Focus News
Trending

ಸೈಬರ್ ಕ್ರೈಂ ಕುರಿತು ಜಾಗೃತಿ ಅತೀ ಅವಶ್ಯ: ಪಿಎಸ್ಐ ಉದ್ದಪ್ಪ ಧರೆಪ್ಪನವರ: 20 ದಿನದಲ್ಲಿ 8 ಸೈಬರ್ ಕ್ರ್ರೆಂ ಪ್ರಕರಣ

ಅಂಕೋಲಾ : ಆಧುನಿಕ ತಂತ್ರಜ್ಞಾನ ಬೆಳೆದಂತೆ ಅಪರಾಧಗಳೂ ಹೆಚ್ಚುತ್ತಿದ್ದು ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ಕ್ರೈಂ ವಂಚನೆಯಿಂದ ರಕ್ಷಿಸಿಕೊಳ್ಳಲು, ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವದು ಅತೀ ಅವಶ್ಯ ಎಂದು ಅಂಕೋಲಾ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಉದ್ದಪ್ಪ ಅಶೋಕ ಧರೆಪ್ಪನವರ ಹೇಳಿದರು.

ಅವರು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಲಯದ ಸಭಾಭವನದಲ್ಲಿ ಆಯೋಜಿಸಿದ್ದ ಸೈಬರ್ ಕ್ರೈಂ ಜಾಗೃತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ ಅಂಕೋಲಾ ತಾಲೂಕಿನಲ್ಲಿ ಕಳೆದ 20 ದಿನಗಳಲ್ಲಿ 8 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದು ಮೊಬೈಲ್ ಬಳಸುವವರನ್ನೇ ಗುರಿಯಾಗಿಸಿರುವದು ಪ್ರಮುಖವಾಗಿದೆ. ಒಂದು ಅಪರಾಧಕ್ಕಿಂತ ಇನ್ನೊಂದು ಅಪರಾಧ ಭಿನ್ನವಾಗಿದ್ದು ದಿನದಿಂದ ದಿನಕ್ಕೆ ಬುದ್ಧಿ ಉಪಯೋಗಿಸಿ ಕೃತ್ಯ ನಡೆಸಿದ್ದು ಕಂಡುಬರುತ್ತದೆ. ಹೀಗಾಗಿ ವಂಚನೆಗೊಳಗಾಗುವವರು ಯಾವ ಸಂದರ್ಭದಲ್ಲಿ ಮೋಸ ಹೋಗುತ್ತೇವೆ ಎನ್ನುವುದು ನಮ್ಮನ್ನು ನಾವೇ ನಂಬದ ಸ್ಥಿತಿಯಲ್ಲಿ ಇದ್ದೇವೆ.

ಹಲವಾರು ಆಪ್ ಗಳು ಮರಳು ಮಾಡುತ್ತಿದ್ದು ಅದನ್ನು ಡೌನ್ಲೋಡ್ ಮಾಡುವಷ್ಟರಲ್ಲಿ ನಮಗರಿವಿಲ್ಲದೆ ಹಣವನ್ನು ಕಳೆದುಕೊಳ್ಳುತ್ತೇವೆ. ಬರುವ ಪರಿಚಿತ ಕರೆಗಳನ್ನು ಸ್ವೀಕರಿಸಿ ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿ, ಮಾಹಿತಿ ವಿನಿಮಯ ಮಾಡಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಹಲವು ಸಲ ಪರಿಚಿತ ಕರೆಗಳು ವಿದೇಶಿ ಕರೆಗಳು ಆಗಿರುತ್ತವೆ. ಈ ಬಗ್ಗೆ ಮೊದಲೇ ಸಂಖ್ಯೆಯನ್ನು ಗಮನಿಸಿ ಕರೆ ಸ್ವೀಕರಿಸುವ ಅಗತ್ಯವಿದ್ದರೆ ಮಾತನಾಡುವ ಶೈಲಿಯಲ್ಲಿ ಸಂಶಯ ಬಾರದೆ ಅತ್ಯಂತ ಸರಳವಾಗಿ ಮೋಸ ಹೋಗುವ ದಿನಗಳಾಗಿಬಿಟ್ಟಿದೆ. ಅನಾವಶ್ಯಕ ಕರೆಗಳು ಬೇಡವೆಂದಾದಲ್ಲಿ 1909 ನಂಬರಿಗೆ ಫುಲ್ಲಿ ಬ್ಲಾಕ್ ಅಂತ ಎಸ್ಎಂಎಸ್ ಕಳುಹಿಸಿದರೆ ಅದರಿಂದ ರಕ್ಷಣೆ ಸಿಗುತ್ತದೆ.

