ಶೋಧ ಕಾರ್ಯಾಚರಣೆ ವೇಳೆ ಅರ್ಜುನ್ ಮತ್ತು ನಾಪತ್ತೆಯಾದವರ ಬಗ್ಗೆ ಮಹತ್ವದ ಸುಳಿವು? ನದಿಯಾಳ ಶೋಧಿಸಿ ಈಶ್ವರ್ ಮಲ್ಪೆ ತಂದಿದ್ದೇನು ?
ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದ ನಂತರವೂ ಮುಂದುವರೆದಿದ್ದ ವಿಪರೀತ ಮಳೆ,ಗಂಗಾವಳಿ ನದಿ ನೀರಿನ ಜೋರಾದ ಹರಿವಿನ ಪ್ರಮಾಣ ಮತ್ತಿತರ ಕಾರಣಗಳಿಂದ, ನಾಪತ್ತೆಯಾದವರ ಶೋಧ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿತ್ತು.ಇದೀಗ ಮಳೆಯ ಪ್ರಮಾಣವೂ ಕಡಿಮೆಯಾಗಿ,ನದಿ ನೀರಿನ ಮಟ್ಟವೂ ಇಳಿಕೆಯಾಗಿದೆಯಲ್ಲದೇ,ನದಿ ನೀರಿನ ಒಳ ಹರಿವಿನ ವೇಗವು ಕಡಿಮೆಯಾಗಿ,ನೀರು ಸಹ ತಿಳಿ ಗೊಂಡಿರುವುದರಿಂದ ಶೋಧ ಕಾರ್ಯಕ್ಕೆ ಪೂರಕ ವಾತಾವರಣ ನಿರ್ಮಾಣವಾದಂತಿದೆ.
ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಮಹಿಳೆ: ಮನೆಯವರು ಬರುತ್ತಿದ್ದಂತೆ ಪರಾರಿ
ಇದನ್ನೇ ಸದುಪಯೋಗಪಡಿಸಿಕೊಂಡ ಹೆಸರಾಂತ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದಲ್ಲಿ ಸ್ಥಳೀಯ ಮೀನುಗಾರರು ಮತ್ತಿತರರ ತಂಡ ನಾಪತ್ತೆಯಾದವರ ಶೋಧ ಕಾರ್ಯಾಚರಣೆಗೆ ಮುಂದಾದಾಗ,ನದಿ ತಳದಲ್ಲಿ ವಾಹನ ಒಂದರ ಜ್ಯಾಕ್,ಇತರೆ ವಾಹನದ್ದೆನ್ನಲಾದ ಬಿಡಿಭಾಗ ದೊರೆತಿರುವುದು,ಶೋಧ ಕಾರ್ಯಾಚರಣೆಗೆ ಹುಮ್ಮಸು ತಂದಂತಿದೆ.ನದಿಯಾಳ ಶೋಧಿಸುತ್ತಿರುವಾಗ ಈಶ್ವರ ಮಲ್ಪೆಗೆ ಸಿಕ್ಕ ಬಾರದ ವಸ್ತುಗಳು, ಅಂದಿನ ದುರ್ಘಟನೆಯಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಅರ್ಜುನ್, ಸ್ಥಳೀಯರಾದ ಜಗನ್ನಾಥ ನಾಯ್ಕ ಮತ್ತು ಲೋಕೇಶ್ ನಾಯ್ಕ ಪತ್ತೆ ಕಾರ್ಯಕ್ಕೆ ಮಹತ್ವದ ತಿರುವು ತಂದಂತಿದೆ.
