Follow Us On

WhatsApp Group
Big News
Trending

ಸಂಸ್ಕೃತ ಜಾಗತಿಕ ಭಾಷೆ: ಡಾ. ಪತಂಜಲಿ ವೀಣಾಕರ

ಹಡಿನಬಾಳ ಸರಕಾರೀ ಪ್ರೌಢಶಾಲೆಯಲ್ಲಿ ನಡೆದ 'ಅಸ್ಮಾಕಂ ಸಂಸ್ಕೃತಮ್' ಕಾರ್ಯಕ್ರಮ.

ಹೊನ್ನಾವರ: “ಸಂಸ್ಕೃತವು ಜಗತ್ತಿನ ಅತಿ ಪುರಾತನವಾದ ಭಾಷೆಯಾಗಿದೆ; ಆದರೂ ಸದಾತನವಾಗಿದೆ. ಅತ್ಯಂತ ದೊಡ್ಡದಾದ ಜ್ಞಾನಭಂಡಾರವೇ ಈ ಭಾಷೆಯಲ್ಲಿದೆ. ಆದ್ದರಿಂದ ಇಂದು ಪ್ರಪಂಚದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೆಲ್ಲವೂ ಸಂಸ್ಕೃತ ವಿಭಾಗವನ್ನು ಪ್ರಾರಂಭಿಸುತ್ತಿವೆ. ಆ ಮೂಲಕ ಭಾರತೀಯ ಜ್ಞಾನ-ವಿಜ್ಞಾನ ಪರಂಪರೆಯನ್ನು ಅಭ್ಯಸಿಸುತ್ತಿವೆ. ಒಟ್ಟಿನಲ್ಲಿ ಸಂಸ್ಕೃತ ಇಂದು ಜಾಗತಿಕವಾದ, ಜಗನ್ಮಾನ್ಯವಾದ ಭಾಷೆಯಾಗಿದೆ” ಎಂದು ಹೊನ್ನಾವರ ಸಮೀಪದ ಸುಬ್ರಹ್ಮಣ್ಯ ಸಂಸ್ಕೃತ ಮಹಾವಿದ್ಯಾಲಯದ ಅಧ್ಯಾಪಕ ಡಾ. ಪತಂಜಲಿ ವೀಣಾಕರ ಅಭಿಪ್ರಾಯಪಟ್ಟರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಶ್ರೀ ರಾಘವೇಂದ್ರಭಾರತೀ ಸಂಸ್ಕೃತ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಸರಕಾರಿ ಪ್ರೌಢಶಾಲೆ ಹಡಿನಬಾಳ ಇವುಗಳ ಸಂಯುಕ್ತಾಶ್ರಯದಲ್ಲಿ ಹಡಿನಬಾಳದಲ್ಲಿ ನಡೆದ ‘ಅಸ್ಮಾಕಂ ಸಂಸ್ಕೃತಮ್’ ಎಂಬ ಸರಣಿ ಸಂಸ್ಕೃತೋತ್ಸವದ ಮುಖ್ಯ ವಕ್ತಾರರಾಗಿ ಅವರು ಮಾತನಾಡುತ್ತಿದ್ದರು.

ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಡಾ. ಶ್ರೀದೇವಿ ಹೆಗಡೆಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಂಸ್ಕೃತ ಭಾಷೆಯ ಮಹತ್ವ ಮತ್ತು ವೈಶಿಷ್ಟ್ಯವನ್ನು ವಿವರಿಸಿದರಲ್ಲದೇ ಈ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ರಾಜಕುಮಾರ ಟಿ. ನಾಯ್ಕ ಅವರು “ತಾಲೂಕಿನಲ್ಲೇ ಅತೀ ಹೆಚ್ಚು ಸಂಸ್ಕೃತ ವಿದ್ಯಾರ್ಥಿಗಳನ್ನು ಹೊಂದಿರುವದು ನಮ್ಮ ಶಾಲೆಯ ಹೆಮ್ಮೆಯಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಎಲ್ಲ ಕಾರ್ಯಕ್ರಮಗಳಿಗೆ ನಮ್ಮ‌ ಶಾಲೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ” ಎಂದರು.

ಅಧ್ಯಾಪಕ ವಿನಾಯಕ ಧನ್ಯವಾದಗಳನ್ನರ್ಪಿಸಿದರು. ಶ್ರೀಮತಿ ಸುಜಾತಾ ದೇವರಭಾವಿಯವರ ಸಂಚಾಲಕತ್ವದಲ್ಲಿ ನಡೆದ ಈ ಕಾರ್ಯಕ್ರಮವು ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button