Important
Trending

ಸೇಫ್ ಲಾಕರ್ ನಲ್ಲಿದ್ದ ಬಂಗಾರದ ಕಳಸದ ಗಿಂಡಿಯಲ್ಲಿ ಶಾಸನ ಪತ್ತೆ: ಏನಿದೆ ನೋಡಿ?

ಕುಮಟಾ: ಕನ್ನಡ ಕರಾವಳಿಯ ಎಲ್ಲೆಲ್ಲೂ ಈಗ ಬಂಡಿಹಬ್ಬದ ಸಂಭ್ರಮ ಜೋರಾಗಿದ್ದು,ಪ್ರಾಚೀನ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಯನ್ನು ಈಗಲೂ ಮುಂದುವರೆಸಿಕೊoಡು ಹೋಗಲಾಗುತ್ತಿದೆ. ಈ ನಡುವೆ ಕುಮಟಾ ತಾಲೂಕಿನ ಗೋಕರ್ಣ – ಬಂಕಿಕೊಡ್ಲ ಸಮೀಪದ ಹನೇಹಳ್ಳಿ ಗ್ರಾಮದ ಶ್ರೀ ಅಮ್ಮನವರ (ಶ್ರೀ ಮಂಕಾಳಮ್ಮ) ಬಂಡಿ ಹಬ್ಬದ ಕಳಸದ ಗಿಂಡಿಯ ಮೇಲೆ ಶಾಸನವಿರುವುದು ಪತ್ತೆಯಾಗಿದೆ. ಕಳಸ ಗಿಂಡಿಯ ತಳಭಾಗದಲ್ಲಿ ಬರವಣಿಗೆ ಇರುವುದನ್ನು ಕಂಡ ದೇವಸ್ಥಾನದ ವಹಿವಾಟುದಾರರು ಅದನ್ನು ಜಿಲ್ಲೆಯ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾರವರ ಗಮನಕ್ಕೆ ತಂದಿದ್ದಾರೆ. ಕಳಸ ಗಿಂಡಿಯಲ್ಲಿರುವ ಬರಹವನ್ನು ಪರಿಶೀಲಿಸಿದ ಗೌಡರು ಇದು ಶಕವರ್ಷ 1788ರಲ್ಲಿ ಬರೆದದ್ದಾಗಿದೆ. ಇದನ್ನು ಶಾಸನವೆಂದು ಪರಿಗಣಿಸಬಹುದು ಎಂದಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಶ್ಯಾಮಸುಂದರ ಅವರು ಹನೇಹಳ್ಳಿಯ ಅಮ್ಮನವರ ಬಂಡಿಹಬ್ಬದ ಕಳಸ ಗಿಂಡಿಯ ಪೊಂದದಲ್ಲಿ(ತಳಭಾಗದಲ್ಲಿ) ಐದು ಸಾಲಿನ ಶಾಸನವಿದ್ದು ಹನೇಹಳಿ ಲಿದು ದೇವ ಶಕ 1788ರ ಅಕ್ಷಯ ಸಂವತ್ಸರದ ಕಾರ್ತಿಕ ಮಾಸದ ಬಹುಳ ಆರು’ ಎಂದು ತೇದಿಯನ್ನು ತಿಳಿಸಿಶೇರು ಹತ್ತು’ ಎಂದು ಉಲ್ಲೇಖಿಸುತ್ತದೆ.

