Important
Trending

ಬಸ್ ನಿಲ್ದಾಣ ಅವರಣದ ಪ್ರವೇಶ ದ್ವಾರದಲ್ಲಿ ಬಾಯ್ತೆರೆದು ಕೂತ ಕಬ್ಬಿಣದ ಪಟ್ಟಿಗಳು : ಜೀವಾಪಾಯದ ಸಾಧ್ಯತೆ

ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಲಿ: ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ:

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣ ಆವರಣಕ್ಕೆ ಒಳ ಹೋಗುವ ದ್ವಾರದಲ್ಲಿ ಕ್ಯಾಟಲ್ ರ್ಯಾಕ್ ಮಾದರಿಯಲ್ಲಿ ಅಳವಡಿಸಿರುವ ಕಬ್ಬಿಣದ ಕೆಲ ಪಟ್ಟಿಗಳು ಸಡಿಲಗೊಂಡು, ತುಂಡಾಗಿ ಬಿದ್ದಿರುವುದು ಮತ್ತು ಇನ್ನೊಂದೆಡೆ ಎದ್ದು ನಿಂತಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬಸ್ ನಿಲ್ದಾಣದ ಪ್ರವೇಶ ದ್ವಾರ ಮತ್ತು ನಿರ್ಗಮನ ಗೇಟ್ ಬಳಿ ಗುಣಮಟ್ಟದ ಕೊರತೆ ಮತ್ತು ಅವೈಜ್ಞಾನಿಕ ಜೋಡಣೆಯಿಂದ ಕಬ್ಬಿಣದ ಪಟ್ಟಿಗಳು ಪದೇ ಪದೇ ಸಡಿಲಗೊಳ್ಳುವುದು, ಮುರಿದು ಹೋಗುವುದು ನಡೆಯುತ್ತಲೇ ಇದ್ದು ಇದರಿಂದ ಬಸ್ ಮತ್ತಿತರ ವಾಹನ ಚಾಲಕರು, ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ತೀವೃ ತೊಂದರೆಯಾಗುತ್ತಿದೆ. ನಿರ್ವಹಣೆ ಮತ್ತು ಪರಿಶೀಲನೆಯ ಕೊರತೆಯಿಂದ ಇದು ಕಳೆದ ಕೆಲ ಕಾಲದಿಂದ ಎಂದೂ ಮುಗಿಯದ ಸಮಸ್ಯೆಯಾಗಿ ಆಡಳಿತ ವ್ಯವಸ್ಥೆಯನ್ನು ಅಣಕಿಸುತ್ತಿದೆ.

ಅಳಿವೆ ದಂಡೆಯಲ್ಲಿ ಸಿಲುಕಿದ ಬೋಟ್: 30ಕ್ಕೂ ಅಧಿಕ ಜನರು ಪ್ರಾಣಾಪಾಯದಿಂದ ಪಾರು

ನೂತನ ಬಸ್ ನಿಲ್ದಾಣ ಆರಂಭವಾದ ಒಂದು ವಾರದಿಂದ ಮತ್ತು ತದನಂತರ ಈ ವರೆಗೆ ಹತ್ತಾರು ಬಾರಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಿಂದ ನಾನಾ ರೀತಿಯ ದೂರುಗಳು ಕೇಳಿ ಬರುತ್ತಲೇ ಇದೆ.ಬಸ್ ನಿಲ್ದಾಣದ ದ್ವಾರ ದಾಟಿ ದನ ಕರುಗಳು ಒಳ ಆವರಣಕ್ಕೆ ಬರದಂತೆ ತಡೆಯಲು,ಮತ್ತು ಬಸ್ ನಿಲ್ದಾಣದ ಆವರಣದಲ್ಲಿನ ಮಳೆಗಾಲದ ನೀರು ತಳಮಟ್ಟದಿಂದ ಹರಿದು ಪುರಸಭೆ ವ್ಯಾಪ್ತಿಯ ಗಟಾರ ಸೇರುವಂತೆ ಮಾಡಲು ಕಬ್ಬಿಣದ ಗ್ರಿಲ್ಸ್ ಗಳನ್ನು ಅಳವಡಿಸಲಾಗಿತ್ತು. ಈ ಹಿಂದೆ ಕಳಪೆ ಗುಣಮಟ್ಟದಂತೆ ಕಂಡು ಬರುತ್ತಿದ್ದ ಪೈಪ್ ಮಾದರಿ ಕೆಟಲ್ ರ್ಯಾಕ್ ಗಳು ಅಳವಡಿಸಿದ ಕೆಲವೇ ದಿನಗಳಲ್ಲಿ ಮುರಿದು ತುಂಡಾಗಿ ಬಿದ್ದು ಕಾಮಗಾರಿಯನ್ನು ಅಣುಕಿಸುವಂತಿತ್ತು. ಈ ಕುರಿತು ಸಾರ್ವಜನಿಕರು ದೂರಿನ ಹಿನ್ನೆಲೆಯಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಭಿತ್ತರಗೊಂಡಾಗ ಕೆ. ಎಸ್.ಆರ್ ಟಿ ಸಿ ಅಧಿಕಾರಿಗಳು ತುರ್ತು ರಿಪೇರಿ ಕೈಗೊಂಡು ಕೈ ತೊಳೆದುಕೊಂಡಿದ್ದರು.

