ನಾಲ್ಕು ಕಡೆ ಮೆಟಲ್ ಅಂಶಪತ್ತೆ: ಅರ್ಜುನ ಇದ್ದ ಲಾರಿಯೂ ಶೋಧ? ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಮೇಜರ್ ಜನರಲ್ ಹೇಳಿದ್ದೇನು?

ಅಂಕೋಲಾ: ಶಿರೂರು ಗುಡ್ಡ ಕುಸಿತ  ದುರಂತ  ಸಂಭವಿಸಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಜುಲೈ 25 ರ ಗುರುವಾರದಂದು 10 ನೇ ದಿನಕ್ಕೆ ತಲುಪಿದ್ದು, ಈ ದಿನ  ಬಹು ಜನರಿಗೆ ಯಶಸ್ಸಿನ  ನಿರೀಕ್ಷೆ ಇತ್ತಾದರೂ, ಆ ಮಟ್ಟದ ಕಾರ್ಯಾಚರಣೆ ಸಾಧ್ಯವಾಗದೇ ನಾಳೆ ದಿನದ ವರೆಗೂ ಕಾಯುವಂತಾಗಿದೆ.

ಈ ದಿನದ ಕಾರ್ಯಾಚರಣೆಯಲ್ಲಿ ನದಿ ನೀರಿನಲ್ಲಿ ಹುದುಗಿರಬಹುದಾದ ಲಾರಿ ಮತ್ತು ನಾಪತ್ತೆಯಾದವರ ಪತ್ತೆ ಕಾರ್ಯಚರಣೆ ನೇತೃತ್ವ ವಹಿಸಿದ್ದ ನಿವೃತ್ತ ಮೇಜರ್ ಜನರಲ್, ಇಂದ್ರಬಾಲನ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,ಡ್ರೋನ್ ಮತ್ತಿತರ ಆಧುನಿಕ ತಂತ್ರಜ್ಞಾನ ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಒಟ್ಟೂ 4 ಕಡೆ  ಮೆಟಲ್ ಅಂಶಗಳಿದ್ದು, ವಿದ್ಯುತ್ ಟವರ್ ಕಂಬ, ಅಂಗಡಿ ಮುಂಗಟ್ಟಿನ ಕಬ್ಬಿಣದ ರೇಲಿಂಗ್ಸ್ ಗಳು ಹಾಗೂ ಅರ್ಜುನ್ ಇದ್ದರು ಎನ್ನಲಾದ ಲಾರಿ, ಹಾಗೂ ಸಗಡಗೇರಿಯಲ್ಲಿ ಪತ್ತೆಯಾದ ಗ್ಯಾಸ್ ಟ್ಯಾಂಕರ್ ನಿಂದ ಬೇರ್ಪಟ್ಟ  ಲಾರಿಯ ಕ್ಯಾಬಿನ್ ನಿಖರವಾಗಿ ಪತ್ತೆಯಾಗಬೇಕಿದೆ ಎಂದರು, 