ವಂಚನೆಗೊಳಗಾದವರು ಹಣವನ್ನು ಕಳೆದುಕೊಂಡಲ್ಲಿ 24 ಗಂಟೆ ಒಳಗೆ 1930 ನಂಬರಿಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಅಕೌಂಟ್ ನಲ್ಲಿ ಇರುವ ಹಣವನ್ನು ರಕ್ಷಣೆ ಮಾಡಿಕೊಳ್ಳಲು ನಮ್ಮ ಫಿಂಗರ್ ಪ್ರಿಂಟನ್ನು ಬ್ಲಾಕ್ ಮಾಡಿಸಿಕೊಳ್ಳಬೇಕು. ಮಕ್ಕಳಿಗ ಆಟವಾಡಲು ಮೊಬೈಲನ್ನು ಕೊಟ್ಟಾಗ ಗೊತ್ತಿಲ್ಲದೆ ಹಲವು ಸಲ ವಂಚನೆಗೆ ಒಳಗಾಗುತ್ತೇವೆ. ಯಾವುದೇ ತುರ್ತು ಸಂದರ್ಭದಲ್ಲಿ 112 ನಮ್ಮ ಮಿತ್ರ ಸಂಖ್ಯೆಗೆ ಕರೆ ಮಾಡಿದರೆ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ನೆರವಿಗೆ ಬರುತ್ತಾರೆ ಎಂದರು.

ತಾಲೂಕ ಆರೋಗ್ಯ ಅಧಿಕಾರಿ ಡಾಕ್ಟರ್ ಜಗದೀಶ್ ನಾಯ್ಕ ಮಾತನಾಡಿ ಹಬ್ಬಹರಿದಿನಗಳಲ್ಲಿ, ಉತ್ಸವಗಳಲ್ಲಿ ಆಮಿಷವನ್ನು ತೋರಿಸಿ ಬಹುಮಾನಗಳನ್ನು ಘೋಷಿಸುವ ಲಾಟರಿ ಮೂಲಕ ಹಲವರನ್ನು ಸಂಪರ್ಕಿಸುವದು ಗಮನಕ್ಕೆ ಬಂದಿದೆ. ಜನಪ್ರತಿನಿಧಿಗಳೂ ಈ ಕುರಿತು ನಮ್ಮ ಇಲಾಖೆಯ ಗಮನಕ್ಕೆ ತಂದಿದ್ದಾರೆ. ನಮ್ಮ ಇಲಾಖೆಯಲ್ಲಿ ಸರಳವಾಗಿ ಸಿಗುವವರು ಆಶಾ ಕಾರ್ಯಕರ್ತೆಯರು ಆಗಿದ್ದಾರೆ. ಕಾರ್ಯಕರ್ತೆಯರು ತಮ್ಮ ಕರ್ತವ್ಯದ ವೇಳೆ ಯಾವುದೇ ಆಸೆ ಆಕಾಂಕ್ಷೆಗೆ ಆಮಿಷಕ್ಕೆ ಬಲಿಯಾಗದೆ ಇಲಾಖೆ ಕೊಟ್ಟ ಕರ್ತವ್ಯಗಳನ್ನು ಪಾಲಿಸಿ ಜನರಿಗೆ ಯೋಜನೆಗಳನ್ನು ತಲುಪಿಸಿ ನಿಷ್ಠೆಯಿಂದ ಇರಬೇಕಾಗಿದ್ದು ಮುಖ್ಯವಾಗಿದೆ.

