Focus News
Trending

ಆಮದು ಅಭ್ಯರ್ಥಿಯ ನಾಯಕತ್ವದಿಂದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಳಾಹೀನವಾಗಿದೆ: ಕೆ.ಪಿ.ಸಿ.ಸಿ.ಕಛೇರಿಯಲ್ಲಿ ಮಾರ್ದನಿಸಿದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಬೆಂಗಳೂರು : ಹೊನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿಯವರ ರಾಜಿನಾಮೆಯನ್ನು ತಕ್ಷಣ ಸ್ವೀಕರಿಸಿ, ಯಾವುದೇ ಮಾತುಕತೆ ನಡೆಸದೆ, ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ 24 ಗಂಟೆಯಲ್ಲಿ ಹೊಸ ಅಧ್ಯಕ್ಷರನ್ನು ನೇಮಿಸಿರುವ ಕುರಿತಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿಯವರ ನೇತ್ರತ್ವದಲ್ಲಿ ಶನಿವಾರ ಮುಂಜಾನೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನಕ್ಕೆ ತೆರಳಿ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ ಅವರಿಗೆ ಮನವಿ ಪತ್ರ ನೀಡಿ ತಮ್ಮ ಅಸಮಾಧಾನವನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲು-ರಾತ್ರಿ ಶ್ರಮಪಟ್ಟು ದುಡಿದ ಕಾಂಗ್ರೆಸ್ ಪಕ್ಷದ ಮುಖಂಡ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿಯವರ ರಾಜೀನಾಮೆಯನ್ನು ೨೪ ಗಂಟೆಯಲ್ಲಿ ಅಂಗೀಕರಿಸುವ ಅಗತ್ಯವಿತ್ತೆ ? ಜಿಲ್ಲೆಯಲ್ಲಿ ಎಲ್ಲರಿಗೂ ಒಂದೇ ಮಾನದಂಡವಲ್ಲವೇ? 40 ವರ್ಷ ಪಕ್ಷಕ್ಕಾಗಿ ಸೇವೆ ಸಲ್ಲಿಸಿ,ಕಾರಣಾಂತರಗಳಿoದ ಮನನೊಂದು ಬ್ಲಾಕ್ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಪಕ್ಷದ ಮುಖಂಡರು ಜಗದೀಪ್ ತೆಂಗೇರಿಯವರಿಗೆ ಮನವೊಲಿಸುವ ಪ್ರಯತ್ನ ಮಾಡಬಹುದಿತ್ತು.ಅವರನ್ನು ಕರೆದು ಸಮಸ್ಯೆಯನ್ನು ಆಲಿಸಬಹುದಿತ್ತು.ಆದರೆ ಇದಾವುದನ್ನು ಮಾಡದ ಪಕ್ಷದ ಜವಾಬ್ದಾರಿ ಹೊತ್ತ ಜಿಲ್ಲಾ ನಾಯಕರು ಏಕಾಏಕಿ ತೆಂಗೇರಿಯವರ ರಾಜೀನಾಮೆಯನ್ನು 24 ಗಂಟೆಯಲ್ಲಿ ಅಂಗೀಕರಿಸಿ, ಮಧ್ಯರಾತ್ರಿ ಯಾರನ್ನು ಕೇಳದೇ ಹೊಸ ಅಧ್ಯಕ್ಷರನ್ನು ನೇಮಿಸಿರುವುದು ಸರ್ವಾಧಿಕಾರಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದು ಆಕ್ರೋಶದಿಂದ ನುಡಿದರು.


ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ ಮನವಿ ಪತ್ರದಲ್ಲಿ ಹೊಸ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಕೆಲವು ಮಾನದಂಡಗಳಿದ್ದು ಅವೆಲ್ಲವುಗಳನ್ನು ಗಾಳಿಗೆ ತುರಲಾಗಿದ್ದು, ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಕ್ಕೆ ಮೊದಲ ಮನ್ನಣೆ ನೀಡಬೇಕು. ಕಾರ್ಯಕರ್ತರ ಸಭೆ ಕರೆದು ಶಾಸಕರು, ಮಾಜಿ ಶಾಸಕರು, ಪ್ರಮುಖ ಮುಖಂಡರ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು. ಇದು ಯಾವುದನ್ನು ಮಾಡದೆ ಮಧ್ಯರಾತ್ರಿ ಆದೇಶ ಪ್ರತ್ರಕ್ಕೆ ಸಹಿ ಪಡೆದಿರುವ ಹಿಂದೆ ಸೇಡಿನ ರಾಜಕೀಯ ಕೆಲಸ ಮಾಡಿದೆಯೇ ಎಂದು ಪ್ರಶ್ನಿಸಲಾಗಿದೆ.

