Follow Us On

WhatsApp Group
Big News
Trending

ಅಂಕೋಲಾ ಪುರಸಭೆಗೆ ಚುನಾವಣೆ ನಡೆದು 2 ವರುಷ : ಆಯ್ಕೆಯಾದವರಿಗಿಲ್ಲ ಹರುಷ

ಮೀಸಲಾತಿ ವಿವಾದದಿಂದ ಕೈಗೂಡದ ಅಧಿಕಾರ: ಅಧಿಕಾರಿಗಳದ್ದೇ ಪೂರ್ಣ ಕಾರ್ಯ-ಭಾರ!
ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾದ ವಿಳಂಬ ನೀತಿ ಸರಿಪಡಿಸುವವರಾರು?

[sliders_pack id=”3491″]

ಅಂಕೋಲಾ : ಕಳೆದ 2018ರ ಅಗಸ್ಟ 31ರಂದು ಸ್ಥಳೀಯ ಸಂಸ್ಥೆಗೆ (ಪುರಸಭೆ) ಚುನಾವಣೆ ನಡೆದು ಸೆ.3ರಂದು ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶ ಪ್ರಕಟವಾಗಿ 2ವರ್ಷಗಳಾದರೂ ಅಧಿಕಾರ ಭಾಗ್ಯವಿಲ್ಲದೇ, ವಾರ್ಡ್ವಾರು ಆಯ್ಕೆಯಾದ ಜನಪ್ರತಿನಿಧಿಗಳು ಹರುಷವಿಲ್ಲದೆ ಪರಿತಪಿಸುವಂತಾಗಿದೆ.

ಮೀಸಲಾತಿ ವಿವಾಧ : ಜಿಲ್ಲೆಯ 8ನಗರ ಸ್ಥಳೀಯ ಸಂಸ್ಥೆಗಳಿ0ದ 200 ವಾರ್ಡ್ಗಳಲ್ಲಿ ಚುನಾವಣೆ ನಡೆದಿತ್ತು. ಅದೇ ವೇಳೆ ಅಂಕೋಲಾ ಪುರಸಭೆಯ 23 ವಾರ್ಡ್ಗಳಿಗೂ ಚುನಾವಣೆ ನಡೆದಿತ್ತು. ಇತರೆಡೆಯಂತೆ 2ವರ್ಷಗಳಾದರೂ ಅಧಿಕೃತ ಆಡಳಿತ ಸಮಿತಿ ರಚನೆಯಾಗದೇ ಈವರೆಗೂ ಆಯ್ಕೆಯಾದ ಜನಪ್ರತಿನಿಧಿಗಳ ಮೊದಲ ಸಭೆ ಸಹ ಅಧಿಕೃತವಾಗಿ ನಡೆದಿಲ್ಲ. ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಗೆ ಈ ಹಿಂದೆಯೇ ಆಕ್ಷೇಪಣೆ ಕೇಳಿ ಬಂದಿದ್ದು, ಜಿಲ್ಲೆಯ ಇತರೆಡೆ ನಡೆದ ಮೀಸಲಾತಿ ವಿವಾಧ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅಧಿಕಾರ ಹಂಚಿಕೆ ಭಾಗ್ಯ ಈವರೆಗೂ ಒದಗಿ ಬಂದಿಲ್ಲ ಎನ್ನಲಾಗಿದೆ. ಹೊಸ ಸರ್ಕಾರ ಬಂದು ಇನ್ನೇನು ಮೀಸಲಾತಿ ಘೋಷಣೆಯಾಗಬಹುದು ಎಂಬಷ್ಟರಲ್ಲಿ ಬಂದೆರಗಿದ ಕರೊನಾ ಮಾರಿಯಿಂದ ಮತ್ತೇ ಹಿನ್ನಡೆಯಾಗಿರಬಹುದು ಎನ್ನಲಾಗಿದೆ.

ಮೇಲ್ಧರ್ಜೆ :14 ವಾರ್ಡ್ಗಳುಳ್ಳ ಅಂಕೋಲಾ ಪಟ್ಟಣ ಪಂಚಾಯತವೂ 2015ರಲ್ಲಿ ಅಕ್ಕ-ಪಕ್ಕದ ಗ್ರಾಮೀಣ ಪ್ರದೇಶಗಳನ್ನು ಸೇರಿಸಿಕೊಂಡು ಪುರಸಭೆಯಾಗಿ ಮೇಲ್ಧರ್ಜೆಗೇರಿತ್ತು. ಈ ವೇಳೆಗೆ ಪಟ್ಟಣ ಪಂಚಾಯತ ಅರ್ಧಾವಧಿ ಅಧಿಕಾರ ಮುಗಿದಿದ್ದರಿಂದ, ಅದನ್ನು ವಿಸರ್ಜಿಸದೆಯೇ ಪುರಸಭೆಯಾಗಿ ಮುಂದುವರೆಸಿಕೊoಡು ಹೋಗಲಾಗಿತ್ತು. 2018ರಲ್ಲಿ ಪುರಸಭೆಗೆ ಮೊದಲ ಬಾರಿ ಎಲ್ಲಾ 23 ವಾರ್ಡ್ಗಳಿಗೆ ಚುನಾವಣೆ ನಡೆಯಿತು.

