ಕುಮಟಾ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಇನ್ನು ಕಾಡುತ್ತಲೇ ಇದೆ. ಹಾಗೆಯೇ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲೂ ಹಲವೆಡೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಹೌದು, ಧಾರೇಶ್ವರ ಶಾಲೆ ಸಮೀಪ ಇದ್ದ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು, ಮಕ್ಕಳನ್ನು ಪಾಲಕರು ಆತಂಕದಿoದಲೇ ಶಾಲೆಗೆ ಕಳುಹಿಸುವಂತಾಗಿದೆ.
ಧಾರೇಶ್ವರ ಜನತಾ ವಿದ್ಯಾಲಯದ ಸಮೀಪ ಇರುವ ಗುಡ್ಡ ಸಹ ಬಾಯಿ ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ಥಳೀಯರು ಕಳೆದ ಒಂದು ವರ್ಷದಿಂದ ಶಿಕ್ಷಣ ಇಲಾಖೆಗೆ ಮನವಿ ಮಾಡುತ್ತಾ ಬಂದಿದ್ದಾರೆ. ಇದುವರಗೆ ಸಮಸ್ಯೆಗ ಪರಿಹಾರ ದೊರೆತಿಲ್ಲವೆಂದು ಸ್ಥಳೀಯರು ಆರೋಪವಾಗಿದೆ.
ಶಾಲೆಯ ಹಿಂಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡಕೊರೆಯಲಾಗಿತ್ತು. ಹೀಗಾಗಿ ಕಳೆದ ವರ್ಷದಿಂದ ಈ ಗುಡ್ಡದಲ್ಲಿ ಸಣ್ಣದಾಗಿ ಕುಸಿಯುತ್ತಲೆ ಇದೆ. ಆದರೆ, ಈ ಬಾರಿ ಅಧಿಕ ಮಳೆಯಾಗುತ್ತಿರುವ ಕಾರಣ ಗುಡ್ಡ ಇನ್ನಷ್ಟು ಬಿರುಕು ಬಿಟ್ಟಿದೆ. ಹೀಗಾಗಿ ಜನರಲ್ಲಿ ಸಹಜವಾಗಿ ಗುಡ್ಡಕುಸಿಯುವ ಆತಂಕ ಎದುರಾಗಿದೆ.
ಇಲ್ಲಿನ ಜನತಾ ವಿದ್ಯಾಲಯ ಧಾರೇಶ್ವರ ಶಾಲೆಯಲ್ಲಿ ಒಟ್ಟು 416 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಮುಂಜಾಗ್ರತವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಸಂಭಾವ್ಯ ಅನಾಹುತವನ್ನು ತಪ್ಪಿಸಬೇಕಿದೆ.
ವಿಸ್ಮಯ ನ್ಯೂಸ್, ಕುಮಟಾ