ಅಂಕೋಲಾ: ಬಲು ಅಪರೂಪ ಕೆಂಪು ಬಣ್ಣದ ಈ ಸಿಂಧೂರ ಗಣಪ. ದರ್ಶನ ಮಾತ್ರದಿಂದಲೇ ಪರಿಹಾರವಾಗುವುದಂತೆ ಜನ್ಮಾಂತರಗಳ ಪಾಪ. ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹೊಂದಿ ದೊಡ್ಡ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸುತ್ತಾ ಬಂದಿರುವ ಗರಿಕೆ ಪ್ರಿಯನ ಮಹಿಮೆ ಅಪಾರ, ಮೂಲಾ ನಕ್ಷತ್ರದಂದೇ ವಿಸರ್ಜನೆಗೊಳ್ಳುವ ಈ ವಿಶೇಷ ಗಣಪತಿಯನ್ನು ಕಣ್ತುಂಬಿಕೊಳ್ಳಿ.
ಇದನ್ನೂ ಓದಿ: ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ
ವಿಶ್ವದಾದ್ಯಂತ ಪ್ರಥಮ ಪೂಜಿತ ಏಕದಂತನ ಆರಾಧನೆ ಜೋರಾಗಿ ನಡೆದಿದ್ದು ಚೌತಿಯ ಸಂಭ್ರಮ ಎಲ್ಲೆಡೆ ಕಂಡುಬರುತ್ತಿದೆ. ಈ ನಡುವೆ ಅಂಕೋಲಾ ತಾಲೂಕಿನ ಸಾರ್ವಜನಿಕ ಗಣಪತಿಗಳಲ್ಲಿ ಮೊದಲ ಗಣಪ ಎನ್ನುವ ಪ್ರಸಿದ್ಧಿ ಪಡೆದಿರುವುದು ದೊಡ್ಡ ದೇವರೆಂದೇ ಖ್ಯಾತಿ ಪಡೆದಿರುವ ಶ್ರೀ ವೆಂಕಟರಮಣ ದೇವಾಲಯದ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಿದ ಮಹಾ ಗಣಪತಿಗೆ ಸಲ್ಲುತ್ತದೆ. ಕೇವಲ ಪ್ರಥಮ ಪೂಜಿತ ಎಂದಷ್ಟೇ ಅಲ್ಲದೇ ಈ ಗಣಪ ಭಕ್ತರ ಪಾಲಿನ ಇಷ್ಟಾರ್ಥ ಕರುಣಿಸುವ ಮಹಾ ಮಹಿಮನೂ ಹೌದು. ಸಾಮಾನ್ಯವಾಗಿ ಗಣಪತಿಗೆ ಕೆಂಪು ಬಣ್ಣ ಮತ್ತು ಗರಿಕೆ ಎಂದರೆ ಬಲು ಪ್ರೀತಿ ಎನ್ನುವುದು ಹಲವು ಭಕ್ತರಿಗೆ ತಿಳಿದಿರುವ ವಿಚಾರ .
ಆದರೆ ಆಧುನಿಕತೆಯ ಈ ದಿನಗಳಲ್ಲಿಯೂ ಈಗಲೂ ಮಣ್ಣಿನಿಂದಲೇ ಮೂರ್ತಿ ತಯಾರಿಸುತ್ತಿರುವುದು ಇಲ್ಲಿಯ ಇನ್ನೊಂದು ವಿಶೇಷವಾದರೆ, ಮಂಗಲ ಮೂರ್ತಿ ಕೆಂಪು ಬಣ್ಣದಿಂದ ಕಂಗೊಳಿಸುವುದು ಇನ್ನೊಂದು ವಿಶೇಷ. ಅದಕ್ಕೆ ಇದನ್ನು ಸಿಂಧೂರ ಗಣಪತಿ ಯೆಂದು ಕರೆದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಅಂಕೋಲಾ ತಾಲೂಕಿನಲ್ಲಿ ಸಾರ್ವಜನಿಕವಾಗಿ ಪೂಜಿಸಿ ಆರಾದಿಸಲ್ಪಟ್ಟ ಪ್ರಪ್ರಥಮ ಗಣಪತಿ ಎಂದೇ ಖ್ಯಾತಿ ಪಡೆದಿರುವ ಸಿಂಧೂರ ಗಣಪತಿಯನ್ನು 1880 ರಲ್ಲೇ ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಆರಂಭವಾಗಿತ್ತು ಎನ್ನಲಾಗಿದ್ದು, ಇಂದಿಗೂ ಸಹ ಈ ಗಣಪತಿ ತಯಾರಿಸಲು ಮಣ್ಣು ಪೂರೈಕೆ ಸೇರಿದಂತೆ ಗಣೇಶನ ಹಬ್ಬದ ಸಂದರ್ಭದ ವಿವಿಧ ಸೇವೆಗಳನ್ನು ತಾಲೂಕಿನ ವಿವಿಧ ಸಮಾಜಗಳ ಜನರು ನೆರವೇರಿಸುತ್ತಾ ಬಂದಿದ್ದು ನೂರಾರು ವರ್ಷಗಳ ಪುರಾತನ ಧಾರ್ಮಿಕ ಪರಂಪರೆ ಮುಂದುವರೆಸಿಕೊಂಡು ಬರಲಾಗುತ್ತಿದೆ.