ಇದನ್ನೂ ಓದಿ: ಬಿರುಗಾಳಿ ಸಹಿತ ಮಳೆ : ನಾಳೆಯೂ ಶಾಲಾ‌‌ ಕಾಲೇಜುಗಳಿಗೆ ರಜೆ ಘೋಷಣೆ

ಬೆಂಜ್ ಲಾರಿಯಲ್ಲಿ ಕಟ್ಟಿಗೆಗಳು ತುಂಬಿರುವುದರಿಂದ ಹಾಗೂ ಗಾಳಿ ನಿರೋಧಕ ಕ್ಯಾಬಿನ್ ಹೊಂದಿರುವುದರಿಂದ ಲಾರಿಯು ಬಿದ್ದ ಸ್ಥಳದಿಂದ ತೇಲಿ ಹೋಗುವ ಸಾಧ್ಯತೆಗಳಿದ್ದವು. ಆದರೆ ದುರಂತ ಸಂಭವಿಸಿದ ಸ್ಥಳದಿಂದ ಅಂದರೆ ಗುಡ್ಡದ ಮಣ್ಣು ನದಿಗೆ ಬಿದ್ದ ಸ್ಥಳದಿಂದ 500 ಮೀಟರ್ ದೂರದಲ್ಲಿ ಕಟ್ಟಿಗೆಗಳು ಬೇರ್ಪಡೆಯಾಗಿರುವ ಗುರುತು ಸಿಕ್ಕಿರುವುದರಿಂದ ಲಾರಿಯು ತೇಲಿ ಹೋಗಿರುವ ಸಾಧ್ಯತೆ ಇಲ್ಲವೆಂದು ಖಚಿತವಾಗಿದೆ. ಹಾಗಾಗಿ ನಿನ್ನೆಯ ಎರಡು ಸ್ಥಳಗಳು ಮತ್ತು ಇಂದು ಶೋಧಿಸಿದ ಒಂದು ಸ್ಥಳ ಸೇರಿದಂತೆ ಮೂರರಲ್ಲಿ ಅತ್ಯಂತ ಆಳ ಮತ್ತು ದೂರದಲ್ಲಿರುವ ಸ್ಥಳದಲ್ಲಿ ಬೆಂಜ್ ಲಾರಿ ಇದೆ. ರಸ್ತೆಯಿಂದ ಸುಮಾರು 60 ಮೀಟರ್ ದೂರದಲ್ಲಿ ನದಿಯಲ್ಲಿದೆ ಎನ್ನುವುದು ವಿಶ್ಲೇಷಣೆಯಿಂದ ತಿಳಿದು ಬರುತ್ತದೆ ಎಂದರು.

ಚಾಲಕ ಅರ್ಜುನ್  ಲಾರಿಯ ಕ್ಯಾಬಿನ್ ನಟ್ ಬೋಲ್ಟ್ ನಿಂದ ಜೋಡಿಸಲ್ಪಟ್ಟಿರುವುದರಿಂದ ಇತರೆ ಸಾಮಾನ್ಯ ಲಾರಿ ಅಥವಾ ಕಂಟೇನರ್ ಗಳಂತೆ ಕ್ಯಾಬಿನ್ ಬೇರ್ಪಡಲು ಸಾಧ್ಯವಿಲ್ಲ  ಎಂದು ವಾಹನ ತಯಾರಿಕಾ ಬೆಂಜ್ ಕಂಪನಿಯ ತಜ್ಞರು ಹೇಳುತ್ತಾರೆ. ಲಾರಿಯ ಕ್ಯಾಬಿನ್ ಒಳಗಡೆ ಇರಬಹುದಾದ ಆಕ್ಸಿಜನ್ ಪ್ರಮಾಣವನ್ನು ಆಧರಿಸಿ  ಚಾಲಕ ಎಷ್ಟು ದಿನ ಬದುಕಬಹುದು ಎಂದು ಅಂದಾಜಿಸಬಹುದು. ಆದರೆ ಇದುವರೆಗೆ ಚಾಲಕ ಲಾರಿಯ ಒಳಗಿರುವ ಕುರಿತು ಸುಳಿವು ಪತ್ತೆಯಾಗಿಲ್ಲ ಹಾಗಾಗಿ ಥರ್ಮಲ್ ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಸುಳಿವು ಪತ್ತೆಯ ಕಾರ್ಯ ತಡರಾತ್ರಿಯು ಮುಂದುವರೆಯುವುದು.

