ಅಂಕೋಲಾ: ಶಿರೂರು ಗುಡ್ಡ ಕುಸಿತದ ದುರಂತ ಪ್ರಕರಣ ನಡೆದು ೫ನೇ ದಿನವೂ ಮಣ್ಣು ತೆರೆ ಮತ್ತು ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮುಂದುವರೆದಿದೆ.ಈ ನಡುವೆ ಘಟನಾ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ಮಾಧ್ಯಮದವರನ್ನು ಒಳಬಿಡದೇ,ಸುರಕ್ಷತೆಯ ನೆಪವೊಡ್ಡಿ ಜಿಲ್ಲಾಡಳಿತ ಪೊಲೀಸ್ ವ್ಯವಸ್ಥೆಯನ್ನು ಮುಂದೆ ಇಟ್ಟುಕೊಂಡು ನಿರ್ಬಂಧ ಹೇರುತ್ತಿದೆ.ಇದನ್ನು ಪ್ರಶ್ನಿಸಿ ಸ್ವತ: ಸ್ಥಳೀಯ ಶಾಸಕ ಸತೀಶ ಸೈಲ್,ಆಡಳಿತ ವ್ಯವಸ್ಥೆ ವಿರುದ್ಧ , ಉಸ್ತುವಾರಿ ಸಚಿವರ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿ ಬ್ಯಾರಿಕೇಡ್ ದಾಟಿ ಮುನ್ನುಗ್ಗಿದರು.
ಮಣ್ಣಿನಡಿ ಸಿಲುಕಿದ್ದು ಕೇರಳದ ವ್ಯಕ್ತಿಯಾಗಿದ್ದರು ಸಹ ಆತನ ಜೀವವು ಅಮೂಲ್ಯವಾಗಿದ್ದು,ಇಲ್ಲಿನ ಕಾರ್ಯಾಚರಣೆ,ಪಕ್ಕದ ರಾಜ್ಯದವರಿಗೆ ತಪ್ಪು ಸಂದೇಶ ಹೋಗದಂತೆ, ನಾವೆಲ್ಲ ಮಾನವೀಯ ನೆಲೆಯಲ್ಲಿಯೂ ಜವಾಬ್ದಾರಿ ಮರೆಯಬೇಕಿದೆ ಎಂದು ತಿಳಿಸಿದರು. ಒಮ್ಮೇಲೆ ನಿರ್ಬಂಧಿಸಿರುವ ಕ್ರಮ ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕೆ ಆಡಳಿತ ವರ್ಗವೇ ಉತ್ತರಿಸಬೇಕಿದೆ. ಇಲ್ಲದಿದ್ದರೆ ಗುಪ್ತ ಕಾರ್ಯಾಚರಣೆ ಏನಾದರೂ ನಡೆಯುತ್ತಿರಬಹುದೇ, ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದಲೂ ಕೇಳಿಬಂದಿದೆ .
ಈ ವೇಳೆ ಕಾಲ್ನಡಿಗೆಯಲ್ಲಿಯೇ ಹೊರಟಿದ್ದ ಸೈಲ್ ಅವರನ್ನು ಪೊಲೀಸರು ಮತ್ತೆ ತಡೆವ ಯತ್ನ ಮಾಡಿದರೂ ಜಗ್ಗದ ಶಾಸಕ, ಬಹುದೂರ ದಾರಿ ತುಳಿದು ಬಂದಿದ್ದರು. ಈ ವೇಳೆ ವಾಹನದಲ್ಲಿ ಅವರನ್ನು ಹಿಂಬಾಲಿಸಿ ಬಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸೈಲ್ ಅವರನ್ನು ಮನವೊಲಿಸಿ,ತಮ್ಮ ವಾಹನದಲ್ಲಿ ಕರೆದೊಯ್ದರು. ನಂತರ ಶಾಸಕ ಸೈಲ್ ಮತ್ತು ಉಸ್ತುವಾರಿ ಸಚಿವ ಮಂಕಾಳ ವೈದ್ಯ,ಘಟನಾ ಸ್ಥಳಕ್ಕೆ ತೆರಳಿ, ಕ್ರೇನ್ ಮೂಲಕ ಗುಡ್ಡದ ಎತ್ತರದ ಪ್ರದೇಶದಲ್ಲಿ ಇಳಿದು, ಅಲ್ಲಿ ಡಿಟೆಕ್ಟರ್ ಬಳಸಿ ಬೆಂಜ್ ವಾಹನ ಇದೆಯೇ ಎಂದು ಶೋಧಿಸುತ್ತಿದ್ದ ಸಿಬ್ಬಂದಿಗಳಿಗೆ ಸೂಕ್ತ ಸಲಹೆ ನೀಡಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ, ಅಂಕೋಲಾ