ಪಕ್ಷದ ಹಿರಿಯ ನಾಯಕರು ಪಕ್ಷದಲ್ಲಿನ ಬೆಳವಣಿಗೆಯನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದೆ.ಈಗ ಆಗಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಪ್ರತಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ತೆಂಗೇರಿಯವರು ತಮ್ಮ ಜೀವನದಲ್ಲಿ ಪ್ರಾಮಾಣಿಕ ರಾಜಕಾರಣ ಮಾಡಿದ್ದಾರೆ.ತಾವು ಬಾಡಿಗೆ ಮನೆಯಲ್ಲಿದ್ದರೂ,ಪಕ್ಷದ ಕಾರ್ಯಾಲಯವನ್ನು ತಮ್ಮ ಸ್ವಂತ ದುಡ್ಡಿನಿಂದ ನಿಭಾಯಿಸಿದವರು.ತಮ್ಮ ಪತ್ನಿ ಅನಾರೋಗ್ಯದಿಂದ ಮೃತಪಟ್ಟಾಗಲೂ, ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದನ್ನು ಊರಿನ ಜನ ಕಣ್ಣಾರೆ ಕಂಡಿದ್ದಾರೆ.ಅವರ ಒತ್ತಾಸೆಯಿಂದಲೇ ನಮ್ಮ ಭಾಗದಲ್ಲಿ ಹಲವಾರು ಮಂದಿ ರಾಜಕೀಯಕ್ಕೆ ಬಂದವರು. ಅಂತವರಿಗೆ ಪಕ್ಷದ ನಾಯಕರಿಂದ ಇಂತಹ ದುಃಸ್ಥಿತಿ ಬಂದಿರುವುದು ತೀರಾ ಖಂಡನೀಯ ಎನ್ನಲಾಗಿದೆ.

ಕಳೆದ ಒಂದು ವರ್ಷದಿಂದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಳಾಹೀನವಾಗಿದೆ. ಆಮದು ಅಭ್ಯರ್ಥಿಯ ನಾಯಕತ್ವದಿಂದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ಸಂಪೂರ್ಣ ಕಳಾಹೀನವಾಗುತ್ತಿದೆ. ಪಕ್ಷದ ಜವಾಬ್ದಾರಿ ಹೊತ್ತವರು ತೇಂಗೇರಿಯವರoತಹ ಪ್ರಾಮಾಣಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇಂತವರಿoದ ಪಕ್ಷದ ಸಂಘಟಣೆಗೆ ತೊಡಕಾಗುತ್ತಿದೆ. ಇಂತಹ ಮಾನಸಿಕ ಒತ್ತಡದಿಂದಲೇ ತೆಂಗೇರಿಯವರು ರಾಜೀನಾಮೆ ಕೊಡುವ ಸ್ಥಿತಿ ಬಂದಿರುವುದು ವಿರ‍್ಯಾಸ ಎಂದು ಪತ್ರದಲ್ಲಿ ನಮೂದಿಸಲಾಗಿದೆ.