ನಂತರ ಒಂದು ವೇಳೆ ಲಾರಿಯೊಳಗಡೆ ಚಾಲಕನಿರುವುದಾದರೆ ಮುಳುಗು ತಜ್ಞರು ಅಥವಾ ರಕ್ಷಣೆಗೆ ತೆರಳುವ ವ್ಯಕ್ತಿಯ ಕುರಿತು ಯೋಚಿಸಬೇಕಾಗುತ್ತದೆ. ಯಾವ ಮಾರ್ಗದಲ್ಲಿ ರಕ್ಷಣೆ ಸಾಧ್ಯವಾಗುತ್ತದೆ ಎನ್ನುವುದನ್ನು ವಿಶ್ಲೇಷಣೆ ಮಾಡಬೇಕಿದೆ. ನದಿಯ ಜೋರಾದ ಹರಿವಿನ ಪ್ರಮಾಣ, ನದಿಯ ಆಳದಿಂದ ರಕ್ಷಣೆ ಮಾಡಲು ಹೋದವರಿಗೆ ಅಪಾಯವಾಗುವ ಸಾಧ್ಯತೆ ಇದ್ದು, ಈ ಕುರಿತು ಸೌಕಾದಳ ದವರೊಂದಿಗೆ ಸಮಾಲೋಚನೆ ನಡೆಸಲಾಗುವುದು.ನಮ್ಮ ದೇನಿದ್ದರೂ  ನದಿಯಲ್ಲಿ ಮುಳುಗಿರಬಹುದಾದ ಲಾರಿ ಮತ್ತಿತರ ಅಂಶಗಳನ್ನು ಗುರುತಿಸುವುದಾಗಿದೆ ಎಂದು ಇಂದ್ರಬಾಲನ್ ಹೇಳಿದರು.

ಶಾಸಕರು ಹೇಳಿದ್ದೇನು?

ಶಾಸಕ ಸತೀಶ್ ಸೈಲ್ ಮಾತನಾಡಿ, ಬುಧವಾರ ನೌಕಾಪಡೆ ಮತ್ತು ಮಿಲಿಟರಿ ತಂಡದವರು ನೀಡಿದ  ಮತ್ತು ಇಂದು ಇಂದ್ರಬಾಲನ್ ತಂಡ ನೀಡಿದ ಎರಡು ಸ್ಥಳಗಳು ಹೊಂದಾಣಿಕೆಯಾಗಿವೆ. ಇಂದು ಶೋಧಿಸಿದ ಒಂದು ಸ್ಥಳ ಸೇರಿದಂತೆ ಮೂರು ಸ್ಥಳವನ್ನು ನಿರ್ದಿಷ್ಟವಾಗಿ ಡ್ರೋಣ್ ಮೂಲಕ ಸೆರೆ ಹಿಡಿದ ಚಿತ್ರಗಳಿಂದ ತಂಡ ತಡರಾತ್ರಿ ಖಚಿತಪಡಿಸಲಿದೆ. ಇಂದ್ರಬಾಲನ್ ಅಭಿಪ್ರಾಯದ ಪ್ರಕಾರ ಬೆಂಜ್ ಲಾರಿಯ ಕ್ಯಾಬಿನ್ ಒಳಗಿನ ಆಕ್ಸಿಜನ್ ಸಾಮರ್ಥ್ಯದಿಂದ ಅರು ದಿನಗಳವರೆಗೆ ಬದುಕಿರಬಹುದು. ಆದರೆ ಈಗ ಹತ್ತು ದಿನಗಳಾಗಿವೆ. ಅಲ್ಲದೆ ನೀರಿನ ಒಳ ಪ್ರವಾಹದ ವೇಗ 8 ನಾಟ್ಸ್ ಇದ್ದು, ಎರಡರಿಂದ 3 ನಾಟ್ಸ್ ವೇಗದಲ್ಲಿ ನೀರಿನ ಪ್ರವಾಹವಿದ್ದರೆ ನುರಿತ ಮುಳುಗು ತಜ್ಞರು ಲಾರಿಯ ಆಳದವರೆಗೆ ತಲುಪಬಹುದು. ಆರು ನಾಟ್ಸ್ ವ್ಯತ್ಯಾಸ ಇರುವುದರಿಂದ ಮುಳುಗುವ ವ್ಯಕ್ತಿಗೂ ಅಪಾಯವಾಗುವ ಸಾಧ್ಯತೆಗಳಿವೆ.

