ಅಂಕೋಲಾ: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು – ಕೊಡ್ಸಣಿ ಬಳಿ ಜುಲೈ 16 ರಂದು ಸಂಭವಿಸಿದ ಗುಡ್ಡ ಕುಸಿತದ ಭೀಕರತೆಯಿಂದ,ಕಲ್ಲು ಬಂಡೆಗಳು ಹೆದ್ದಾರಿಯಲ್ಲಿ ಉರುಳಿ,ರಾಶಿ ರಾಶಿ ಮಣ್ಣು ಜರಿದು ಬಂದು ಹೆದ್ದಾರಿ ಸಂಚಾರ ತಾನಾಗಿಯೇ ಬಂದಾಗಿತ್ತು. ಅದಾದ ಬಳಿಕ ಸುಮಾರು 14 ದಿನಗಳ ಕಾಲ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ಮತ್ತು ಕಲ್ಲು ಬಂಡೆಗಳ ತೆರವು ಜೊತೆ ಘಟನೆಯಲ್ಲಿ ನಾಪತ್ತೆಯಾದ ಜನರು ಮತ್ತು ವಾಹನದ ಶೋಧ ಕಾರ್ಯಾಚರಣೆ ಸಹ ನಡೆಸಲಾಗಿತ್ತು.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ಯಾಕೆ ನೋಡಿ?
ಈ ವೇಳೆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಇಡಲಾಗಿತ್ತು. ಈ ದುರ್ಘಟನೆಯಲ್ಲಿ ಎಂಟು ಜನರು ಶವವಾಗಿ ಪತ್ತೆಯಾಗಿದ್ದರೆ,ಕೇರಳ ಮೂಲದ ಅರ್ಜುನ್,ಸ್ಥಳೀಯ ಜಗನ್ನಾಥ್ ಮತ್ತು ಗಂಗೆಕೊಳ್ಳದ ಲೊಕೇಶ ಪತ್ತೆ ಕಾರ್ಯಚರಣೆ ಮುಂದುವರೆಯಬೇಕಿದೆ. ಇದೀಗ ಗುಡ್ಡ ಕುಸಿತ ಸಂಭವಿಸಿ ಸುಮಾರು16 ದಿನದ ನಂತರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡುತ್ತಿದೆ ಎನ್ನಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾರವರ ಅಧಿಕೃತ ಆದೇಶಕ್ಕಾಗಿ, ಚತುಷ್ಪಥ ಹೆದ್ದಾರಿ ಗುತ್ತಿಗೆ ಪಡದಿರುವ ಐ ಆರ್ ಬಿ ಯವರು ಕಾಯುತ್ತಿದ್ದಾರೆ.
ಇದರಿಂದ ಅಂಕೋಲಾ ಮತ್ತು ಕುಮಟಾ ಮಧ್ಯೆ ತಾತ್ಕಾಲಿಕವಾಗಿ ಬಂದಾಗಿದ್ದ ರಾಷ್ಟ್ರೀಯ ಹೆದ್ದಾರಿ, ಸಂಚಾರಕ್ಕೆ ಮುಕ್ತವಾಗಲಿದ್ದು, ನಾನಾ ಕಾರಣಗಳಿಂದ ತೊಂದರೆ ಅನುಭವಿಸುವಂತಾಗಿದ್ದ ಭಾರೀ ವಾಹನಗಳು ಮತ್ತಿತರ ಹೆದ್ದಾರಿ ಸಂಚಾರಿಗಳ ಪಾಲಿಗೆ ಖುಷಿ ಹಾಗೂ ಸಮಾಧಾನ ತರುವಂತಿದೆ. ನದಿ ಅಂಚಿನ ಏಕಮುಖ ರಸ್ತೆಯನಷ್ಟೇ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದ್ದು, ಮತ್ತೆ ಮಣ್ಣು ಕುಸಿಯುವ ಆತಂಕದಿಂದ ಗುಡ್ಡದಂಚಿನ ಇನ್ನೊಂದು ಬದಿಯ ರಸ್ತೆಯಲ್ಲಿ ಪೂರ್ಣ ಪ್ರಮಾಣದ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸದೇ ಹಾಗೆಯೇ ಇಡಲಾಗಿದೆ.
ಇದರಿಂದ ಹೆದ್ದಾರಿ ಸಂಚಾರಿಗಳು ಸಂಚಾರ ನಿಯಮಗಳ ಪಾಲನೆಯೊಂದಿಗೆ,ಸುರಕ್ಷಿತ ಮತ್ತು ಸುಗಮ ಚಾಲನೆಗೆ ಮುಂದಾಗ ಬೇಕಿದೆ. ಏಕಮುಖ ರಸ್ತೆಯನಷ್ಟೇ ಸಂಚಾರಕ್ಕೆ ತೆರವುಗೊಳಿಸಿರುವುದರಿಂದ,ಸಂಬಂಧಿತ ಇಲಾಖೆಗಳು ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಆಗದಂತೆ,ಮತ್ತು ಹೆದ್ದಾರಿ ಅಂಚಿಗೆ ನಿಂತು ಸೆಲ್ಫಿ ಕ್ಲಿಕಿಸುವವರ ವಿರುದ್ಧ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