ಅಂಕೋಲಾ: ಪಟ್ಟಣದ ಮುಖ್ಯ ರಸ್ತೆ ಪಕ್ಕದ ಅಂಬಾರಕೊಡ್ಲ ಸಾಗುವ ತಿರುವಿನ ಬಳಿ ಇರುವ ತರಕಾರಿ ಅಂಗಡಿಯೊಂದನ್ನು ರಾತ್ರಿ ಸಮಯದಲ್ಲಿ ದುಷ್ಕರ್ಮಿಗಳ ತಂಡ ದ್ವಂಸಗೊಳಿಸಿದ್ದು ಈ ಕುರಿತು ಅಂಗಡಿ ಮಾಲಿಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮಹಮ್ಮದ್ ಇಲಿಯಾಸ್ ಶೇಖ್ ಹುಸೇನ್ ಎನ್ನುವವರು ಪಟ್ಟಣದ ಕಾಕರಮಠದ ಸರ್ವೆ ನಂಬರ್ 156 ರಲ್ಲಿ 1973 ರಿಂದ ತರಕಾರಿ ವ್ಯಾಪಾರ ನಡೆಸುತ್ತಿದ್ದು ಅಂಗಡಿ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ , ತಕರಾರು ಇದ್ದು ಅಂಕೋಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಹೀಗಿರುವಾಗ ಡಿಸೆಂಬರ್ 17 ರಂದು ರಾತ್ರಿ 12 ಗಂಟೆ ಸುಮಾರಿಗೆ ಐದಾರು ಜನರು ಬಂದು ತರಕಾರಿ ಅಂಗಡಿಯನ್ನು ಮುರಿದು ಮೇಲ್ಛಾವಣಿಯನ್ನು ದ್ವಂಸಗೊಳಿಸಿ ಒಳಗಿರುವ ತರಕಾರಿ ಬಾಕ್ಸುಗಳನ್ನು ರಸ್ತೆಗೆ ಚೆಲ್ಲಾ ಪಿಲ್ಲಿಯಾಗಿಎಸೆದು ಒಡೆದು ಹಾಕಿದ್ದು
ಅಂಗಡಿಯಲ್ಲಿ ಇದ್ದ ತರಕಾರಿ ನಾಶಪಡಿಸಿದ್ದಾರೆ, ಮತ್ತು ಒಂದು ಲೋಡು ಕಲ್ಲನ್ನು ಟಿಪ್ಪರ್ ಮೂಲಕ ತಂದು ಅಂಗಡಿ ಎದುರಿನ ರಸ್ತೆಯಲ್ಲಿ ತಂದು ಸುರಿಯಲಾಗಿದೆ ಎಂದು ತರಕಾರಿ ಅಂಗಡಿ ಮಾಲಿಕ ನೀಡಿರುವ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೆಲ ಸಾರ್ವಜನಿಕರು ಮತ್ತು ಪಕ್ಕದ ಅಂಗಡಿಕಾರರು ಅಸಮಾಧಾನ ವ್ಯಕ್ತಪಡಿಸಿದಂತಿದ್ದು , ರಸ್ತೆಗೆ ಅಡ್ಡಲಾಗಿ ಕಲ್ಲು ಸುರಿದಿರುವುದು ಮತ್ತು ತರಕಾರಿ ಅಂಗಡಿಗೆ ಸಂಬಂಧಿಸಿದ ತಗಡು ,ಹಂಚು ಮತ್ತಿತರ ವಸ್ತುಗಳನ್ನು ರಸ್ತೆ ಸಂಚಾರಿಗಳ ಮತ್ತು
ಇತರೇ 1 – 2 ಅಂಗಡಿಗಳ ವ್ಯಾಪಾರ ವಹಿವಾಟಿಗೆ ತೊಡಕಾಗುವಂತೆ ಬೇಕಾ ಬಿಟ್ಟಿ ಎಸೆದಿದ್ದು ಅಂಥವರ ಮೇಲೆ ಸಂಬಂಧಿತ ಇಲಾಖೆಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