ಜಗದೀಪ ಎನ್ ತೆಂಗೇರಿಯವರೊoದಿಗೆ ಪಕ್ಷದ ಹಿರಿಯ ನಾಯಕರು ಮಾತುಕತೆ ನಡೆಸಿ ಅವರಿಗೆ ಸೂಕ್ತವಾದ ಸ್ಥಾನ ಮಾನ ನೀಡಬೇಕು. ಇಲ್ಲದಿದ್ದರೇ ಅವರಿಗೆ ನ್ಯಾಯ ಸಿಗುವವರೆಗೂ ನಾವು ವಿರಮಿಸುವುದಿಲ್ಲ.ವಿಧ್ಯಾರ್ಥಿ ಕಾಂಗ್ರೆಸ್,ಯುಥ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಳೆದ ೪೦ ವರ್ಷ ಪಕ್ಷಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಜಗದೀಪ್ ತೆಂಗೇರಿಯವರಿಗೆ ಸೂಕ್ತ ಸ್ಥಾನಮಾನ ಪಕ್ಷ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ತೆಂಗೇರಿಯವರನ್ನು ಬಿಟ್ಟು ನಾವು ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಮುಂದಾಗದಿರುವ ಕುರಿತಂತೆ ನಿರ್ಣಯ ಕೈಗೊಂಡಿದ್ದು, ಪಕ್ಷದ ಹಿರಿಯ ನಾಯಕರು ಸ್ಥಳಕ್ಕೆ ಆಗಮಿಸಿ ಸೂಕ್ತ ನಿರ್ಣಯ ಕೈಗೊಳ್ಳದಿದ್ದಲ್ಲಿ ಮುಂದಿನ ಬೆಳವಣಿಗೆಗೆ ನಾವು ಕಾರಣರಲ್ಲ ಎನ್ನುವ ಸ್ಪಷ್ಟ ಸಂದೇಶ ಸಾರುತ್ತಿದ್ದೇವೆ.ದಯವಿಟ್ಟು ಪಕ್ಷದ ನಾಯಕರು ಪಕ್ಷಕ್ಕಾಗಿ ಎಲ್ಲವನ್ನೂ ಸಮರ್ಪಿಸಿಕೊಂಡ ಜಗದೀಪ ಎನ್.ತೆಂಗೇರಿಯವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ಪತ್ರದಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳಲಾಗಿದೆ.

ಎಲ್ಲವನ್ನೂ ಶಾಂತ ಚಿತ್ತತೆಯಿಂದ ಆಲಿಸಿದ ಜಿ.ಸಿ.ಚಂದ್ರಶೇಖರ, ಜಗದೀಪ್ ಎನ್ ತೆಂಗೇರಿಯವರಂತ ಪಕ್ಷದ ಪ್ರಾಮಾಣಿಕ ಮುಖಂಡರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದರು. ಅವರ ನೋವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೊನ್ನಾವರ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ತುಳಸಿ ಬೀರು ಗೌಡ,ಇಂಟೆಕ್ ವಿಭಾಗದ ಪ್ರಧಾನ ಕಾರ್ಯದರ್ಶಿ ಕೇಶವ್ ಮೇಸ್ತ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮೇಸ್ತ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಬ್ರಾಜಿಲ್ ಪಿ.ಪಿಂಟೊ,ಬ್ಲಾಕ್ ಕಾಂಗ್ರೆಸ್‌ನ ಉದಯ ಎಸ್.ಮೇಸ್ತ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಜಿಲ್ಲಾ ಕಾಂಗ್ರೆಸ್ ಸದಸ್ಯ ಹನೀಪ್ ಶೇಖ, ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯ್ಯಾ ಶೇಖ,ಬಿಸಿಸಿ ಸದಸ್ಯ ವಾಸುದೇವ ಪುಲ್ಕರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಪಾರೂಕ್ ಶೇಖ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುಪ್ಪು ಗೌಡ, ವಿಧ್ಯಾರ್ಥಿ ಕಾಂಗ್ರೆಸ್ ಕಾರ್ಯದರ್ಶಿ ಲಾರ್ಸನ್ ರೊಡ್ರಗಿಸ್ , ಮನ್ಸೂರ್ ಸೈಯದ್, ಬ್ಲಾಕ್ ಕಾಂಗ್ರೆಸ್ ಸದಸ್ಯ ಸುರೇಶ್ ರುಕ್ಕು ಮೇಸ್ತ, ಸಂತೋಷ ಮೇಸ್ತ, ವೆಂಕಟೇಶ ಮೇಸ್ತ, ವಿಶಾಲ ಮೇಸ್ತ, ಜಿಲ್ಲಾ ಕಾಂಗ್ರಸ್ ಹಿಂದುಳಿದ ವರ್ಗ ವಿಭಾಗದ ಕಾರ್ಯದರ್ಶಿ ಗಜಾನನ ಆರ್.ನಾಯ್ಕ, ಶ್ರೀರಾಮ್ ಜಾದುಗಾರ, ಮಾದೇವ ನಾಯ್ಕ ಕರ್ಕಿ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಮಂಜು ಮುಕ್ರಿ, ಬಿಸಿಸಿ ಕಾರ್ಯದರ್ಶಿ ಗಣೇಶ ಆಚಾರಿ, ಬಿಸಿಸಿ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಜಗದೀಶ ಮಹಾಲೆ, ಮಾಜಿ ಪಟ್ಟಣ ಪಂಚಾಯತ್ ಸದಸ್ಯೆ ಶ್ರೀಮತಿ ಸುಧಾ ಗಜಾನನ ನಾಯ್ಕ ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button