ಅಂಕೋಲಾ: ತಾಲೂಕಿನ ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ವತಿಯಿಂದ ಅಂಗಾಂಗ ದಾನ ಮತ್ತು ರಕ್ತದಾನದ ಮಹತ್ವಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಅಂಗಾಂಗ ದಾನದ ವಾಗ್ದಾನ ಪತ್ರಕ್ಕೆ ಸಹಿ ಹಾಕಿದರೆ, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ಬಾರಿ ರಕ್ತದಾನ ಮಾಡಿ ಮಾದರಿಯಾದರು ಅಂಕೋಲಾ ತಾಲೂಕಿನ ಪೂಜಗೇರಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ತನ್ನ ಶೈಕ್ಷಣಿಕ ಸಾಧನೆಯ ಜೊತೆ ಜೊತೆಯಲ್ಲಿಯೇ ಹತ್ತಾರು ವಿಧಾಯಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದು,ಜೂನ್ 1 ರಂದು ಮಹತ್ವಪೂರ್ಣ ಕಾರ್ಯಕ್ರಮ ಆಯೋಜಿಸುವ ಮೂಲಕ ಮತ್ತೆ ಗಮನ ಸೆಳೆದಿದೆ.
ಕಾಲೇಜಿನ ರೆಡ್ ಕ್ರಾಸ್ ಯೂತ್ ವಿಂಗ್, ಎನ್ ಸಿಸಿ ಘಟಕ ಮತ್ತು ಐ ಕ್ಯೂ ಎಸಿ ಘಟಕ, ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾರವಾರ ಹಾಗೂ ಅಂಕೋಲಾ ತಾಲೂಕು ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಾಲೇಜಿನ ಸಭಾಭವನದಲ್ಲಿ ಅಂಗಾಂಗ ದಾನ ಪ್ರತಿಜ್ಞಾವಿಧಿ ಸಮಾರಂಭ ಮತ್ತು ಆ ಬಳಿಕ ತಾಲ್ಲೂಕು ಆಸ್ಪತ್ರೆಯಲ್ಲಿ ರಕ್ತದಾನ ವಿಶೇಷ ಶಿಬಿರ ಆಯೋಜಿಸಲಾಗಿತ್ತು.
ಕಾಲೇಜಿನಲ್ಲಿ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಸಮೀಕ್ಷಣಾಧಿಕಾರಿಯಾಗಿರುವ ಡಾ.ಅರ್ಚನಾ ನಾಯ್ಕ ಮಾತನಾಡಿ, ಭಾರತದಲ್ಲಿ 10 ಲಕ್ಷಕ್ಕೂ ಅಧಿಕ ಜನ ಅಂಗಾಂಗ ದಾನಿಗಳಿದ್ದಾರೆ. ವ್ಯಕ್ತಿಯ ಮರಣದ ನಂತರ ನಾಲ್ಕು ಗಂಟೆಯ ಒಳಗೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದಲ್ಲಿ ಅಂಗಾಂಗಗಳು ಉಪಯೋಗಕ್ಕೆ ಬರುತ್ತವೆ, ಸತ್ತ ನಂತರ ದೇಹ ಮಣ್ಣಾಗುವ ಇಲ್ಲವೇ ಸುಟ್ಟು ಬೂದಿಯಾಗುವ ಬದಲು, ಸತ್ತ ನಂತರವೂ ಅಂಗಾಂಗಗಳ ದಾನದಿಂದ ಇತರರ ಜೀವ ಉಳಿಸುವ ಮಹತ್ಕಾರ್ಯ ಮಾಡಬಹುದು ಎಂದರು.
