ಹೊನ್ನಾವರ: ಮನೆಯಲ್ಲಿದ್ದ ನಾಯಿಯನ್ನು ಹೊತ್ತೊಯ್ಯಲು ಬಂದ 2 ವರ್ಷದ ಗಂಡು ಚಿರತೆಯೊಂದು ಆಯತಪ್ಪಿ ಹಿತ್ತಲಿನ ಬಾವಿಗೆ ಬಿದ್ದ ಘಟನೆ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ ನಡೆದಿದೆ. ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂರಕ್ಷಕರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ: ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ
ಹೊನ್ನಾವರ ತಾಲೂಕಿನ ಮಲ್ಲಾಪುರದ ರಾಜು ಪರಮೇಶ್ವರ ಭೋವಿ ಅವರ ಮನೆಯ ಭಾವಿಗೆ ನಸುಕಿನ ವೇಳೆ ಮನೆಯಲ್ಲಿದ್ದ ನಾಯಿಯನ್ನು ಹೊತ್ತೊಯ್ಯುವ ಅವಸರದಲ್ಲಿ ಆಯತಪ್ಪಿ ಚಿರತೆ ಸುಮಾರು 20 ಅಡಿ ಆಳದ ಬಾವಿಗೆ ಬಿದ್ದಿದೆ. ಇದನ್ನು ಕಂಡ ಮನೆಯವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವನ್ಯಜೀವಿ ಸಂರಕ್ಷಕರಿಗೆ ಕರೆ ಮಾಡಿದ್ದರು.
ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳು, ಸಿಬ್ಬಂದಿ, ವನ್ಯಜೀವಿ ಸಂರಕ್ಷಕರು ಜಂಟಿಯಾಗಿ ಬಲೆಯ ಸಹಾಯದಿಂದ ಚಿರತೆಯ ರಕ್ಷಣಾ ಕಾರ್ಯಕ್ಕೆ ಮುಂದಾದರು. ಬಾವಿಯಿಂದ ಮೇಲಕ್ಕೆತ್ತಿದ ಚಿರತೆಯನ್ನು ಬೋನಿನಲ್ಲಿ ಬಂಧಿ ಮಾಡಲಾಗಿತ್ತು. ಕಾರ್ಯಚರಣೆಯಲ್ಲಿ ವನ್ಯ ಜೀವಿ ಸಂರಕ್ಷಕರಾದ ಸಿ.ಆರ್ ನಾಯಕ, ಉರಗತಜ್ಞ ಪವನ ನಾಯ್ಕ, ನಾಗರಾಜ ಶೇಟ್, ಶಂಕರ, ಸಂಗಮೇಶ ಹಾಗೂ ಕುಮಟಾ ಆರ್‌ಎಫ್‌ಓ ಪ್ರವೀಣ ನಾಯಕ, ಸಿಬ್ಬಂದಿ ರಾಘವೇಂದ್ರ ನಾಯ್ಕ, ಚಿದಂಬರ ಗೌಡ, ಸೇರಿದಂತೆ ಅನೇಕರು ಇದ್ದರು. ರಕ್ಷಣೆ ಮಾಡಿದ ಚಿರತೆಯನ್ನು ಕಾಡಿಗೆ ಬಿಡಲಾಯಿತು.