ಕಾರವಾರ: ಅಂಕೋಲಾ ಶಿರೂರು ಗುಡ್ಡ ಕುಸಿತದ ಬಳಿಕ ಜಿಲ್ಲೆಗೆ ಆಗಮಿಸಿ ಸರ್ವೇ ನಡೆಸಿದ್ದ ಕೇಂದ್ರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ತಂಡ ಜಿಲ್ಲೆಯ ಗುಣವಂತೆ, ದಿವಗಿ, ಶಿರೂರು ಹಾಗೂ ಬಿಣಗಾ ಸೇರಿದಂತೆ ನಾಲ್ಕು ಗುಡ್ಡದ ಪ್ರದೇಶ ತೀವ್ರ ಅಪಾಯಕಾರಿ ಸ್ಥಳಗಳೆಂದು ಜಿಲ್ಲಾಡಳಿತಕ್ಕೆ ವರದಿ ನೀಡಿದೆ.
ಕಳೆದ ಜುಲೈ 16 ರಂದು ಶಿರೂರು ಗುಡ್ಡ ಕುಸಿತದ ಅವಘಡ ಸಂಭವಿಸುತ್ತಿದ್ದoತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಿಎಸ್‌ಐ ತಂಡವನ್ನು ಕರೆಯಿಸಿ ಗೋವಾ ಗಡಿಯಿಂದ ಭಟ್ಕಳದ ಗೊರಟೆಯವರೆಗಿನ ಹೆದ್ದಾರಿ ಅಂಚಿನ ಪ್ರದೇಶದಲ್ಲಿ ಪರೀಶೀಲನೆಗೆ ಸೂಚನೆ ನೀಡಿತ್ತು. ಈ ಹೆದ್ದಾರಿಯುದ್ದಕ್ಕೂ ಎಲ್ಲೆಲ್ಲಿ ಅಪಾಯಕಾರಿ ಸ್ಥಳಗಳಿವೆ ಹಾಗೂ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಎನ್ನುವದರ ಬಗ್ಗೆ ವರದಿ ನೀಡುವಂತೆ ಕೇಳಿತ್ತು. ಜಿಎಸ್‌ಐ ತಂಡ ಸುಮಾರು 25 ದಿನಗಳ ಕಾಲ ಜಿಲ್ಲೆಯಲ್ಲಿ ಹೆದ್ದಾರಿಯುದ್ದಕ್ಕೂ ಪರೀಕ್ಷಣೆ ನಡೆಸಿ ಹೆದ್ದಾರಿ ಬದಿಯಲ್ಲಿನ ಮಣ್ಣಿನ ಸಾಂದ್ರತೆ, ಮಣ್ಣು ಹಾಗೂ ಕಲ್ಲುಗಳಲ್ಲಿನ ಗುಣಮಟ್ಟ, ಗುಡ್ಡದ ಕಡಿತದ ವೈಜ್ಞಾನಿಕ ಕ್ರಮ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಸರ್ವೆ ಕಾರ್ಯ ನಡೆಸಿತ್ತು.
ಅಲ್ಲದೆ ಕಳೆದ ಎರಡು ವರ್ಷಗಳ ಹಿಂದೆ ಸರ್ವೆ ನಡೆಸಿದ್ದ ಜಿಎಸ್‌ಐ ಜಿಲ್ಲೆಯಲ್ಲಿ 439 ಅಪಾಯಕಾರಿ ಭೂ ಕುಸಿತ ಸ್ಥಳಗಳನ್ನು ಗುರುತಿಸಿತ್ತು. ಆ ಹೆದ್ದಾರಿಯಂಚಿನ ಅಪಾಯಕಾರಿ ಸ್ಥಳಗಳಲ್ಲಿ ಮಣ್ಣು ಹಾಗೂ ಕಲ್ಲುಗಳ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಆದರೆ ಈ ವೇಳೆ ಒಂದೊoದು ಸ್ಥಳದಲ್ಲಿ ಒಂದೊoದು ಮಾದರಿಯಲ್ಲಿ ಮಣ್ಣು ಹಾಗೂ ಕಲ್ಲಿನ ಗುಣ ಲಕ್ಷಣ ವಿಭಿನ್ನವಾಗಿ ಕಂಡು ಬಂದಿತ್ತು.
ಹೀಗಾಗಿ ಈ ಅಪಾಯಕಾರಿ ಸ್ಥಳದಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎನ್ನುವುದು ಸಹ ಸವಾಲಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ವೇ ನಡೆಸಿದ್ದ ಕೇಂದ್ರದ ತಂಡವು ಹೊನ್ನಾವರ ತಾಲೂಕಿನ ಗುಣವಂತೆ, ಕುಮಟಾದ ದಿವಗಿ, ಅಂಕೋಲಾದ ಶಿರೂರು ಹಾಗೂ ಕಾರವಾರದ ಬಿಣಗಾ ಪ್ರದೇಶವು ಅತ್ಯಂತ ಅಪಾಯಕಾರಿ ಸ್ಥಳಗಳೆಂದು ಗುರುತಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್..