ಕಾರವಾರದ ರಕ್ತ ನಿಧಿಯ ವೈದ್ಯಾಧಿಕಾರಿ ಡಾ. ನಂದಿನಿ ಎಸ್ ನಾಯ್ಕ ಮಾತನಾಡಿ, 18ರಿಂದ 65 ವರ್ಷದ ಒಳಗಿನ ಯಾವುದೇ ಆರೋಗ್ಯವಂತ ವ್ಯಕ್ತಿಗಳು ನಿರ್ಭೀತಿಯಿಂದ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಕೇವಲ ರಕ್ತ ಪಡೆದ ರೋಗಿಗಳಿಗಷ್ಟೇ ಪ್ರಯೋಜನ ದೊರೆಯದೇ, ರಕ್ತದಾನಿಗಳಿಗೂ ಹಲವು ಹೃದಯ ಪ್ರಯೋಜನಗಳಿದ್ದು ಅವರ ಆರೋಗ್ಯ ಭಾಗ್ಯ ವೃದ್ಧಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಶಾರದಾ ಭಟ್, ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ದೇವರ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆಯಂತೆ ಅಂಗಾಂಗ ಮತ್ತು ರಕ್ತದಾನದ ಮಾಡಿದರೂ ಕೂಡ ದೇವರ ಕೃಪೆಗೆ ಪಾತ್ರರಾದಂತೆಯೇ ಹಾಗಾಗಿ. ಸಾಧ್ಯವಾದಷ್ಟು ಜನರಿಗೆ ಜಾಗೃತಿಯನ್ನು ಉಂಟು ಮಾಡಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸೋಣ ಎಂದರು.
ಕಾಲೇಜಿನ ರೆಡ್ ಕ್ರಾಸ್ ಯುತ್ ವಿಂಗ್ ಸಂಚಾಲಕರು ಮತ್ತು ಹಿರಿಯ ಉಪನ್ಯಾಸಕರಾದ ಶ್ರೀಮತಿ ರಾಜೇಶ್ವರಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಎನ್ ಸಿಸಿ ಅಧಿಕಾರಿ ಸತೀಶ ಮಹಾಲೆ ವಂದಿಸಿದರು. ವಿದ್ಯಾರ್ಥಿನಿ ಸೌಜನ್ಯ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.
ತಾಲೂಕು ಆರೋಗ್ಯ ಕೇಂದ್ರದ ಶೈಲಜಾ ಭಂಡಾರಿ ಮತ್ತು ಸಿಬ್ಬಂದಿಗಳು, ಕಾಲೇಜಿನ ಉಪನ್ಯಾಸಕರಾದ ಸುಮಯ್ಯ ಸಯ್ಯದ್, ಸವಿತಾ ನಾಯಕ, ವಿಜಯಾ ಪಾಟೀಲ್, ಮಧುರಶ್ರೀ ಮತ್ತಿತರು ಇದ್ದರು. ರಕ್ತದಾನ ಶಿಬಿರದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಜಗದೀಶ ನಾಯಕ ಉಪಸ್ಥಿತರಿದ್ದು ಮೇಲ್ವಿಚಾರಣೆ ನಡೆಸಿದರು.
ಸ್ವತಃ ಕಾಲೇಜಿನ ಪ್ರಾಚಾರ್ಯರೂ ಸೇರಿದಂತೆ ನಾಲ್ವರು ಉಪನ್ಯಾಸಕರು ಅಂಗಾಂಗ ದಾನ ವಾಗ್ದಾನ ಪತ್ರಕ್ಕೆ ಸಹಿ ಹಾಕಿದರೆ., ಬಿಸಿಲ ಬೇಗೆಯನ್ನು ಲೆಕ್ಕಿಸದೆ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತಿತರರು ರಕ್ತದಾನ ಮಾಡಿದರು. ಇವರಲ್ಲಿ ಪ್ರಥಮ ಬಾರಿ ರಕ್ತದಾನ ಮಾಡಿದವರೇ ಹೆಚ್ಚಿದ್ದು, ವಿದ್ಯಾರ್ಥಿನಿಯರೂ ಅಳುಕಿಲ್ಲದೇ ರಕ್ತದಾನ ಮಾಡಿ ಮಾದರಿಯಾದರು ಇತ್ತೀಚೆಗೆ ಮೊದಲ ಬಾರಿ ಮತದಾನ ಮಾಡಿದ್ದ ನಾವು ಈಗ ಮೊದಲ ಬಾರಿ ರಕ್ತದಾನ ಮಾಡಿದ್ದಕ್ಕೂ ಹೆಮ್ಮೆ ಎನಿಸುತ್ತದೆ ಎಂದು ಕೆಲ ವಿದ್ಯಾರ್ಥಿ ಪ್ರತಿನಿಧಿಗಳು ಅನಿಸಿಕೆ ವ್ಯಕ್ತಪಡಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