ಮೂರು ಜನರ ಪತ್ತೆಗಾಗಿ ಗುರುವಾರ ತಡರಾತ್ರಿಯೂ ಕಾರ್ಯಾಚರಣೆ ನಡೆಯಲಿದೆ. ಬುಧವಾರ ಮಧ್ಯಾಹ್ನ ಒಂದು ಲಾಂಗ್ ಆರ್ಮ್ ಎಕ್ಸ್ಕಾವೆಟರ್ ಕಾರ್ಯಾಚರಣೆಗೆ ಲಭ್ಯವಿದ್ದು, ಈ ದಿನ ಇನ್ನೊಂದು ಲಾಂಗ್ ಆರ್ಮ್ ಎಕ್ಸ್ಕಾವೆಟರ್ ಕಾರ್ಯಾಚರಣೆಗೆ ಬಂದಿದೆ. ಅರಬ್ಬಿ ಸಮುದ್ರದ ಅಳಿವೆಯಿಂದ ಶಿರೂರು ದುರಂತದವರೆಗಿನ ನದಿಯಾಳವನ್ನು ಪರೀಕ್ಷಿಸಿ ಇನ್ನು ಹೆಚ್ಚಿನ ತಂತ್ರಜ್ಞಾನ ಅಳವಡಿಕೆ, ಆಧುನಿಕ ಯಂತ್ರಗಳ ಬಳಕೆ ಸಾಧ್ಯವಿದೆಯೇ ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಇಲ್ಲಿಯೇ ಉಳಿದು ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದ ನಂತರವೇ ಅಧಿವೇಶನಕ್ಕೆ ಬರಲು ತಿಳಿಸಿದ್ದಾರೆ.

ಮತ್ತು ಇದು ನನ್ನ ಜವಾಬ್ದಾರಿ ಸಹ ಹೌದು.ಇಲ್ಲಿ ರಾಜಕೀಯ ಮಾತನಾಡುವುದು ಸಲ್ಲ.ನನಗೆ ರಾಜಕೀಯ ಮಾಡಲು ಬರುವುದಿಲ್ಲ.ಏನಿದ್ದರೂ ನನ್ನನ್ನು ನಂಬಿದ ಜನತೆಗೆ ನಾನಿರುವವರೆಗೂ ಕೈ ಬಿಡುವ ಪ್ರಶ್ನೆಯೇ ಇಲ್ಲ.ಎಲ್ಲರ ಸಹಕಾರದಿಂದ ನಾಪತ್ತೆಯಾದವರ ಶೋಧ ಕಾರ್ಯ,ನಂದ ಕುಟುಂಬಗಳಿಗೆ ಪರಿಹಾರ ,ಬದುಕು ಕಟ್ಟಿಕೊಳ್ಳಲು ಕೈಲಾದ ಸಹಾಯ ಮಾಡುವುದೇ ನನ್ನ ಗುರಿ ಎಂದರು.

ಜಿಲ್ಲಾಧಿಕಾರಿಗಳ ಅಭಿಪ್ರಾಯವೇನು?

