Important
Trending

ಸಿದ್ದಾಪುರದ ವಿವಿಧ ಕಾಲೇಜುಗಳಿಗೆ ಶಾಸಕರ ಭೇಟಿ – ಮೂಲಭೂತ ಸೌಲಭ್ಯ ವೀಕ್ಷಿಸಿದ ಭೀಮಣ್ಣ ನಾಯ್ಕ

ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಾಲೂಕಿನ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯ ಹಾಗೂ ಸಮಸ್ಯೆ ಆಲಿಸಿದರು. ತಾಲೂಕಿನ ಅವರಗುಪ್ಪಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳೊoದಿಗೆ ಚರ್ಚೆ ನಡೆಸಿ ಕಾಲೇಜಿನ ಸಮಸ್ಯೆ ಆಲಿಸಿ ಕಾಲೇಜಿಗೆ ಅಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು.

ಅಲ್ಲದೆ, ಪ್ರವೇಶಾತಿ ಬಯಸಿ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವಕಾಶ ನೀಡುವಂತೆ ಪ್ರಚಾರ್ಯರಿಗೆ ಸೂಚಿಸಿದರು. ನಂತರ ಹಾಳದಕಟ್ಟಾ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಆಗಮಿಸಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಉಪನ್ಯಾಸಕರೊಂದಿಗೆ ಸಭೆ ನಡೆಸಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರೀಯೆ, ಕಲಿಕೆಯ ಗುಣಮಟ್ಟ ಹಾಗೂ ಇತರ ಸೌಲಭ್ಯಗಳ ಮಾಹಿತಿ ಪಡೆದುಕೊಂಡರು.

ಮಧ್ಯಾಹ್ನ ಇಲ್ಲಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿ ಪ್ರಾಚಾರ್ಯರು, ಉಪನ್ಯಾಸಕರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಹಾಜರಾತಿ, ಶಿಸ್ತು ಮತ್ತಿತರ ವಿಷಯಗಳ ಕುರಿತು ಮಾಹಿತಿ ಪಡೆದು ಗುಣಮಟ್ಟದ ಶಿಕ್ಷಣ ನೀಡುವಂತೆ ಸೂಚಿಸಿದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button