Important
Trending

ಮುಂಗಾರು ಚುರುಕುಗೊಂಡ ಬೆನ್ನಲ್ಲೆ ಕೃಷಿ ಚಟುವಟಿಕೆ ಜೋರು: ಕೆಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುತ್ತಿಲ್ಲ ಸೂಕ್ತ ಸ್ಪಂದನೆ

ಅಂಕೋಲಾ: ಮುಂಗಾರು ಚುರುಕುಗೊಂಡ ಬೆನ್ನಿಗೇ ಎಲ್ಲೆಡೆ ಕೃಷಿ ಚಟುವಟಿಕೆಗಳು ಜೋರಾಗುವುದು ಸಾಮಾನ್ಯ. ಇದೇ ವೇಳೆ ಅಂಕೋಲಾ ತಾಲೂಕಿನ ಹಲವೆಡೆ ರೈತ ಕುಟುಂಬಗಳು ಗದ್ದೆಗಿಳಿದು, ಭೂಮಿ ಉಳುಮೆ ಮತ್ತು ಬೀಜ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಸರ್ಕಾರವೇನೋ ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಪರಿಕರ, ಬೀಜ, ಗೊಬ್ಬರ ಪೂರೈಸುತ್ತಾದರೂ ಅವು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪುವುದು ಕಷ್ಟ ಸಾಧ್ಯ ಎನ್ನುವ ಪರಿಸ್ಥಿತಿ ಮುಂದುವರೆದಿದೆ.

ಇನ್ನು ಕೆಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಸರಿಯಾದ ಮಾಹಿತಿ ಹಾಗೂ ಅವರ ಸಮಸ್ಯೆಗೆ ಸ್ವಂದನೆ ದೊರೆಯದೇ ರೈತರು ಪರಿತಪಿಸುವಂತಾಗಿದೆ. ತಾಲೂಕಿನ ಬಾಸಗೋಡ ರೈತ ಸಂಪರ್ಕ ಕೇಂದ್ರ ಇದಕ್ಕೆ ಹೊರತಲ್ಲ ಎನ್ನುವಂತಿದೆ. ಇಲ್ಲಿ ಇತೀಚೆಗೆ ವಿತರಿಸಲಾದ ಭತ್ತದ ಬೀಜದ ಕೆಲವು ಪಾಕೇಟ್ ಗಳು ಮೇಲ್ನೋಟಕ್ಕೆ ಸುಂದರವಾಗಿ ಕಾಣುತ್ತವೆಯಾದರೂ, ಬೀಜ ಮೊಳಕೆವಾಡಿಸುವಾಗ ಮತ್ತು ಬಿತ್ತಿದಾಗ ಅದರ ಫಲವತ್ತತೆ ಪ್ರಮಾಣ ಕಡಿಮೆ ಅಂದೆ ಹೇಳಲಾಗುತ್ತಿದೆ.

ಈ ಕುರಿತು ಸಂಬoಧಿತ ಕೃಷಿ ಅಧಿಕಾರಿಯನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದೇ,ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ,ಅವರು ಹಾರಿಕೆಯ ಉತ್ತರ ನೀಡಿ, ಮೇಲಾಧಿಕಾರಿಗಳಿಗೆ ಸಂಪರ್ಕಿಸಲು ತಿಳಿಸುತ್ತಾರೆ. ಹೀಗಾದರೆ ನಾವು ರೈತಾಪಿ ಜನ ಏನು ಮಾಡಬೇಕು ಎಂದು ಶೆಟಗೇರಿ ಗ್ರಾಮದ ಪ್ರಗತಿ ಪರ ರೈತ ಬೀರಣ್ಣ ಗೋವಿಂದ ನಾಯಕ ವಿಸ್ಮಯ ವಾಹಿನಿಯೊಂದಿಗೆ ತಮ್ಮ ಅಳಲು ತೋಡಿಕೊಂಡು, ಆಡಳಿತ ವ್ಯವಸ್ಥೆ ವಿರುದ್ಧ ತಮ್ಮ ಅಸಮಾಧಾನ ತೋರ್ಪಡಿಸಿದರು.

ತುಂಡು ಭೂಮಿ ಉಳ್ಳ ಸಣ್ಣ ಸಣ್ಣ ಹಿಡುವಳಿದಾರರಿಗೂ ಇಲ್ಲಿ ಬಿತ್ತನೆ ಬೀಜ ವಿತರಿಸಲು ಇಲ್ಲ ಸಲ್ಲದ ಸಬೂಬು ಹೇಳುತ್ತಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ. ಅಲ್ಲದೇ ಈ ಹಿಂದೆ ಪ್ರತಿ ವರ್ಷ ಪಾಂಡ್ಯ ಜಾತಿಯ ಭತ್ತ ಬೆಳೆಯುತ್ತಿದ್ದ ರೈತರಿಗೆ ಈ ವರ್ಷ ಅದನ್ನು ನೀಡಲೂ ಸತಾಯಿಸಿದ್ದರು ಎನ್ನಲಾಗಿದೆ. ಒಟ್ಟಾರೆಯಾಗಿ ರೈತ ಈ ದೇಶದ ಬೆನ್ನೆಲುಬು ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳದೇ, ರೈತಾಪಿ ವರ್ಗದ ಜೀವನ ಭದ್ರತೆಗೆ ಸಂಬoಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೈಜ ಕಳಕಳಿ ವ್ಯಕ್ತಪಡಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button