ಅಂಕೋಲಾ : ಸರ್ಕಾರದ ಆದೇಶದಂತೆ ನಾಡಿನಾದ್ಯಂತ ನಾಡಪ್ರಭು ಕೆಂಪೇಗೌಡ ಅವರ 515 ನೇ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು ಇದೇ ವೇಳೆ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ವಾರಕ ಭವನದಲ್ಲಿಯೂ ತಾಲೂಕ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಡು ನುಡಿಗಾಗಿ ಶ್ರಮಿಸಿದ ಕೆಂಪೇಗೌಡರಂತಹ ಮಹನೀಯರನ್ನು ಸ್ಮರಿಸುವದು, ಗೌರವಿಸುವದು ನಮ್ಮ ಸಂಸ್ಕ್ರತಿಯ ದೃಷ್ಟಿಯಿಂದ ಬಹಳ ಮುಖ್ಯ. ಇತಿಹಾಸವನ್ನು ಸ್ಮರಿಸುವದು ನಮ್ಮ ಸಂಸ್ಕ್ರತಿಯಾಗಬೇಕು ಎಂದು ಜಿ ಸಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್ ವಿ ವಸ್ತ್ರದ ತಮ್ಮ ಉಪನ್ಯಾಸದಲ್ಲಿ ಹೇಳಿದರು.
ಕನ್ನಡ ಸಂಸ್ಕ್ರತಿ ಇಲಾಖೆ ಉತ್ತರ ಕನ್ನಡ ಹಾಗೂ ತಾಲೂಕಾಡಳಿತ ಅಂಕೋಲಾ, ತಾ.ಪಂ ಅಂಕೋಲಾ ಮತ್ತು ಮರಸಭೆ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನಮ್ಮಲ್ಲಿ ಎಷ್ಟೋ ಐತಿಹಾಸಿಕ ಕಾರ್ಯಗಳು ದಾಖಲಾಗುವದಿಲ್ಲ. ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಿದಾಗ ಇಂತಹ ಇತಿಹಾಸ ಪ್ರಸಿದ್ಧರ ಜಯಂತಿ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ. ಕೆಂಪೇಗೌಡರ ದೂರದೃಷ್ಠಿತ್ವದಿಂದ ನಿರ್ಮಾಣಗೊಂಡ ಬೆಂಗಳೂರು ವಿಶ್ವದಲ್ಲೇ ವಿಶೇಷ ಸ್ಥಾನಮಾನ ಪಡೆದಿರುವದು ಹೆಮ್ಮೆಯ ವಿಚಾರ. ಇಂತಹ ಮಹನೀಯರು ಜಗತ್ತಿನಲ್ಲಿ ಎಂದಿಗೂ ಚಿರಸ್ಥಾಯಿಯಾಗಿರುತ್ತಾರೆ ಎಂದರು.
ತಹಶೀಲ್ದಾರ ಬಿ ಅನಂತ ಶಂಕರ ಅವರು ಮಾತನಾಡಿ ಓರ್ವ ಪಾಳೇಗಾರನ ಮಗನಾಗಿ ಹುಟ್ಟಿದ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಹಂಪಿ ವೈಭವದಿಂದ ಪ್ರೇರಿತರಾಗಿ ಬೆಂಗಳೂರು ನಗರವನ್ನು ನಿರ್ಮಾಣ ಮಾಡುವ ಸಂಕಲ್ಪದಿಂದ ಶ್ರಮಿಸಿದ ಕಾರ್ಯ ಅವಿಸ್ಮರಣೀಯ ಎಂದರು. ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ, ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೀಲ, ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಸವಿತಾ ಶಾಸ್ತ್ರಿಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿ .ಕೆ ಗರ್ಲ್ಸ್ ಹೈ ಸ್ಕೂಲ್ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು ಅತಿಥಿ ಗಣ್ಯರು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಣ್ಪಾರ್ಚನೆಗೈದು, ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