ಅಮ್ಮನವರ ಕಳಸದ ಗಿಂಡಿಯು ಚಿನ್ನದಾಗಿದ್ದು ಬಹುಶಃ ಶಾಸನೋಕ್ತ ದಿನಾಂಕದoದು ಅಮ್ಮನವರ ಕಳಸಕ್ಕೆ ಚಿನ್ನದ ಗಿಂಡಿಯನ್ನು ಮಾಡಿಸಿ ಅರ್ಪಿಸಿರಬೇಕು. ಶಾಸನದ ಕೊನೆಯಲ್ಲಿ ಶೇರು 10 ಎಂದು ಬರೆಯಲಾಗಿದೆ. ಒಂದು ಶೇರು ಅಥವಾ ಸೇರು ಅಂದರೆ ಅದು ನಮ್ಮ ಸಿದ್ದೆ ಅನ್ನುವ ಸ್ಥಳಿಯ ಅಳತೆ ಮಾಪನಕ್ಕೆ ಸಮ. ಪ್ರಸ್ತುತ ಹನೇಹಳ್ಳಿಯ ಅಮ್ಮನವರ ಕಳಸದ ಗಿಂಡಿಯಲ್ಲಿ ಹತ್ತು ಸಿದ್ದೆ ಅಕ್ಕಿ ಹಿಡಿಯುತ್ತದೆ. ಅಂದಾಗ ಶಾಸನೋಕ್ತ ಶೇರು 10 ಅನ್ನುವುದು ಕಳಸದ ಗಿಂಡಿಯ ಸಾಮರ್ಥ್ಯ ಅನ್ನುವುದು ಸ್ಪಷ್ಟವಾಗುತ್ತದೆ. ಶಕವರ್ಷ 1788 ಕ್ರಿಸ್ತಶಕ 1866ಕ್ಕೆ ಸಮವಾಗುತ್ತದೆ. ಇಂದಿಗೆ (2024ಕ್ಕೆ) 158 ವರ್ಷಗಳ ಹಿಂದೆಯೇ ಹನೇಹಳ್ಳಿಯ ಶ್ರೀ ಮಂಕಾಳಮ್ಮ ದೇವರ ಬಂಡಿಹಬ್ಬಕ್ಕೆ ಚಿನ್ನದಿಂದ ಕಳಸದ ಗಿಂಡಿಯನ್ನು ಮಾಡಿದ್ದರು ಎನ್ನುವುದು ಈ ಶಾಸನದಿಂದ ದೃಢವಾಗುತ್ತದೆ ಎಂದು ವಿವರಿಸಿದರು.

ಬಂಡಿ ಹಬ್ಬಕ್ಕೆ ಸಂಬoಧಿಸಿದoತೆ ಬೇರೆಲ್ಲಿ ಶಾಸನಗಳಿವೆ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗೌಡರು, ಬಂಡಿಹಬ್ಬಕ್ಕೆ ಸಂಬoಧಿಸಿದoತೆ ಶಾಸನಗಳು ತುಂಬ ವಿರಳವಾಗಿವೆ. ಕುಂಬಾರಕೇರಿಯಲ್ಲಿರುವ ಅಂಕೋಲೆಯ ಭೂಮ್ತಾಯಿ ದೇವರ ಕಳಸದ ಮನೆಯ ಪೂರ್ವ ದಿಕ್ಕಿನ ಗೋಡೆಯ ಮೇಲೆ ನಾಗರಿ ಲಿಪಿ ಬಳಸಿ ಮರಾಠಿ ಭಾಷೆಯಲ್ಲಿ ಕಾವಿ ಬಣ್ಣದಲ್ಲಿ ಬರೆದ ಶಾಸನವಿದೆ.

ಶ್ರೀ ಕಲಶ ದೇವಸ್ಥಾನವನ್ನು ಮಾಘ ಶಕೆ 1798 ಧಾತೃನಾಮ ಸಂವತ್ಸರದಲ್ಲಿ ಪ್ರಾರಂಭಿಸಿ ವೈಶಾಖ ಶಕೆ 1799 ಈಶ್ವರನಾಮ ಸಂವತ್ಸರದoದು ಸುಣ್ಣ ತೆಗೆದು ದೇವಸ್ಥಾನ ಪೂರ್ಣಗೊಂಡಿತು. ಈ ದೇವಾಲಯವನ್ನು ಶ್ರೀಗಳ ನಿರೂಪದ ಮೇರೆಗೆ ಮೊಕ್ತೇಸರರು ಭಂಡಾರದಿoದ ಜೀರ್ಣೋದ್ಧಾರ ಮಾಡಿಸಿದರು. ಸದಾಶಿವ ಧೋಂಡು ಗಾವಡಿ ಹಾಗೂ ರಾಘೋಬಾ ಸಗುಣ ಗಾವಡಿ ಎನ್ನುವವರು ಶ್ರೀಗಳ ಅಪ್ಪಣೆಯಂತೆ ಕಟ್ಟಡ ಕೆಲಸ ನಿರ್ವಹಿಸಿ ಕೊಟ್ಟರು ಅನ್ನುವ ಮಾಹಿತಿ ದೊರೆಯುತ್ತದೆ.

