ಖಾಸಗಿ ಬಸ್ ನಲ್ಲಿ ಪಕ್ಕದ ರಾಜ್ಯಕ್ಕೆ ಅಕ್ರಮವಾಗಿ ಕಪ್ಪೆಗಳ ಸಾಗಾಟ: 40ಕ್ಕೂ ಹೆಚ್ಚು ಕಪ್ಪೆಗಳ ರಕ್ಷಣೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಪ್ಪೆಗಳ ಅಕ್ರಮ ಸಾಗಾಟ ಜೋರಾಗಿರುವ ಮಾಹಿತಿ ಸಿಕ್ಕಿದೆ. ಕೆಲವು ಅಕ್ರಮ ದಂಧೆ ಕೋರರು ಕಪ್ಪೆಗಳನ್ನು ಹಿಡಿದು ಪಕ್ಕದ ರಾಜ್ಯ ಗೋವಾಕ್ಕೆ ಸಾಗಿಸುತ್ತಿದ್ದಾರೆ. ಅಲ್ಲಿನ ಕೆಲ ರೆಸ್ಟೋರೆಂಟ್ ಸೇರಿ ಹಲವೆಡೆ ಕಪ್ಪೆ ಮಾಂಸಕ್ಕೆ ಭಾರೀ ಬೇಡಿಕೆ ಇದೆ ಎನ್ನಲಾಗಿದೆ. ಇದೀಗ ಕಾರವಾರ ಕಡೆಯಿಂದ ಗೋವಾಕಡೆ ಕಪ್ಪೆಗಳನ್ನು ಸಾಗಿಸುತ್ತಿದ್ದ ಖಾಸಗಿ ವಾಹನ ಒಂದನ್ನು ಜಪ್ತಪಡಿಸಿಕೊಂಡಿರುವ ಅರಣ್ಯ ಇಲಾಖೆಯವರು, ಅಕ್ರಮ ದಂಧೆ ಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾಳಿ ಸೇತುವೆ ಬಳಿ ದಾಳಿ ನಡೆಸಿದ ಆರ್ ಎಫ್ ಓ ವಿಶ್ವನಾಥ ನಾಯ್ಕ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ 40 ಕ್ಕೂ ಹೆಚ್ಚು ಕಪ್ಪೆಗಳನ್ನು ರಕ್ಷಣೆ ಮಾಡಿದ್ದು, ಕಪ್ಪೆ ಸಾಗಾಟ ಮಾಡುತ್ತಿದ್ದ ಖಾಸಗಿ ಬಸ್ಸನ್ನು ವಶಕ್ಕೆ ಪಡೆದಿದೆ. ದಾಳಿಯ ಸುಳಿವರಿತೋ ಕಪ್ಪೆಗಳನ್ನು ಸಾಗಾಟ ಮಾಡುತ್ತಿದ್ದರು ನಾಪತ್ತೆಯಾಗಿದ್ದು, ಬಸ್ ಚಾಲಕ ಕಾಣಕೋಣ ನಿವಾಸಿ ಸಿದ್ದೇಶ ಪ್ರಭುದೇಸಾಯಿ ಮತ್ತು ನಿರ್ವಾಹಕ ಜಾನ್ ಎನ್ನುವವರ ಮೇಲೆ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಕ್ರಮವಾಗಿ ಕಪ್ಪೆಗಳನ್ನು ಹಿಡಿದು ಸಾಗಿಸುವ ದಂಧೆ ಕೋರರಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅಂಕೋಲಾ ತಾಲೂಕಿನಿಂದಲೂ ಕೆಲವರು ಕಪ್ಪೆ ಸಾಗಾಟ ಮಾಡುವ ಯತ್ನ ನಡೆಸಿದ್ದಾಗ, ಬಸ್ ನಿಲ್ದಾಣ ಮತ್ತಿತರೆಡೆ ಸಿಕ್ಕಿ ಬಿದ್ದ ಉದಾಹರಣೆ ಇದೆ. ಇದರ ಹೊರತಾಗಿ ಈ ಹಿಂದೆ ಕಾರವಾರ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ,ಕಪ್ಪೆ ಅಕ್ರಮ ಸಾಗಾಟ ಕ್ಕೆ ಸಂಬoಧಿಸಿದoತೆ ಪ್ರಕರಣವೂ ದಾಖಲಾಗಿದ್ದಿದೆ. ಆದರೂ ಮತ್ತೆ ಮತ್ತೆ ಕೆಲವರು ಕಪ್ಪೆಗಳ ಸಾಗಾಟದ ಕುಕೃತ್ಯಕ್ಕೆ ಮುಂದಾಗುತ್ತಿದ್ದು, ಅಂತವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version