ಕೆಂಪೇಗೌಡರ ಜಯಂತಿಯ ಅಂಗವಾಗಿ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಭಾವಿಕೇರಿಯ ಸೆಕೆಂಡರಿ ಪ್ರೌಢಶಾಲೆಯ ವಿದ್ಯಾರ್ಥಿ ನಾಗರಾಜ ಗೌಡ (ಪ್ರಥಮ ),ಕೇಣಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷರಾ ಮಹಾಲೆ ( ದ್ವಿತೀಯ), ಪಟ್ಟಣದ ನಿರ್ಮಲಾ ಹೃದಯ ಪ್ರೌಢಶಾಲೆಯ ಅಮನ ನಾಯ್ಕ ( ತೃತೀಯ)ಸ್ಥಾನ ಗಳಿಸಿದ್ದು, ಸ್ಥಳದಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ. ಎಸ್ ವಿ ವಸ್ತ್ರದ ಅವರನ್ನು ತಾಲೂಕಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗ್ರೇಡ್-2 ತಹಶೀಲ್ದಾರ ಬಿ ಜಿ ಕುಲಕರ್ಣಿ ಸ್ವಾಗತಿಸಿದರು. ಸ. ಪ ಪೂ ಕಾಲೇಜಿನ ಹಿರಿಯ ಉಪನ್ಯಾಸಕ ಮಹೇಶ ನಾಯಕ ಹಿಚ್ಕಡ ವಂದಿಸಿದರು. ಪಿ.ಎಂ ಪ್ರೌಢ ಶಾಲೆಯ ಶಿಕ್ಷಕ ಜಿ ಆರ್ ತಾಂಡೇಲ ಕಾರ್ಯಕ್ರಮ ನಿರೂಪಿಸಿದರು. ಪುರಸಭೆ ನಿಕಟಪೂರ್ವ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ನಿವೃತ್ತ ಶಿಕ್ಷಕರಾದ ಗೋವಿಂದ ನಾಯಕ, ಎಂ.ಎಂ ಕರ್ಕಿಕರ, ಕನ್ನಡಪರ ಸಂಘಟನೆಯ ಪ್ರಮುಖ ಉದಯ ನಾಯ್ಕ ಕೇಣಿ, ತಾಲೂಕಿನ ವಿವಿಧ ಇಲಾಖೆಯ ಕೆಲ ಅಧಿಕಾರಿಗಳು, ಸಿಬ್ಬಂದಿಗಳು, ಕೆಲ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು,ಸಾರ್ವಜನಿಕರು, ಮತ್ತಿತರಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಈ ಹಿಂದೆ ಕೆಲ ಸರ್ಕಾರಿ ಕಾರ್ಯಕ್ರಮ ಮತ್ತಿತರ ಮಹನೀಯರ ಜಯಂತಿಯನ್ನು ಕಾಟಾಚಾರಕ್ಕೆ ಮಾಡಿದ್ದ, ಇಲ್ಲವೇ ಸುವ್ಯವಸ್ಥಿತವಾಗಿ ಸಂಘಟಿಸಲು ಸಾಧ್ಯವಾಗದಂತಿದ್ದ ಆಡಳಿತ ವ್ಯವಸ್ಥೆ ಈ ಬಾರಿ ಕೊಂಚ ಸುಧಾರಿಸಿಕೊಂಡಂತಿದ್ದು,ಕಾರ್ಯಕ್ರಮದ ವೇದಿಕೆ ಅಲಂಕಾರ,ಚಿಕ್ಕ ಚೊಕ್ಕದಾದ ಭಾಷಣ ಮತ್ತಿತರ ರೀತಿಯಲ್ಲಿ ಗಮನ ಸೆಳೆಯಿತು. ಈ ಬಾರಿಯ ಕೆಲ ಸುವ್ಯವಸ್ಥೆಗೆ ಸರ್ಕಾರದಿಂದ ಬರುವ ಲಕ್ಷ ರೂ ಅನುದಾನವೂ ಕಾರಣವಾಗಿರಬಹುದು ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಂತಿದೆ.
