ಅಂಕೋಲಾ: ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಯಲ್ಲಿ 194 . 6 ಮಿಲಿ ಮೀಟರ್ ನಷ್ಟು ಮಳೆಯಾಗಿದೆ. ಜೈಹಿಂದ್ ಹೈಸ್ಕೂಲ್ ಎದುರು, ಮೀನು ಪೇಟೆ ತಿರುವು ಸೇರಿದಂತೆ ಇತರೆ ಕೆಲ ವಾರ್ಡಗಳ ವ್ಯಾಪ್ತಿಯಲ್ಲಿಯೂ, ಉಕ್ಕಿ ಹರಿದ ನೀರು ರಸ್ತೆಗೆ ಹಾಗೂ ತಗ್ಗು ಪ್ರದೇಶಕ್ಕೆ ನುಗ್ಗಿತ್ತು. ಈ ಹಿಂದೆ ಹೊಸ ಕಾಮಗಾರಿ ಹೆಸರಿನಲ್ಲಿ ಗುತ್ತಿಗೆದಾರ ನಡೆಸಿದ ಬೇಕಾಬಿಟ್ಟಿ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಟ್ಟಣದ ಜನನಿಬಿಡ ಕಿತ್ತೂರು ಚೆನ್ನಮ್ಮ ರಸ್ತೆಯಂತೂ ರಾಡಿ ನೀರಿನ ಕೆರೆಯಂತೆ ಕಂಡು ಬಂತು.
ಇಲ್ಲಿನ ಮಳೆಗಾಲದ ಆವಾಂತರದ ಬಗ್ಗೆ ಸ್ಥಳೀಯರಿಂದ ಕೇಳಿ ತಿಳಿದಿದ್ದ ಪುರಸಭೆಯ ಈಗಿನ ಇಂಜಿನಿಯರ, ಕಳೆದ 2-3 ದಿನಗಳ ಹಿಂದಷ್ಟೇ ಇಲ್ಲಿನ ಗಟಾರ ಹೂಳೆತ್ತುವ ಕಾಮಗಾರಿಗೆ ವೇಗ ನೀಡಿ ತಕ್ಕ ಮಟ್ಟಿನ ವ್ಯವಸ್ಥೆ ಸುಧಾರಣೆಗೆ ಪ್ರಯತ್ನಿಸಿದ್ದರಾದ್ರು, ಆದರೆ, ತಾತ್ಕಾಲಿಕವಾಗಿ ಮತ್ತು ಶಾಶ್ವತ ವ್ಯವಸ್ಥೆ ಸುಧಾರಣೆಗೆ ಮತ್ತಷ್ಟು ಒತ್ತು ನೀಡಲೇಬೇಕಿದೆ. ಕೆ.ಸಿ ರಸ್ತೆ ಬಹುತೇಕ ಜಲಾವೃತವಾಗಿ ಜನ ಸಂಚಾರ, ವಾಹನಗಳ ಓಡಾಟಕ್ಕೆ ತೀವ್ರ ಸಮಸ್ಯೆ ಎದುರಾಯಿತು. ಕೂಡಲೇ ಎಚ್ಚೆತ್ತುಕೊಂಡ ಪುರಸಭೆಯವರು ಜೆ.ಸಿ.ಬಿ ಯಂತ್ರ ಬಳಸಿ ನೀರು ಹರಿದು ಹೋಗುವ ವ್ಯವಸ್ಥೆ ಸರಿಪಡಿಸಲು ಯತ್ನಿಸಿದರು.
ಅಂಕೋಲಾದಿoದ ಕಾರವಾರ ಕಡೆ ಸಾಗುವ ಮುಖ್ಯರಸ್ತೆಯ ಕೆಳ ಪ್ರದೇಶವಾದ ಶಿರಕುಳಿ ಅಜ್ಜಿಕಟ್ಟಾ ಗಡಿ ಪ್ರದೇಶದಲ್ಲಿ ಈ ಹಿಂದಿನಿoದಲೂ ಇರುವ ಸಾರ್ವಜನಿಕ ಬೇಡಿಕೆಗೆ ಸರಿಯಾಗಿ ಸ್ಪಂದನೆ ಸಿಗದಿದ್ದರಿಂದ ಅಲ್ಲಿ ನೀರು ನುಗ್ಗಿ ಮತ್ತೆ ಆವಾಂತರ ಮುಂದುವರೆದಿದೆ. ಪಟ್ಟಣದ ಹೊನ್ನೆಕೇರಿ ವಾರ್ಡನಲ್ಲಿಯೂ ಮುಖ್ಯ ರಸ್ತೆ ಕೊನೆ ಭಾಗದಲ್ಲಿ ನೀರು ನುಗ್ಗಿರುವುದನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಅಲ್ಲಿನ ನಿವಾಸಿ ಮತ್ತು ಯುವ ಮುಖಂಡ ನೋರ್ವ,ಸ್ಥಳೀಯ ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದಂತಿತ್ತು.
ತಾಲೂಕಿನ ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳೆ ಬಳಿ ಐಆರ್‌ಬಿ ಕಾಮಗಾರಿ ಅವಾಂತರದಿAದ ನೀರು ಚರಂಡಿಯಲ್ಲಿ ಹರಿಯಲು ಸಾಧ್ಯವಾಗದೇ ರಸ್ತೆ ತುಂಬಿ ಹರಿದು ಹೆದ್ದಾರಿ ಪಕ್ಕದ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿದ್ದರಿಂದ ಅಂಗನವಾಡಿ ಕೊಠಡಿಯಲ್ಲಿರುವ ಆಹಾರ ಸಾಮಗ್ರಿಗಳು ಮತ್ತಿತರ ವಸ್ತುಗಳಿಗೆ ಹಾನಿಯುಂಟಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