ಇಲ್ಲಿ ವಾಹನದ ಬಿಡಿ ಭಾಗ ಸಿಕ್ಕಿದೆ ಎನ್ನುವುದಕ್ಕಿಂತಲೂ,ಮೃತ ದೇಹವನ್ನು ಶೋಧಿಸಿ ತೆಗೆಯಲೇಬೇಕೆಂದು ಛಲ ತೊಟ್ಟಿರುವ,ಶಾಸಕ ಸತೀಶ್ ಸೈಲ್,ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತಿತರರ ಮನಸ್ಸಿಗೆ ಬಲತಂದಂತಿದೆ. ಸ್ಥಳೀಯ ಬೊಮ್ಮಯ್ಯ ದೇವರಿಗೆ ಪ್ರಾರ್ಥಿಸಿ,ಸಾಂಕೇತಿಕ ಕಾರ್ಯಾಚರಣೆ ಕೈಗೊಂಡ ಮರು ಕ್ಷಣದಲ್ಲಿಯೇ ವಸ್ತುವಾದರೂ ಪತ್ತೆಯಾಗುವ ಮೂಲಕ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಬೆಂಜ್ ಲಾರಿ,ಟ್ಯಾಂಕರ್ ನ ಕ್ಯಾಬಿನ್ ನದಿ ತಳದಲ್ಲಿ ಮಣ್ಣುಗುಡ್ಡೆ ಇಲ್ಲವೇ ಮೇಲಿನಿಂದ ಜರಿದು ಬಿದ್ದ ಮರದಡಿ ಸಿಲುಕಿರುವ ಸಾಧ್ಯತೆಗಳು ಹೆಚ್ಚಿದೆ ಎನ್ನಲಾಗಿದ್ದು,ವಾಹನಕ್ಕಿಂತ ಮುಖ್ಯವಾಗಿ ನಾಪತ್ತೆಯಾದವರ ಶೋಧ ಕಾರ್ಯಕ್ಕೆ ಮುನ್ನುಡಿ ಬರೆದಂತಾಗಿದೆ.
ಸ್ಥಳೀಯರಾದ ಜಗನ್ನಾಥ ನಾಯ್ಕ,ಲೋಕೇಶ್ ನಾಯ್ಕ, ಕೇರಳ ಮೂಲದ ಅರ್ಜುನ್ ಮೃತ ದೇಹ ಇಲ್ಲವೇ ಕೊನೆ ಪಕ್ಷ ಅವರ ಅಂಗಾಂಗ ಇಲ್ಲವೇ ಎಲುಬನ್ನಾದರೂ ( ಮೂಳೆ ) ತಂದು ಕೊಡುವಂತೆ,ನೊಂದ ಕುಟುಂಬದವರು ಕಂಡ ಕಂಡವರಲ್ಲಿ ಅಳಲು ತೋಡಿಕೊಳ್ಳುತ್ತಿದ್ದರು.ಈ ದಿನದ ಕಾರ್ಯಾಚರಣೆಯಲ್ಲಿ ಯಶಸ್ಸಿನ ಮೊದಲ ಮೆಟ್ಟಿಲು ಎನ್ನುವಂತೆ,ವಾಹನಕ್ಕೆ ಸಂಬಂಧಿಸಿದ ಭಾಗಗಳು ಪತ್ತೆಯಾಗಿರುವುದು,ಮುಂದಿನ ಕಾರ್ಯಾಚರಣೆ ತ್ವರಿತವಾಗಿ ನಡೆಸಿ ,ಹವಾಮಾನ ಪೂರಕವಾಗಿರುವಾಗಲೇ ಯಶಸ್ಸು ಸಾಧಿಸುವಂತಾಗಲಿ ಎನ್ನುವುದು ಬಹು ಜನರ ನಿರೀಕ್ಷೆಯಾಗಿದ್ದು,ಜಿಲ್ಲಾಡಳಿತ ಮತ್ತು ಸಂಬಂಧಿಸಿದವರು ಮುಳುಗು ತಜ್ಞ ತಂಡಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ಸಹಕಾರ ನೀಡಿ ತಮ್ಮ ಜವಾಬ್ದಾರಿ ಮೆರೆಯಬೇಕೆಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಿದೆ.