ಅಂಕೋಲಾ: ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಕಾರವಾರ ತಾಲೂಕಿನ ಅಮದಳ್ಳಿ ವೀರ ಮಹಾಗಣಪತಿ ದೇವಸ್ಥಾನದ ಒಳನುಗ್ಗಿದ ಕಳ್ಳರು,ದೇವಾಲಯದ ಗರ್ಭಗುಡಿಯ ಬಾಗಿಲು ಮುರಿದು ,ದೇವರ ಬೆಳ್ಳಿಯ ಮುಖವಾಡವನ್ನೇ ಕದ್ದ ಘಟನೆ ನಡೆದಿದೆ. ತಡರಾತ್ರಿ ಈ ಕಳ್ಳತನ ಕೃತ್ಯ ನಡೆದಿದೆ ಎನ್ನಲಾಗಿದ್ದು, ದೇವಸ್ಥಾನದ ಸಭಾಭವನದ ಬದಿಯಿಂದ ಒಳ ನುಗ್ಗಿದ ಕಳ್ಳರು ರಾತ್ರಿ 2.30 ಸುಮಾರಿಗೆ ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ .
ಈ ಕೃತ್ಯದ ದೃಶ್ಯಗಳು ದೇವಸ್ಥಾನದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ ಏನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಾರವಾರ ಗ್ರಾಮಾಂತರ ಠಾಣೆ ಪೊಲೀಸರು,ಹಾರ್ಡ ಡಿಸ್ಕ್ ಪಡೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ. ಇದೆ ವೇಳೆ ಅಮದಳ್ಳಿಯ ಇನ್ನೊಂದು ಮನೆಯೂ ಕಳ್ಳತನವಾಗಿದ್ದು,ಹೊರಗಿನಿಂದ ಬಂದ ಕಳ್ಳರು ಹೆದ್ದಾರಿ ಅಂಚಿಗೆ ಕಳ್ಳತನ ಮಾಡಿ ಪರಾರಿಯಾದರೆ? ಅಥವಾ ಸ್ಥಳೀಯರ ಕೈವಾಡವೂ ಇದೆಯೇ ಎಂಬತ್ಯಾದಿ ಮಾತುಗಳು ಸ್ಥಳೀಯರಿಂದ ಕೇಳಿ ಬಂದಿದ್ದು,ಪೊಲೀಸ್ ತನಿಖೆಯಿಂದ ಕಳ್ಳರ ಜಾಡು ತಿಳಿದು ಬರಬೇಕಿದೆ.
ಮನೆಗಳ್ಳತನ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ,ಹೆಚ್ಚಿನ ಹಾಗೂ ನಿಖರ ಮಾಹಿತಿ ತಿಳಿದು ಬರಬೇಕಿದೆ. ಅತ್ಯಂತ ಪ್ರಭಾವೀ ದೇವರ ಮುಖವಾಡ ಕ್ಕೆ ಸಂಕಷ್ಟಿ ದಿನವೇ ಕೈ ಹಚ್ಚಿದ ಕಳ್ಳರು ಯಾರೇ ಇದ್ದರು, ಅವರ ಮುಖವಾಡ ಕಳಚಿ ಬಿದ್ದು ಶಿಕ್ಷೆಗೆ ಗುರಿಯಾಗುವುದು ನಿಶ್ಚಿತ ಎಂದು ಭಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಅಕ್ಷಯ ತೃತೀಯ ದಿನದಂದು ಶ್ರೀ ದೇವರ 40 ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿದ್ದು, ನಾಡಿನ ಹಾಗೂ ಇತರೆಡೆಯ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