ಸರ್ಕಾರಿ ಶಾಲೆಗೆ ಬಂತು ಮೆರುಗು: ಕಲಾತ್ಮಕವಾಗಿ ಪೇಂಟ್ ಮಾಡಿಸಿ ಗಮನಸೆಳೆದ ಹಳೆಯ ವಿದ್ಯಾರ್ಥಿಗಳು

ಭಟ್ಕಳ: ವಿದ್ಯಾರ್ಥಿಗಳಿಂದ ಗಿಜಿಗುಡುತ್ತಿರುವ ಕನ್ನಡ ಶಾಲೆಗಳ ವೈಭವಗಳು ಅಳಿದು ಸುಮಾರು ವರ್ಷಗಳೆ ಕಳೆದಿದೆ. ಇದಕ್ಕೆ ಬಹುದೊಡ್ಡ ಹೊಣೆಗಾರಿಕೆ ನಮ್ಮನ್ನಾಳುವ ಸ್ವಾರ್ಥ ಅವಿವೇಕಿ ರಾಜಕಾರಣಿಗಳ ಪಾಲು ಅಧಿಕವಾಗಿದೆ. ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಸಮಾನತೆ, ಹಕ್ಕು ಮುಂತಾದವುಗಳ ಕುರಿತು ಗಂಟೆಗಟ್ಟಲೆ ಒದರುವ ರಾಜಕೀಯ ನಾಯಕರು ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗೆ ಕಳುಹಿಸಿ ಬಡವರ ಮಕ್ಕಳು ಬಣ್ಣ ಮಾಸಿದ, ಛಾವಣಿ ಜಾರಿದ ಶಾಲೆಗಳಲ್ಲಿ ಓದುವ ಅನಿವಾರ್ಯವನ್ನು ಸೃಷ್ಠಿಸಿದ್ದಾರೆ.

ತಿಂದದಕ್ಕೂ, ಊಂಡದಕ್ಕೂ ಬೀದಿಗೆ ಬಂದು ಉರುಳುವ ಕೆಲವು ಸಂಘ, ಸಂಘಟನೆಗಳು ಈ ವಿಷಯಗಳಲ್ಲಿ ಜಾಣ ಮೌನವನ್ನು ವಹಿಸುತ್ತದೆ. ಆದರೆ ಈ ನಡುವೆ ಕೆಲವು ಸಮಾಜಿಕ ಚಿಂತನೆಗಳುಳ್ಳ ಯುವ ಮನಸ್ಸುಗಳು ಕನ್ನಡ ಶಾಲೆಯ ಶ್ರೆಯೋಭಿವೃದ್ಧಿಗಾಗಿ ಕಟಿಬದ್ಧವಾಗಿ ನಿಂತಿರುವುದು ಸಮಾಧಾನಕರ ಸಂಗತಿಯೇ ಸರಿ.

ಶಾಲೆಯ ಗೋಡೆಯ ಮೇಲೆ ರೈಲು ಬಂಡಿ, ಗುರುಕುಲ, ನಕ್ಷೆಗಳು, ಅಂಕಿಸoಖ್ಯೆಗಳು, ಕನ್ನಡ ವರ್ಣಮಾಲೆ, ಮಾನವ ಅಂಗಾoಗಗಳು, ಗಾದೆಗಳು, ಗಣಿತದ ಲೆಕ್ಕಗಳು ಸೇರಿದಂತೆ ಇನ್ನಿತರ ಅತ್ಯಾಕರ್ಷಕ ಚಿತ್ರಗಳು ಕಲಾವಿಧರ ಕುಂಚದಿoದ ಮೂಡಿಬಂದಿದ್ದು ಇದು ಸಹಜವಾಗಿ ಮಕ್ಕಳನ್ನು ಶಾಲೆಯತ್ತ ಸೆಳೆಯುತ್ತದೆ . ಇಲ್ಲಿನ ಚಿತ್ರಗಳ ಮೂಲಕ ತಿಳಿದುಕೊಂಡ ವಿಷಯಗಳು ಬಹುಕಾಲ ಅವರ ಸ್ಮೃತಿಪಟಲದ ಮೇಲೆ ಅಚ್ಚಳಿಯದೆ ಉಳಿಯುವುದರ ಜತೆಗೆ ಇದು ಮಕ್ಕಳಲ್ಲಿ ಕಲಿಕೆಯ ಕುರಿತು ಮತ್ತಷ್ಟು ಆಸಕ್ತಿಯನ್ನು ಹುಟ್ಟುಹಾಕುವುದರಲ್ಲಿ ಸಂದೇಹವಿಲ್ಲ.