ಅತಂತ್ರ ಗೆಲುವು : ವಾರ್ಡ್ ನಂ. 1ರಿಂದ ಪಕ್ಷೇತರ ಅಭ್ಯರ್ಥಿ ಶ್ರೀಧರ ವೆಂಕಟ್ರಮಣ ನಾಮ್ತೆ, ವಾರ್ಡ್ ನಂ. 2 ತಾರಾ ಸುರೇಶ ನಾಯ್ಕ, (ಪಕ್ಷೇತರ), 3 ಶೀಲಾ ಮೋಹನ ಶೆಟ್ಟಿ (ಬಿಜೆಪಿ), 4 ಸವಿತಾ ನಾಗರಾಜ ನಾಯಕ (ಕಾಂಗ್ರೆಸ್), 5 ನಾಗರಾಜ ಅಶೋಕ ಐಗಳ (ಬಿಜೆಪಿ), 6 ಪ್ರಕಾಶ ಸೋಮು ಗೌಡ (ಕಾಂಗ್ರೆಸ್), 7 ನಾಗವೇಣಿ ಥಾಕು ಹುಲಸ್ವಾರ (ಕಾಂಗ್ರೆಸ್), 8 ಅಶೋಕ ಮಂಗೇಶ ಶೆಡಗೇರಿ (ಕಾಂಗ್ರೆಸ್), 9 ಶಬ್ಬೀರ್ ಅಬ್ದುಲ್ ರೆಹಮಾನ್ ಶೇಖ್ (ಕಾಂಗ್ರೆಸ್), 10 ಎ.ಶಾಂತಲಾ ನಾಡಕರ್ಣಿ (ಬಿಜೆಪಿ), 11 ಜಯಪ್ರಕಾಶ ಗಣಪತಿ ನಾಯ್ಕ (ಕಾಂಗ್ರೆಸ್), 12 ಮಂಜುನಾಥ ಸುಬ್ರಾಯ ನಾಯ್ಕ (ಕಾಂಗ್ರೆಸ್), 13 ಸೂರಜ್ ಮನೋಹರ ನಾಯ್ಕ (ಬಿಜೆಪಿ), 14 ಜಗದೀಶ ಮಾಸ್ತರ (ಪಕ್ಷೇತರ), 15 ಜೈರಾಬಿ ಅಶ್ಪಾಖ್ ಬೆಂಗ್ರೆ (ಕಾಂಗ್ರೆಸ್), 16 ವಿಶ್ವನಾಥ ತುಕ್ಕಪ್ಪ ನಾಯ್ಕ (ಕಾಂಗ್ರೆಸ್), 17 ಕೀರ್ತಿ ರಾಮದಾಸ ನಾಯಕ (ಬಿಜೆಪಿ), 18 ಮಂಗೇಶ್ ತೊಕು ಆಗೇರ್ (ಕಾಂಗ್ರೆಸ್), 19 ಜಯಾ ಬಾಲಕೃಷ್ಣ ನಾಯ್ಕ (ಬಿಜೆಪಿ), 20 (ಬಿಜೆಪಿ), 21 ಹೇಮಾ ಗಣಪತಿ ಆಗೇರ (ಬಿಜೆಪಿ), 22 ರೇಖಾ ದಿನಕರ ಗಾಂವಕರ (ಪಕ್ಷೇತರ), 23 ಕಾರ್ತಿಕ ಶಿವಾನಂದ ನಾಯ್ಕ (ಕಾಂಗ್ರೆಸ್)ನಿoದ ಗೆಲುವು ಸಾಧಿಸಿದ್ದರು. ಒಂದೆಡೆ ಗೆದ್ದ ಅಭ್ಯರ್ಥಿಗಳಿಗೆ ಈವರೆಗೂ ಅಧಿಕಾರ ದೊರೆಯದಿರುವುದು, ಮತ್ತು ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತವಿಲ್ಲದಿರುವುದರಿಂದ ಅತಂತ್ರ ಫಲಿತಾಂಶ ದಾಖಲಾದಂತಾಗಿದೆ.

