Important
Trending

ಪ್ರಕೃತಿ ವಿಕೋಪ ಹಾನಿ ಮತ್ತು ಪರಿಹಾರ : ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ಮಂಕಾಳ್ ವೈದ್ಯ ಸಭೆ

ಭಟ್ಕಳ: ತಾಲೂಕಾ ಆಡಳಿತ ಕಛೇರಿಯಲ್ಲಿ ಮುಂಗಾರು ಪ್ರಕೃತಿ ವಿಕೋಪ ಹಾನಿ ಹಾಗೂ ಪರಿಹಾರ ವಿಕೋಪಕ್ಕೆ ಸಂಬಂಧಿಸಿದಂತೆ ಇಂದು ಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ಮಂಕಾಳ ಎಸ್ ವೈದ್ಯ ಸಭೆ ನಡೆಸಿದರು. ಸಭೆಯಲ್ಲಿ ಇಲಾಖಾವಾರು ಅಧಿಕಾರಿಗಳಿಗೆ ಮಳೆಗಾಲದ ಪೂರ್ವ ತಯಾರಿಯ ಕುರಿತಂತೆ ಆಯಾ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಕಾಮಗಾರಿಯ ಪ್ರಗತಿಯ ಕುರಿತಂತೆ ಕೇಳಿದ ಸಚಿವರು, ಸಮಂಜಸವಾಗಿ ಉತ್ತರ ನೀಡದ ಅಧಿಕಾರಗಳ ಬಗ್ಗೆ, ಕಾಮಗಾರಿಯಲ್ಲಾಗುತ್ತಿರು ವಿಳಂಬ ನೀತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ ಕಾಮಗಾರಿ ಅರ್ಧಕ್ಕೆ ನಿಂತಿರುವುದರ ಬಗ್ಗೆ ಭಟ್ಕಳ ಆರೋಗ್ಯಾಧಿಕಾರಿಗಳು ಸಚಿವರ ಗಮನಕ್ಕೆ ತರಲಾಗಿದ್ದು ಸಚಿವರು ವಾರ್ಡ ಕಾಮಾಗಾರಿಯನ್ನು ಸಂಪೂರ್ಣಗೊಳಿಸಿಕೊಡುವ ಭರವಸೆ ನೀಡಿದರು. ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದ್ದು ಮುಂಗಾರು ಮಳೆ ಪ್ರರಂಭವಾಗಿ ಕೃಷಿ ಚಟುವಟಿಕೆಗಳು ಶುರುವಾಗಿರುವುದರಿಂದ ರೈತರಿಗೆ ಬಿತ್ತನೆ ಬಿಜಗಳನ್ನು ನೀಡುತ್ತಿರುವುದಾಗಿ ಭಟ್ಕಳ ಕೃಷಿ ಇಲಾಖೆಯ ಅಧಿಕಾರಿಗಳು ಹೇಳಿದಾಗ ನಮಗೆ ಊಟ ಸಿಗುತ್ತಿರುವುದು ರೈತರಿಂದ ಅಂತಹ ರೈತರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಿ ಎಂದರು.

ಮುಂಗಾರು ಮಳೆ ಪ್ರಾರಂಭವಾಗಿ ವಾರ ಕಳೆದರೂ ಪುರಸಭೆ ವ್ಯಾಪ್ತಿಯಲ್ಲಿ ಇನ್ನೂ ಕೂಡ ಗಟಾರ ಸ್ವಚ್ಛಗೊಳಿಸುವ ಕೆಲಸ ಪೂರ್ಣಗೊಳ್ಳದ ಹಾಗೂ ಬೀದಿ ದೀಪ ಅಳವಡಿಸುವ ವಿಚಾರದಲ್ಲಿ ಸ್ಪಷ್ಟ ಲೆಕ್ಕಾಚಾರ ನೀಡುವಲ್ಲಿ ಗೊಂದಲಗೊಂಡ ಹಿನ್ನೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದಷ್ಟು ಬೇಗ ಗಟಾರಗಳನ್ನು ಸ್ವಚ್ಛಗೊಳಿಸುವಂತೆ ಆದೇಶ ನೀಡಿದರು.

ಮುಟ್ಟಳ್ಳಿಯಲ್ಲಿನ ನಾಲ್ಕೈದು ಮನೆಗಳು ಗುಡ್ಡ ಕುಸಿತದ ಬೀತಿಯನ್ನು ಎದುರಿಸುತ್ತಿದ್ದು ಮನೆ ಖಾಲಿ ಮಾಡಿಸುವಲ್ಲಿ ಅಧಿಕಾರಗಳು ಇನ್ನೂ ಯಶಸ್ವಿಯಾಗಿಲ್ಲ. ಗುಡ್ಡಕುಸಿತಕ್ಕೆ ಪರಿಹಾರವಾಗಿ ತಡೆಗೊಡೆಯ ಅವಶ್ಯಕತೆ ಇದೆ. ಆದರೆ ತಡೆಗೋಡೆ ನಿರ್ಮಿಸಲು 7 ಕೋಟಿ ಹಣದ ಅವಶ್ಯಕತೆ ಇದೆ. ಈ ನಡುವೆ ಅಪಾಯದ ಅಂಚಿನಲ್ಲಿರುವ ಮನೆಯವರು ಅದರ ಬದಲಾಗಿ ನಾಲ್ಕೈದು ಮನೆಗಳಿಗೆ ನೇರವಾಗಿ ಮನೆ ಕಟ್ಟುವಾಗ ವ್ಯಯಿಸಿದ 20 – 25 ಲಕ್ಷ ಮೊತ್ತವನ್ನು ನೀಡಿದರೆ ತಾವೂ ಮನೆಯನ್ನು ಬಿಡುತ್ತೇವೆ ಎಂಬ ಸೂತ್ರ ಮುಂದಿಟ್ಟಿದ್ದಾರೆಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಭಟ್ಕಳ ಸಿಟಿ ಸರ್ವೆಗೆ ಆದೇಶ ನೀಡಿ ಮೂರ್ನಾಲ್ಕು ತಿಂಗಳು ಕಳೆದರು ಪೂರ್ಣಗೊಳಿಸದೆ, ಇಲಾಖೆ ಸಂಬಂಧಪಟ್ಟ ಸರ್ವೆಯನ್ನು ಮಾಡಿಕೊಡದ ಹಿನ್ನೆಲೆಯಲ್ಲಿ ಸರ್ವೆ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಸರ್ವೆ ಇಲಾಖೆಯಲ್ಲಿ 15 ಜನ ಸಿಬ್ಬಂಧಿಗಳನ್ನು ಒದಗಿಸಿಕೊಟ್ಟರೂ ನಿಮಗೆ ಕೆಲಸ ಮಾಡಲು ಮನಸ್ಸಿಲ್ಲ, ಸಿಟಿ ಸರ್ವೆ ಆಗದಿರುವ ಕಾರಣಕ್ಕೆ ಬಡವರು ತಮ್ಮ ಜಾಗವನ್ನು ಸುಲಭವಾಗಿ ಕೃಷಿಯೇತರ ಜಮೀನಾಗಿ ಪರಿವರ್ತಿಸಲು ಸಾಧ್ಯವಾಗುತ್ತಿಲ್ಲ, ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಏಜೆಂಟರು ಬಂದರೆ ಸಂಜೆ 6 ಘಂಟೆಯ ನಂತರವು ಕಛೇರಿಯಲ್ಲಿ ಕುಳಿತು ಕೆಲಸಮಾಡಿಕೊಡುತ್ತಾರೆ ಎಂಬ ದೂರು ಕೇಳಿಬರುತ್ತಿದೆ. ಇದಕ್ಕೆಲ್ಲ ಅವಕಾಶ ಮಾಡಿಕೊಡದೆ, ಬಡವರು ಬಂದರೆ ಅವರನ್ನು ಕೂಡಿಸಿ ಮಾತನಾಡಿಸಿ ತಿಳುವಳಿಕೆ ನೀಡಿ ಕೆಲಸ ಮಾಡಿಕೊಡಿ ಆ ದೇವರು ನಿಮಗೆ ಒಳ್ಳೆದು ಮಾಡುತ್ತಾನೆ. ನೀವು ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸದರೆ ನಾನು ಕೂಡ ನಿಮಗೆ ಬೆಂಬಲವಾಗಿ ಇರುತ್ತೆನೆ ಎಂದು ಸಚಿವರು ಹೇಳಿದರು.

ಸಭೆಯಲ್ಲಿ ಸಹಾಯಕ ಆಯುಕ್ತರಾದ ಡಾ.ನಯನಾ, ಭಟ್ಕಳ ತಹಶಿಲ್ದಾರರಾದ ನಾಗರಾಜ್ ನಾಯ್ಕಡ, ಹೊನ್ನಾವರ ತಹಶಿಲ್ದಾರರಾದ ರವಿರಾಜ ದಿಕ್ಷಿತ್ ಮತ್ತಿತರರು ಇದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Back to top button