ಹನೇಹಳ್ಳಿಯ ಕಳಸದ ಗಿಂಡಿಯ ಶಾಸನ ಮತ್ತು ಅಂಕೋಲೆಯ ಕಳಸ ದೇವಸ್ಥಾನದ ಶಾಸನಗಳು ಬಹುತೇಕ ಒಂದೇ ಅವಧಿಯವು. ಇವುಗಳ ನಡುವೆ ಕೇವಲ ಹತ್ತು ವರ್ಷಗಳ ಅಂತರವಿದೆ. ಕ್ರಿ.ಶ. 1877ರ ಜನವರಿಯಿಂದ ಮೇ ತಿಂಗಳವರೆಗೆ ಅಂಕೋಲೆಯ ಕಳಸ ದೇವಸ್ಥಾನದ ಕಟ್ಟಡ ಕೆಲಸ ನಡೆದಿತ್ತು ಅನ್ನುವ ಸಂಗತಿಗಳನ್ನು ತಿಳಿಸಿದರು.

ಸೇಫ್ ಲಾಕರನಲ್ಲಿದ್ದ ಕಳಸದ ಗಿಂಡಿ

ಹನೇಹಳ್ಳಿಯ ಬಂಡಿಹಬ್ಬ ಹನ್ನೆರಡು ದಿನಗಳ ಆಚರಣೆಯಾಗಿತ್ತು. ಕಳೆದ 28 ವರ್ಷಗಳಿಂದ ಈ ಆಚರಣೆಯನ್ನು ಕೇವಲ ಒಂದೂವರೆ ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಕಾರಣವೆಂದರೆ ಅಂದಿನ ಟ್ರಸ್ಟಿಗಳು ಕಳಸದ ಬಂಗಾರದ ಗಿಂಡಿಯನ್ನು ಬ್ಯಾಂಕಿನ ಲಾಕರಿನಲ್ಲಿಟ್ಟಿದ್ದರು. ಅವರು ಬ್ಯಾಂಕಿನಲ್ಲಿ ತಮ್ಮ ವೈಯಕ್ತಿಕ ಹೆಸರಿನಲ್ಲಿಟ್ಟಿದ್ದರಿಂದ ಅವರು ತೀರಿಕೊಂಡ ನಂತರ ಕಾನೂನಿನ ತೊಡಕಿನಿಂದಾಗಿ ಹೊಸ ಟ್ರಸ್ಟಿಗಳಿಗೆ ಅದನ್ನು ತರುವ ಹಕ್ಕು ಲಭಿಸದೇ ಇರುವುದರಿಂದ ಬಂಡಿಹಬ್ಬದ ಆಚರಣೆಯನ್ನು ಕೇವಲ ಒಂದೂವರೆ ದಿನಕ್ಕೆ ಸೀಮಿತಗೊಳಿಸಲಾಯಿತು. ಈ ವರ್ಷ ದೇವಸ್ಥಾನದ ಆಡಳಿತ ಮಂಡಳಿಯವರು ಕಾನೂನಿನ ತೊಡಕುಗಳನ್ನು ನಿವಾರಿಸಿ ಬಂಗಾರದ ಗಿಂಡಿಯನ್ನು ಬ್ಯಾಂಕಿನಿoದ ತಂದು ಪರಂಪರಾಗತ ರೀತಿಯಲ್ಲಿ ಹನ್ನೆರಡು ದಿನಗಳ ಹಬ್ಬವನ್ನು ಆಚರಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button