ಕೆಲ ದಿನಗಳ ಮಟ್ಟಿಗೆ ವ್ಯವಸ್ಥೆ ಸರಿ ಹೋಯಿತಾದರೂ ಮತ್ತೆ ಮತ್ತೆ ಪಟ್ಟಿಗಳು ಸಡಿಲಗೊಂಡು ಅದೇ ದೋಷ ಮರುಕಳಿಸಲಾರಂಭಿಸಿತ್ತು. ಈ ವೇಳೆ ಸಾರ್ವಜನಿಕರ ಪರವಾಗಿ ಗಟ್ಟಿ ಧ್ವನಿ ಎತ್ತಿದ ವಕೀಲ ಉಮೇಶ್ ನಾಯ್ಕ,ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ ನಾಯ್ಕ,ಮಂಜುನಾಥ ವಿ ನಾಯ್ಕ ಮತ್ತಿತರರ ಸಾರಿಗೆ ಸಂಸ್ಥೆ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಇದರ ಬಿಸಿ ತಾಗಿದಂತೆ ಎಚ್ಚೆತ್ತುಕೊಂಡ ಇಲಾಖೆ ಬಸ್ ನಿಲ್ದಾಣದ ಪ್ರವೇಶ ದ್ವಾರದ ಕ್ಯಾಟಲ್‌ ರ್ಯಾಕ್ ನ ದೊಡ್ಡ ದೊಡ್ಡ ಕಬ್ಬಿಣ ಪಟ್ಟಿಗಳ ಮಧ್ಯೆ ಅಡ್ಡಪಟ್ಟಿ ಸೇರಿಸಿ ವೆಲ್ಡಿಂಗ್ ಮಾಡಿ ದುರಸ್ತಿ ಕಾರ್ಯ ಕೈಗೊಂಡದ್ದರಿಂದ ತಕ್ಕ ಮಟ್ಟಿಗೆ ವ್ಯವಸ್ಥೆ ಸುಧಾರಿಸಿದಂತೆ ಕಂಡು ಬಂದಿತ್ತು.

ನಂತರ ಇನ್ನೊಮ್ಮೆ ಹೊಸ ಚೌ ಪಟ್ಟಿಗಳನ್ನು ಅಳವಡಿಸಿತ್ತು. ಆದರೆ ಈಗ ಮತ್ತೆ ಅದೇ ಹಳೆ ಮಾದರಿ ಸಮಸ್ಯೆ ಮುಂದುವರೆದಂತಿದ್ದು, ಸುಧಾರಣೆಗೆ ಹೆಚ್ಚಿನ ಒತ್ತು ನೀಡದಿರುವುದರಿಂದ ಕಬ್ಬಿಣದ ಪಟ್ಟಿಗಳು ಮತ್ತೆ ಮತ್ತೆ ಸಡಿಲಗೊಂಡು, ಕಿತ್ತು ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಾ ಬಾಯ್ತೆರೆದು ಕೂತಂತಿದೆ. ಹತ್ತಾರು ಬಾರಿ ರಿಪೇರಿ ಮಾಡಿ ಎಷ್ಟು ಹಣ ಖರ್ಚು ಹಾಕಿದರೋ ಗೊತ್ತಿಲ್ಲ,ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಈ ಬಾರಿ ಪ್ರವೇಶ ದ್ವಾರದ ಬಳಿ ಉಂಟಾಗಿರುವ ಕಬ್ಬಿಣ ಪಟ್ಟಿಗಳ ನಡುವಿನ ಸಡಿಲಿಕೆ ಅಂತರ ಹೆಚ್ಚುತ್ತಲೇ ಇದ್ದು ಯಾರದಾದರೂ ಕಾಲು ಇಲ್ಲವೇ ಪ್ರಾಣ ನುಂಗುವುದು ಗ್ಯಾರಂಟೀ ಎನ್ನುತ್ತಾರೆ ಕೆಲ ಸ್ಥಳೀಯರು.

ಸಾರಿಗೆ ಸಂಸ್ಥೆಯ ನಿರ್ಲಕ್ಷದಿಂದ ಪ್ರಯಾಣಿಕರು, ವಾಹನ ಚಾಲಕರು ಮತ್ತಿತರರು ನಾನಾ ರೀತಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ವೃದ್ಧರು, ಮಕ್ಕಳು, ಸೈಕಲ್ ಹಾಗೂ ದ್ವಿಚಕ್ರವಾಹನ ಸವಾರರು ಸೇರಿದಂತೆ ಇತರೆ ಕೆಲವರು ಆಗಾಗ ಇಲ್ಲಿ ಆಯ ತಪ್ಪಿ ಕಬ್ಬಿಣ ಪಟ್ಟಿಯ ನಡುವೆ ಕಾಲು ಸಿಲುಕಿಸಿ ಕೊಳ್ಳುವುದು, ಮಳೆ ನೀರು ಸರಾಗಿವಾಗಿ ಹರಿದು ಹೋಗದಿರುವುದು ನಾನಾ ರೀತಿಯ ಅವಾಂತರಗಳಿಗೆ ಕಾರಣವಾಗುತ್ತಲೇ ಇದೆ..ಬಸ್ ಪ್ರಯಾಣಿಕರು, ಇಲ್ಲವೇ ಇತರರಿಗೆ ಯಾವುದಾದರೂ ರೀತಿಯ ಅಪಾಯ ಆಗುವ ಮುನ್ನ ಸಂಬಂಧಿಸಿದವರು ಎಚ್ಚೆತ್ತುಕೊಂಡು ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿರುವ ಕೆಲ ಸಾಮಾಜಿಕ ಕಾರ್ಯಕರ್ತರು, ಒಂದೊಮ್ಮೆ ,ಸಮಸ್ಯೆ ಪರಿಹಾರಕ್ಕೆ ಸಂಬಧಿತ ಅಧಿಕಾರಿಗಳು ಸೂಕ್ತವಾಗಿ ಕರ್ತವ್ಯ ನಿರ್ವಹಿಸದಿದ್ದರೆ,ಬಸ್ ತಡೆದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button