ಪ್ರಜಾಪ್ರಭುತ್ವವೇ? : ಈ ಹಿಂದಿನ ಗಣತಿ ಪ್ರಕಾರ ಪಟ್ಟಣ ವ್ಯಾಪ್ತಿಯಲ್ಲಿ 21,427 ಜನಸಂಖ್ಯೆ ಇತ್ತು ಎಂದು ಹೇಳಲಾಗಿದ್ದು ಜನರ ಭಾವನೆ ಮತ್ತು ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಲು ಆಯ್ಕೆಯಾದ ಜನಪ್ರತಿನಿಧಿಗಳ ಮಹತ್ವದ ಜವಬ್ದಾರಿಯಿತ್ತಾದರೂ, ಜನರ ದೂರು ಕೇಳಲು ಜನಪ್ರತಿನಿಧಿಗಳಿಗೆ ಅಧಿಕಾರ ಭಾಗ್ಯವಿರದೇ, ಕೆಲವರು ಕಿವಿಯಿದ್ದು ಕಿವುಡರಾದಂತಿರಬೇಕಿದೆ. ಸ್ಥಳೀಯ ಸಂಸ್ಥೆಯ ಸಂಪೂರ್ಣ ಅಧಿಕಾರ ಅಧಿಕಾರಿಗಳ ಕೈಯಲ್ಲಿಯೇ ಇದೆ. ಕೊವಿಡ್ ಸಂಕಷ್ಟ ಕಾಲದಲ್ಲಿ ಅಧಿಕಾರಿಗಳು ಉತ್ತಮ ಜವಬ್ದಾರಿ ನಿರ್ವಹಿಸಿದಂತೆ ಕಂಡು ಬರುತ್ತಿದೆಯಾದರೂ, ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಆಡಳಿತ ಸಮಿತಿ ಇಲ್ಲದ ಪುರಸಭೆ ಆಡಳಿತ ಒಂದರ್ಥದಲ್ಲಿ ಕುಟುಂಬದ ಯಜಮಾನ ಮತ್ತು ಇತರೆ ಸದಸ್ಯರಿಲ್ಲದೆ, ಅನಾಥ ಪ್ರಜ್ಞೆ ಕಾಡುವಂತೆ ಮಾಡಿದೆ. ಸರ್ಕಾರವೂ ಈ ಕುರಿತು ಗಂಭೀರವಾಗಿ ಚಿಂತಿಸಿ, ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟಿಸಿ, ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಧಿಕಾರದ ಚುಕ್ಕಾಣಿ ಹಸ್ತಾಂತರಿಸಬೇಕಿದೆ. ಇಲ್ಲದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳಿದ್ದೂ, ಅಧಿಕಾರ ನಿರ್ವಹಣೆಯ ಜವಬ್ದಾರಿ ಹಂಚಿಕೆಯಾಗದಿದ್ದರೆ ಚುನಾವಣೆ ಅವಶ್ಯವಿತ್ತೇ ಎನ್ನುವ ಪ್ರಶ್ನೆ ಮೂಡದಿರದು.

ಆಯಾ ವಾರ್ಡ್ಗಳಿಂದ ಆಯ್ಕೆಯಾದ ಆದರೆ ಈವರೆಗೂ ಅಧಿಕೃತವಾಗಿ ಇನ್ನೂ ಸದಸ್ಯರಾಗಿರದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈಗಿನ ಅಧಿಕಾರಿ ವರ್ಗ ಮತ್ತು ಪುರಸಭೆ ಆಡಳಿತಾಧಿಕಾರಿಯಾಗಿರುವ ಕುಮಟಾ ಉಪವಿಭಾಗಾಧಿಕಾರಿ ಅಜೀತ ರೈ ಹಲವು ಜನಪರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಸಹ ಓರ್ವ ಜವಬ್ದಾರಿಯುತ ಜನಪ್ರತಿನಿಧಿಯಾಗಿ, ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದು, ಕಾರವಾರ ಅಂಕೋಲಾ ಮತ್ತು ಕುಮಟಾ ಅಂಕೋಲಾ ಮುಖ್ಯ ಕೂಡು ರಸ್ತೆ ಅಭಿವೃದ್ಧಿ ಸೇರಿದಂತೆ ತನ್ನದೇ ಆದ ಕನಸಿನ ಯೋಜನೆಗಳಿಗೆ ರೂಪು ಕೊಡಲು ಸಿದ್ಧರಾದಂತಿದೆ. ಒಟ್ಟಿನಲ್ಲಿ ಆದಷ್ಟು ಬೇಗನೆ ಪುರಪಿತೃ ಮತ್ತು ಪುರಮಾತೆಗಳಿಗೆ ಬೇಗನೆ ಅಧಿಕಾರ ಭಾಗ್ಯ ದೊರೆತು ಎಲ್ಲರೂ ಒಂದಾಗಿ ಅಭಿವೃದ್ಧಿಗೆ ಕೈಜೋಡಿಸುವಂತಾಗಲಿ ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಇoದಿನ ಪ್ರಮುಖ ಸುದ್ದಿಗಳ ಲಿಂಕ್ ಇಲ್ಲಿದೆ

Back to top button