ಈಗ ಆರಂಭವಾಗುವ ಕುಷ್ಟ ರೋಗ ಕ್ಷಯ ರೋಗ ಸಮೀಕ್ಷೆ ವೇಳೆಯಲ್ಲಿ ಮನೆ ಮನೆ ಭೇಟಿ ಮಾಡುವ ಸಂದರ್ಭದಲ್ಲಿ ಇದೆ ವೇಳೆಯಲ್ಲಿ ನಿಮ್ಮ ಬೆನ್ನು ಹತ್ತಿ ನಿಮ್ಮಿಂದ ಲಾಟರಿ ಮಾರಾಟ ಮಾಡುವ ಸಂಬಂಧ ಬರುವ ಸಾಧ್ಯತೆಗಳಿರುತ್ತದೆ. ಇದಕ್ಕೆ ನಮ್ಮಲ್ಲಿಂದ ಯಾವುದೇ ಆದೇಶವಾಗಲಿ ಅಥವಾ ಒತ್ತಾಯವಾಗಲಿ ಇಲ್ಲದೆ ಇರುವುದರಿಂದ ಇಂಥವರನ್ನು ಬೆಂಬಲಿಸಿದರೆ ನೀವೇ ಹೊಣೆಗಾರರಾಗುತ್ತೀರಿ. ಅಂಥದೇನಾದರೂ ನಿಮ್ಮನ್ನು ಅತಿಯಾಗಿ ಒತ್ತಾಯ ಪಡಿಸುವ ವ್ಯಕ್ತಿಗಳು ಇದ್ದಲ್ಲಿ ಅವರಿಗೆ ನಿಮ್ಮ ಕರ್ತವ್ಯದ ಬಗ್ಗೆಯೂ ಅರಿವು ಮೂಡಿಸಿ ನಿಮ್ಮ ಗೌರವವನ್ನು ಉಳಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.

ಅಂಕೋಲಾ ನೋಡಲ್ ಅಧಿಕಾರಿ ಡಾ.ಅರ್ಚನಾ ನಾಯಕ ಮಾತನಾಡಿ ಯಾವುದೇ ಕರ್ತವ್ಯ ಮಾಡುವಾಗ ಇಲಾಖೆಯ ಲಿಖಿತ ನಿರ್ದೇಶನ ತರಬೇತಿ ಇರುತ್ತದೆ. ಅದರಂತೆ ಸಮನ್ವಯತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಸಂಸ್ಥೆಯ ಮುಖ್ಯಸ್ಥರಿಗೆ ಚರ್ಚಿಸಿ ಸರಕಾರದ ಯೋಜನೆಗಳನ್ನು ನಿರ್ವಹಿಸುವ ಬಗ್ಗೆ ಗುರಿ ಹಾಕಿಕೊಳ್ಳುವುದು ಮುಖ್ಯ ಎಂದರು. ಆಶಾ ಮೇಲ್ವಿಚಾರಕಿ ಕಮಲಾ ಗೌಡ ಮಾತನಾಡಿ ಹಳ್ಳಿಗಳಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ನಾವಷ್ಟೇ ತಿಳಿದುಕೊಂಡು ಸುಮ್ಮನಾಗದೆ ಇತರಿಗೂ ಕೂಡ ಸೈಬರ್ ವಂಚನೆ ಮೋಸದ ಜಾಲದ ಬಗ್ಗೆ ಅರಿವು ಮೂಡಿಸುವುದು ಆದ್ಯ ಕರ್ತವ್ಯವಾಗಿದೆ ಪೊಲೀಸ್ ಇಲಾಖೆಯಿಂದ ಸಿಕ್ಕಿರುವ ಮಾಹಿತಿಯನ್ನು ಎಲ್ಲರಿಗೂ ತಲುಪಿಸುವ ಕಾರ್ಯವಾಗಲಿ ಎಂದರು. ಈ ಸಂದರ್ಭದಲ್ಲಿ ಅರೋಗ್ಯ ಇಲಾಖೆಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಇದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button