ಇದೇ ವೇಳೆ ಸರ್ಕಾರದ ಸುತ್ತೋಲೆಯಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸುವಂತೆ ಸೂಚಿಸಿದ್ದರೂ ಸಹ ತಾಲೂಕಾ ವ್ಯಾಪ್ತಿಯಲ್ಲಿರುವ ಸುಮಾರು 28 ಪ್ರೌಢ ಶಾಲೆಗಳ ಪೈಕಿ ,ಹತ್ತಿರದ ಕೆಲ ಶಾಲೆ ವಿದ್ಯಾರ್ಥಿಗಳ ಪಾಲ್ಗೊಳ್ಳವಿಕೆಗೆ ಸ್ಥಳೀಯ ಅಧಿಕಾರಿಗಳು ಸೂಚಿಸಿದ್ದು ಮಳೆಗಾಲದ ಈ ದಿನಗಳಲ್ಲಿಸರಿಯಾದ ನಿರ್ಧಾರವೇ ಆಗಿದ್ದರೂ,ಗ್ರಾಮೀಣ ಭಾಗದ ಪ್ರೌಢಶಾಲೆ ವ್ಯಾಪ್ತಿಯಲ್ಲಿಯೂ ಚಿಕ್ಕ ಪುಟ್ಟ ಕಾರ್ಯಕ್ರಮ ಸಂಘಟಿಸುವ ಮೂಲಕ ಅಲ್ಲಿಯ ವಿದ್ಯಾರ್ಥಿಗಳಿಗೂ ನಾಡಪ್ರಭು ಕೆಂಪೇಗೌಡರ ಜಯಂತಿ ಮಹತ್ವ ಸಾರಲು ಸ್ಥಳೀಯ ಆಡಳಿತ ವ್ಯವಸ್ಥೆ ಅದೇಕೋ ಸರಿಯಾದ ಮನಸ್ಸು ಮಾಡಿದಂತಿಲ್ಲ ಎಂಬ ಅಸಮಾಧಾನದ ಮಾತು ಕೆಲ ಪ್ರೌಢಶಾಲೆ ಯವರಿಂದ ಕೇಳಿ ಬಂದಿದೆ .
ಪ್ರೋಟೋಕಾಲ್ ಗೆ ಸೀಮಿತವಾದ ಜನಪ್ರತಿನಿಧಿಗಳು : *ಸರ್ಕಾರಿ ಕಾರ್ಯಕ್ರಮವಾದ್ದರಿಂದ ಶಿಷ್ಟಾಚಾರದಂತೆ ವಿಧಾನ ಪರಿಷತ್ ಸಭಾಪತಿಗಳು,ಜಿಲ್ಲಾ ಉಸ್ತುವಾರಿ ಮಂತ್ರಿಗಳು,ಸಂಸದರು,ಸ್ಥಳೀಯ ಶಾಸಕರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು.ಅವರಲ್ಲಿ ಕೆಲವರು ಜಿಲ್ಲಾ ಮಟ್ಟ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು,ಇಲ್ಲವೇ ಇತರೆ ತುರ್ತು ಕಾರ್ಯಕ್ರಮಗಳಲ್ಲಿ ತಾಲೂಕು ಕೇಂದ್ರಗಳಿಂದ ದೂರದಲ್ಲಿರುವುದರಿಂದ, ಅo ಕೋಲಾ ತಾಲೂಕ ಮಟ್ಟದ ಕಾರ್ಯಕ್ರಮಕ್ಕೆ ಭಾಗವಹಿಸಿರಲಿಕ್ಕಿಲ್ಲ ಎನ್ನಲಾಗಿದೆ. ಇದರಿಂದ ವೇದಿಕೆಯಲ್ಲಿ ಯಾವೊಬ್ಬ ಜನಪ್ರತಿನಿಧಿಯೂ ಇರದೇ ಕೇವಲ ಅಧಿಕಾರಿಗಳು ಮಾತ್ರ ರಾರಾಜಿಸುವಂತಾಯಿತು. ಹೀಗಿರುವಾಗ ವೇದಿಕೆಯ ಎದುರುಗಡೆಯೇ ಕುಳಿತಿದ್ದ ಸ್ಥಳೀಯ ಪುರಸಭೆಯ ನಿಕಟಪೂರ್ವ ಅಧ್ಯಕ್ಷರನ್ನಾದರೂ ವೇದಿಕೆಗೆ ಆಹ್ವಾನಿಸಿ, ಸ್ಥಳೀಯ ಆಡಳಿತ, ಸ್ಥಳೀಯ ಜನ ಪ್ರತಿನಿದಿಗಳಿಗಾದರೂ ಗೌರವ ನೀಡಬೇಕಿತ್ತು ಎಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