ಅಂಕೋಲಾ : ಹೆದ್ದಾರಿಯಲ್ಲಿ ಜೋರಾಗಿ ಚಲಿಸುತ್ತಿದ್ದ ಕಾರೊಂದು ಪಾದಾಚಾರಿಗೆ ಡಿಕ್ಕಿ ಪಡಿಸಿ , ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟರೆ , ಕಾರು ಹೆದ್ದಾರಿ ಬಿಟ್ಟು ಇಳಿಜಾರಿನ ಪ್ರದೇಶದಲ್ಲಿ ಬಹುದೂರ ಸಾಗಿ ಪಲ್ಟಿಯಾಗಿ ಕಾರಿನಲ್ಲಿದ್ದವರೂ ಗಾಯಗೊಂಡ ಘಟನೆ ತಾಲೂಕಿನ ಹಾರವಾಡಾ ವ್ಯಾಪ್ತಿಯ ರೈಲ್ವೆ ಬ್ರಿಜ್ ಬಳಿ ಸಂಭವಿಸಿದೆ. ಅಮದಳ್ಳಿ ಮೂಲದ , ಹಾಲಿ ಹಾರವಾಡದ ಚಿಕ್ಕ ಗುಡಿಸಲೊಂದರಲ್ಲಿ ವಾಸವಾಗಿದ್ದ ಸೋಮು ಬಿ ಗೌಡ ಎಂಬಾತನೇ ಮೃತ ದುರ್ದೈವಿಯಾಗಿದ್ದು ,ತಂದೆ ತಾಯಿ ಇಲ್ಲದ ಈತ ಕೂಲಿ ನಾಲಿ ಮಾಡಿಕೊಂಡು ತನ್ನ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.
ಕಾರವಾರ ಕಡೆಯಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಕಾರೊಂದು ,ಅದಾವುದೋ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ ,ಹೆದ್ದಾರಿ ಅಂಚಿನ ಗಿಡ- ಮರಗಳ ಸಮೇತ , ಸೋಮ ಗೌಡನಿಗೆ ಡಿಕ್ಕಿಪಡಿಸಿಕೊಂಡು ಬಹುದೂರ ಇಳಿಜಾರಿನಲ್ಲಿ ಒಯ್ದು , ತಲೆಕೆಳಗಾಗಿ ಪಲ್ಟಿ ಬಿದ್ದಿದೆ. ಈ ಅಪಘಾತದ ರಭಸಕ್ಕೆ ಸ್ಥಳೀಯ ನಿವಾಸಿ ಸೋಮು ಗೌಡ ಹಣೆ -ತಲೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು , ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕಾರ ಚಾಲಕ ಕಾರವಾರ ಮೂಲದ ವಿಶಾಲ ಬಾನಾವಳಿಕರ ಮತ್ತು ಕಾರಿನಲ್ಲಿದ್ದ ದೀಪಕ ದೇಸಾಯಿ ಮತ್ತು 2 ಮಹಿಳೆಯರು ಸೇರಿ ಒಟ್ಟೂ ಮೂವರು ಪ್ರಯಾಣಿಕರು ಗಾಯ ನೋವು ಗೊಂಡಿದ್ದು , 1033 ಹೆದ್ದಾರಿ ಸುರಕ್ಷತಾ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಲ ಕಾರ್ಯಕ್ಕೆಂದು ಮುಂಬೈಯಿಂದ ಕಾರವಾರಕ್ಕೆ ಬಂದಿದ್ದ ಇವರು ,ಬಿಡುವಿನ ವೇಳೆಯಲ್ಲಿ ಮುರ್ಡೇಶ್ವರ ಗೋಕರ್ಣ ಮತ್ತಿತರ ಧಾರ್ಮಿಕ ಕ್ಷೇತ್ರ ಪ್ರವಾಸ ಮುಗಿಸಿ ಅಂಕೋಲಾ ಮಾರ್ಗವಾಗಿ ಕಾರವಾರಕ್ಕೆ ಮರಳುವಾಗ ಈ ಅಪಘಾತ ಸಂಭವಿಸಿದೆ.
ಸಿಪಿಐ ಚಂದ್ರಶೇಖರ್ ಮಠಪತಿ ,ಸಂಚಾರ ವಿಭಾಗದ ಪಿಎಸ್ಐ ಸುನಿಲ್ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ. ಮೃತ ದೇಹವನ್ನು ಘಟನಾ ಸ್ಥಳದಿಂದ ತಾಲೂಕ ಆಸ್ಪತ್ರೆ ಶವಗಾರಕ್ಕೆ ತಮ್ಮ ರಕ್ಷಕ ಆಂಬುಲೆನ್ಸ ಮೂಲಕ ಸಾಗಿಸಲು ಸಾಮಾಜಿಕ ಕಾರ್ಯಕರ್ತ ಕನಸೆಗದ್ದೆಯ ವಿಜಯಕುಮಾರ ನಾಯ್ಕ ಸಹಕರಿಸಿದರು. ಅಪಘಾತದ ಘಟನೆ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