ಚೌತಿಯಂದು ಬಹುತೇಕ ಎಲ್ಲೆಡೆ ಮುಂಜಾನೆ ಇಲ್ಲವೇ ಮಧ್ಯಾಹ್ನದ ಒಳಗೆ ಗಣಪತಿ ಮಾರ್ತಿ ಪ್ರತಿಷ್ಠಾಪನೆ ಗೊಳ್ಳುವದು ಸಾಮಾನ್ಯ ಸಂಪ್ರದಾಯವಾದರೆ,ಶ್ರೀ ವೆಂಕಟರಮಣನ ಸನ್ನಿಧಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಈ ಸಿಂಧೂರ ಗಣಪ ಗೋ ಧೂಳಿ ಅಂದರೆ ಗೋವುಗಳು ಮನೆಗೆ ಮರಳುವ ಸಂಧ್ಯಾ ಕಾಲದಲ್ಲಿ ಪ್ರತಿಷ್ಠಾಪನೆಗೊಳ್ಳುವುದು ವಿಶೇಷ. ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸಾಮಾನ್ಯವಾಗಿ 5 ದಿನಗಳ ನಂತರ ಹಂತ ಹಂತವಾಗಿ ಅನಂತ ಲೋಪಿ ವರೆಗೆ ಬೇರೆ ಬೇರೆ ಕಡೆ ಬೇರೆ ಬೇರೆ ದಿನಗಳಂದು ವಿಸರ್ಜಿಸಲಾಗುತ್ತದೆ. ಆದರೆ ದೊಡ್ಡ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸುವ ಗಣಪನಿಗೆ ದಿನದ ಲೆಕ್ಕ ಮಾಡದೇ, ಮೂಲ ನಕ್ಷತ್ರದ ದಿನದಂದೇ ವಿಸರ್ಜನೆ ನಡೆಸುವುದು ಇದರ ಇನ್ನೊಂದು ವಿಶೇಷ.
ತಾಲೂಕಿನ ಜನರು,ಹಾಗೂ ಇತರೆಡೆಯ ಅಸಂಖ್ಯ ಭಕ್ತರು ಗಣೇಶ ಚೌತಿಯ ಸಂದರ್ಭದಲ್ಲಿ ವೆಂಕಟರಮಣ ದೇವಾಲಯಕ್ಕೆ ಆಗಮಿಸಿ ಸಿಂಧೂರ ಗಣಪತಿ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಂಪು ಗಣಪನ ದರ್ಶನ ಭಾಗ್ಯದಿಂದಲೇ ಜನ್ಮ -ಜನ್ಮಾಂತರಗಳ ಸಕಲ ಪಾಪ ಪರಿಹಾರವಾಗುವುದೆಂಬ ನಂಬಿಕೆ ಹಲವು ಭಕ್ತರಲ್ಲಿದೆ.
ಗರಿಕೆ ಸೇವೆ ನೀಡಿದರೂ ಸಂತೃಪ್ತನಾಗುವ ಸಿಂಧೂರ ಮಹಾಗಣಪ ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡುವನೆಂಬ ನಂಬಿಕೆ ಇದೆ.ಬಲು ಅಪರೂಪದ ಈ ಸುಂದರ ಮಹಾ ಗಣಪತಿ ತನ್ನ ಹೊಳಪು ಹಾಗೂ ಶಕ್ತಿಯಿಂದ ಎಂಥವರನ್ನು ಆಕರ್ಷಿಸಿ, ಸದ್ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡುವ ಮೂಲಕ ಹಲವರ ಆರಾಧ್ಯ ದೈವವಾಗಿದ್ದಾನೆ.