ಹೌದು ಇದು ಭಟ್ಕಳ ತಾಲೂಕಿನ ಮಾವಿನಕುರ್ವೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ಕಳೆದ ಹಲವಾರು ವರ್ಷಗಳಿಂದ ಸುಣ್ಣ ಬಣ್ಣ ಕಾಣದೆ ಕಳೆಗುಂದಿದ ಸ್ಥಿತಿಯಲ್ಲಿತ್ತು. ಶಾಲೆಯ ಈ ಸ್ಥಿತಿಯನ್ನು ನೋಡಿದ ಇಲ್ಲಿನ ಕೆಲವು ಹಳೆ ವಿದ್ಯಾರ್ಥಿಗಳು ಶಾಲೆಗೊಂದು ಹೊಸ ಕಾಯಕಲ್ಪ ನೀಡಲು ಸಜ್ಜಾದರು. ಈ ಮೂಲಕ ತಮ್ಮ ತಮ್ಮಲ್ಲಿಯೇ ಒಂದು ವಾಟ್ಸಾಪ್ ಗ್ರೂಪನ್ನು ರಚಿಸಿಕೊಂಡು ಹಣವನ್ನು ಒಟ್ಟುಗೂಡಿಸಿ ಶಾಲೆಗೆ ಕಲಾತ್ಮಕವಾಗಿ ಪೇಂಟ್ ಮಾಡಿಸಿ ತಾವು ಕಲಿತ ಶಾಲೆಯ ಗತವೈಭವನ್ನು ಮರುಕಳಿಸುವಂತೆ ಮಾಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರಗಳು ಮಾಡಬೇಕಾದ ಕಾರ್ಯಗಳನ್ನು ಇಲ್ಲಿನ ಸ್ಥಳಿಯ ಯುವಕರು ಮಾಡಿದ್ದಾರೆ. ಕೋಟಿಗಟ್ಟಲೆ ಹಣವನ್ನು ಲೂಟಿ ಹೊಡೆದು ತಮ್ಮ ಮೂರು ತಲೆಮಾರಿಗಾಗುವಷ್ಟು ಕೂಡಿಡುವ ರಾಜಕಾರಣಿಗಳು ಇಂತಹ ಯುವಕರು ಮಾಡುವ ಕೆಲಸವನ್ನು ನೋಡಿದ ಮೇಲಾದರೂ ಕನ್ನಡ ಶಾಲೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಿ ಕಾಲಕಾಲಕ್ಕೆ ಸುಣ್ಣ ಬಣ್ಣವನ್ನು ಬಳಿದು ಬಡ ವಿದ್ಯಾರ್ಥಿಗಳಲ್ಲಿ ತಾವು ಯಾವ ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬ ಮನೋಭಾವನೆ ಮೂಡಿಸವ ಪ್ರಯತ್ನಗಳಾದರೆ., ಕನ್ನಡ ಶಾಲೆಗಳನ್ನು ಮುಂದಿನ ತಲೆಮಾರಿನವರೆಗೂ ಕಾಪಾಡಿಕೊಳ್ಳಲು ಸಾಧ್ಯವಾದಿತು. ಇಲ್ಲವಾದರೆ ಎಲ್ಲಾ ಮಾಯ ನಾಳೆ ನಾವು ಮಾಯ ಎಂಬoತಾಗುತ್ತದೆ ಅಷ್ಟೇ.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Exit mobile version