ್ಲಿ ದೇವರ ದರ್ಶನ ಪಡೆದು, ಹಣ್ಣು ಕಾಯಿ ಹರಕೆ ಸೇವೆ ಸಲ್ಲಿಸಿ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ದೈವ ಪಾದ ಸೇರುವಂತಾಗಿರುವುದು ವಿಧಿಯಾಟವೇ ಸರಿ.

ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಸಾಗುತ್ತಿದ್ದ ಸರಕು ಸಾಗಿಸುವ ಭಾರೀ ವಾಹನ (ಲಾರಿ) ದಾರಿಮಧ್ಯೆ ಅಂಕೋಲಾ ತಾಲೂಕ ವ್ಯಾಪ್ತಿಯ ಹೊನ್ನಳ್ಳಿ ಬಳಿ ಡಾಬಾ ಒಂದರ ಎದುರುಗಡೆ ಜವರಾಯ ನಂತೆ ನುಗ್ಗಿ ಬೈಕ್ ಗೆ ಜೋರಾಗಿ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರ ಸಿಡಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅತಿ ವೇಗ ಹಾಗೂ ನಿರ್ಲಕ್ಷದಿಂದ ತನ್ನ ವಾಹನ ಚಲಾಯಿಸಿದ ಲಾರಿ ಚಾಲಕ ವಾಹನದ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡ ಪರಿಣಾಮ, ಲಾರಿ ರಸ್ತೆಯ ಬಲ ದಿಕ್ಕಿಗೆ ಹೋಗಿ (wrong Side ) ಮಗ್ಗುಲು ಚಾಚಿದೆ.

ಅಂಕೋಲಾ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿ ಎಸ್ ಐ ಉದ್ದಪ್ಪ ಧರಪ್ಪನವರ,ಸಂಚಾರಿ ವಿಭಾಗದ ಪಿಎಸ್ಐ ಸುನೀಲ ಹುಲ್ಲೊಳ್ಳಿ, ಎ ಎಸ್ ಐ ತಿಮ್ಮಪ್ಪ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ. ಮೃತ ದೇಹವನ್ನು ಘಟನಾ ಸ್ಥಳದಿಂದ ಮರಣೋತ್ತರ ಪರೀಕ್ಷೆಗಾಗಿ ತಾಲೂಕಾಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ನೆರವಾದರು. ಆನಂದು ಗೌಡ ಸೇರಿದಂತೆ ಸ್ಥಳೀಯರು ಹಾಗೂ ಇತರರು ಸಹಕರಿಸಿದರು.

ಈ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟರೆ,ಲಾರಿ ಕ್ಲೀನರ್ ಗೂ ಸಹ ಚಿಕ್ಕ ಪುಟ್ಟ ಗಾಯಗಳಾಗಿದ್ದು,ಅಪಘಾತ ಪಡಿಸಿದ ಲಾರಿ ಚಾಲಕನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ. ಮೃತ ಕೀರಾ ಹರಿಕಂತ್ರ,ತಮ್ಮೂರಿನ ಹಾಗೂ ಸುತ್ತಮುತ್ತಲ ಗ್ರಾಮಸ್ಥರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದು,ಹಲವರ ಪಾಲಿಗೆ ಆಪತ್ಬಾಂಧವನಾಗಿ ಗುರುತಿಸಿಕೊಂಡಿದ್ದ. ಆತನ ಅಕಾಲಿಕ ಸಾವು ಮೃತನ ಕುಟುಂಬಸ್ಥರು, ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button