ಡಿಸಿ ಲಕ್ಷ್ಮಿಪ್ರಿಯ ಮಾತನಾಡಿ, ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ತಂಡ ಗುರುವಾರ ಕಾರ್ಯಚರಣೆ ಮಾಡಿದ್ದು ಗುರುವಾರ ರಾತ್ರಿ ಇಲ್ಲವೇ ಶುಕ್ರವಾರ ಮುಂಜಾನೆ ಪೂರ್ಣ ವರದಿ ನೀಡಲಿದ್ದಾರೆ. ಅದರ ನಂತರವೇ ಲಾರಿಯ ಬಗ್ಗೆ ಅಧಿಕೃತವಾಗಿ ತಿಳಿದು ಬರಲಿದೆ. ಒಂದು ವೇಳೆ ನೀರಿನ ಆಳದಲ್ಲಿ ವ್ಯಕ್ತಿಗಳು ಜೀವಂತವಾಗಿ ಸಿಲುಕಿಕೊಂಡಿದ್ದರೆ ಅವರ ರಕ್ಷಣಾ ಕಾರ್ಯ ಹೇಗೆ ಎನ್ನುವುದು ಮುಖ್ಯ ವಿಚಾರವಾಗಿದ್ದು, ನದಿಯ ಹರಿವಿನ ವೇಗ ಜಾಸ್ತಿ ಇರುವುದರಿಂದ ಇಂದು ಸಂಜೆ ಭಾರತೀಯ ನೌಕಾಪಡೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಸ್ಪಿ ನಾರಾಯಣ ಎಂ ಮಾತನಾಡಿ,ಇಂತಹ ಕಾರ್ಯಾಚರಣೆ ದೇಶದಲ್ಲೇ ಮೊದಲು ಎಂಬಂತಾಗಿದ್ದು,,ಸ್ಥಳೀಯ ಶಾಸಕರು,ಜಿಲ್ಲಾಡಳಿತ,,ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು,ವಿವಿಧ ರಕ್ಷಣಾ ತಂಡಗಳ ಸಹ ಭಾಗಿತ್ವದಲ್ಲಿ ಎಲ್ಲರೂ ಒಂದಾಗಿ ಯಶಸ್ವಿ ಕಾರ್ಯಾಚರಣೆಯತ್ತ ಮುನ್ನುಗುತ್ತಿದ್ದೇವೆ. ಮಾಧ್ಯಮದವರು ಸಹಿತ ಎಲ್ಲರ ಇನ್ನಷ್ಟು ಸಹುಕಾರ ಅಗತ್ಯ ಎಂದರು .

ಆಧುನಿಕ ಯಂತ್ರಗಳು,ತಂತ್ರಜ್ಞಾನ ಬಳಸಿದರೂ ನಾನಾ ಕಾರಣಗಳಿಂದ 10 ದಿನವಾದರೂ ನಿರೀಕ್ಷಿತ ಪ್ರಮಾಣದ ಯಶಸ್ಸು ದೊರೆಯದೇ ಇರುವುದು, ಕೈಗಾ, ಸೀಬರ್ಡ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಕದ್ರಾ, ವಿಮಾನ ನಿಲ್ದಾಣ, ಬಂದರು ಸೇರಿದಂತೆ ನಾನಾ ಕಾರಣಗಳಿಂದ ಅಭಿವೃದ್ಧಿಯಂತೆ ಮೇಲ್ನೋಟಕ್ಕೆ ಕಂಡು ಬಂದರು, ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಈ ಜಿಲ್ಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆ ಯಾರ ಹೊಣೆ, ಸಾಮಾನ್ಯ ಗುಡ್ಡ ಕುಸಿತಕ್ಕೆ ಹೀಗಾದರೆ ಮುಂದೆ ಬೇರೆಲ್ಲಾ ರೀತಿಯ ಅನಾಹುತ, ಅಪಾಯ ಸಂಭವಿಸಿದರೆ ಅದಕ್ಕೆ ಯಾರು ಹೊಣೆ?  ಅದನ್ನು ಎದುರಿಸಲು ಸಿದ್ದರಾಗಿದ್ದಾರೆಯೇ ಎಂಬ ಪ್ರಶ್ನೆ ಜನ ಸಾಮಾನ್ಯನಿಂದ ಕೇಳಿಬರುವಂತಾಗಿದೆ. ವಿಜ್ಞಾನ ತಂತ್ರಜ್ಞಾನಗಳು ಏನೇ  ಮುಂದುವರಿದಿದ್ದರೂ,ಪ್ರಕೃತಿಯ ಮುಂದೆ ಮಾನವ ಈಗಲೂ ಕುಬ್ಜವಾಗಿದ್ದಾನೆ  ಎನ್ನುವ ಸಂದೇಶವನ್ನು ನಿಸರ್ಗವೇ ನಮಗೆ ಮತ್ತೆ ಮತ್ತೆ ಎಚ್ಚರಿಸುವಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version