ಕುಮಟಾ: ವಧೆ ಮಾಡುವ ಉದ್ಧೇಶದಿಂದ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಂಟೇನರ್ ಮೂಲಕ ಸಾಗಿಸುತ್ತಿರುವಾಗ ತಡ ರಾತ್ರಿ ಪೊಲೀಸ್ ತಪಾಸಣೆ ವೇಳೆ ದುಷ್ಕರ್ಮಿಗಳು ಸಿಕ್ಕಿಬಿದ್ದ ಘಟನೆ ಕುಮಟಾದಲ್ಲಿ ನಡೆದಿದೆ. ಕಂಟೇನರ್ ಮೂಲಕ ಹಿಂಸಾತ್ಮಕವಾಗಿ 21 ಎತ್ತುಗಳನ್ನು ವಧೆ ಮಾಡುವ ಉದ್ಧೇಶದಿಂದ ಅಕ್ರಮವಾಗಿ ಕಲಘಟಗಿಯಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ ವೇಳೆ ಕುಮಟಾದ ಹೊಳೆಗದ್ದೆ ಟೋಲ್ ಗೇಟ್ ಸಮೀಪ ತಪಾಸಣೆ ನಡೆಸಿ ವಾಹನ ಸಮೇತ ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಾಲಕ ಜೈನುದ್ದಿನ್ ಜಕ್ರಿಯಾ, ಶಾಹಿದ್, ಮುಕ್ರಂ ಈ ಮೂವರು ಆರೋಪಿತರಾಗಿದ್ದು, ಈ ಮೂವರಲ್ಲಿ ಶಾಹಿದ್, ಮುಕ್ರಂ ತಲೆಮರಿಸಿಕೊಂಡಿದ್ದಾರೆ. ಕಳೆದ ಕೆಲ ದಿನದ ಹಿಂದಷ್ಟೆ ಖಚಿತ ಮಾಹಿತಿ ಮೇರೆಗೆ ಕುಮಟಾದ ಹೊಳೆಗದ್ದೆ ಟೋಲ್‌ಗೆಟ್‌ನಲ್ಲಿಯೇ ಅಕ್ರಮವಾಗಿ ಸಾಗಿಸುತ್ತಿದ್ದ ಕಂಟೇನರ್ ಒಂದನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಘಟನೆಯ ಬೆನ್ನಲ್ಲೆ ಇದೀಗ ಜೂನ್ 5ರ ತಡರಾತ್ರಿ ವೇಳೆ ತಪಾಸಣೆ ವೇಳೆ ಸುಮಾರು 8 ಲಕ್ಷಕ್ಕೂ ಅಧಿಕ ಮೌಲ್ಯದ 21 ಎತ್ತುಗಳನ್ನು ರಕ್ಷಣೆ ಮಾಡಲಾಗಿದೆ. ಜಾನುವಾರು ಸಮೇತವಾಹನವನ್ನು ಕುಮಟಾ ಪೋಲಿಸ್ ಠಾಣೆಗೆ ತರಲಾಗಿದ್ದು, ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