ಕಡಲತೀರದಲ್ಲಿ ಮಾರಿಮೂರ್ತಿಯ ವಿಸರ್ಜನೆ: ಯಶಸ್ವಿಯಾಗಿ ಸಂಪನ್ನಗೊಂಡ ಭಟ್ಕಳದ ಸುಪ್ರಸಿದ್ಧ ಮಾರಿಜಾತ್ರೆ

ಭಟ್ಕಳ: ತಾಲೂಕಿನಲ್ಲಿ ನಡೆಯುವ ಮಾರಿ ಜಾತ್ರೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿದ್ದು ಜುಲೈ 31ರಂದು ಆರಂಭವಾದ ಜಾತ್ರೆಯು ಆಗಸ್ಟ್ ಒಂದರ ಸಂಜೆ ಜಾಲಿ ಕೊಡಿ ಕಡಲು ತೀರದಲ್ಲಿ ಮಾರಿ ಮೂರ್ತಿಯ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.

ಒಟ್ಟು ಎರಡು ದಿನಗಳಲ್ಲಿ ಆಚರಿಸಲ್ಪಡುವ ಈ ಜಾತ್ರೆಯಲ್ಲಿ ಮೊದಲನೇ ದಿನ ಊರ ಹೊರಗಿನವರು ಹಬ್ಬವನ್ನು ಆಚರಿಸಿದರೆ ಎರಡನೇ ದಿನ ಭಟ್ಕಳದ ಒಳಗಿನ ಭಾಗದ ಜನರು ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ಎರಡನೇ ದಿನವಾದ ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯ ನಡುವೆಯೂ ಸಾವಿರಾರು ಭಕ್ತರು ತಾಯಿ ಮಾರಿಯಮ್ಮನ ಉತ್ಸವ ಮೂರ್ತಿಯ ದರ್ಶನವನ್ನು ಪಡೆದು ಕೃತಾರ್ಥರಾದರು.

ವಿಶೇಷವಾಗಿ ಮಾರಿ ಜಾತ್ರೆಯಲ್ಲಿ ಹೂವಿನ ಟೋಪಿ ಬೆಳ್ಳಿಯ ಕಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ಶ್ರದ್ದಾಳುಗಳು ತಮ್ಮ ಕಷ್ಟಕಾರ್ಪಣ್ಯದ ಸಂದರ್ಭದಲ್ಲಿ ಈ ವಸ್ತುಗಳ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಹಾಗೂ ಜಾತ್ರೆಯ ಸಂದರ್ಭದಲ್ಲಿ ಈ ವಸ್ತುಗಳನ್ನು ಕೊಂಡು ಸಮರ್ಪಿಸುತ್ತಾರೆ. ಮಧ್ಯಾಹ್ನ 4 ಗಂಟೆಯ ಹೊತ್ತಿಗೆ ಮಾರಿಗುಡಿಯಲ್ಲಿ ನೆರೆದ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಉತ್ಸವಮೂರ್ತಿಗೆ ಕೊನೆಯ ಪೂಜೆಯನ್ನು ಸಲ್ಲಿಸಿ ಬೃಹತ್ ಮೆರವಣಿಗೆಯ ಮೂಲಕ ಉತ್ಸವ ಮೂರ್ತಿಯನ್ನು ಹೊತ್ತು ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಜಾಲಿ ಕೋಡಿಯಲ್ಲಿರುವ ಕಡಲ ತೀರಕ್ಕೆ ಬರಲಾಗುತ್ತದೆ,

ಇಲ್ಲಿ ಕಕ್ಕಿರಿದು ಸೇರಿದ ಭಕ್ತ ಸಾಗರದ ನಡುವೆ ದೇವಿಗೆ ಪೂಜೆಯನ್ನು ಸಲ್ಲಿಸಿ ಮಾರಿಯ ಮರದ ಮೂರ್ತಿಯ ಕೀಲುಗಳನ್ನು ಕಳಚಿ ಬೇರ್ಪಡಿಸಿ ಸಮುದ್ರಕ್ಕೆ ಎಸೆದು ಈ ವರ್ಷದ ಮಾರಿ ಜಾತ್ರೆಯನ್ನು ಸಂಪನ್ನಗೊಳಿಸಲಾಯಿತು. ಈ ಮೂಲಕ ಊರಿಗೆ ಬಂದ ಮಾರಿ ಅಂದರೆ ಸಂಕಷ್ಟಗಳು ದೂರವಾಯಿತು ಎಂಬುದು ಶ್ರದ್ಧಾಳುಗಳ ನಂಬಿಕೆಯಾಗಿದೆ.

ಈಶ್ವರ ನಾಯ್ಕ ವಿಸ್ಮಯ ನ್ಯೂಸ್ ಭಟ್ಕಳ

Exit mobile version