ಕುಮಟಾ: ಹಬ್ಬ ಹರಿದಿನಗಳಲ್ಲಿ ಡಿ.ಜೆ, ಧ್ವನಿವರ್ಧಕ, ಮತ್ತು ಲೇಸರ್ ಅಬ್ಬರಕ್ಕೆ ಸಾರ್ವಜನಿಕ ವಲಯದಲ್ಲಿ ಕೆಲವರಿಂದ ಭಾರೀ ವಿರೋಧ ವ್ಯಕ್ತವಾಗಿದೆ, ಖ್ಯಾತ ವೈದ್ಯರಾದ ರವಿರಾಜ್ ಕಡ್ಲೆ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಕುಮಟಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಸಾರ್ವಜನಿಕ ಸಮಾರಂಭ ಹಾಗೂ ಆಚರಣೆಗಳಲ್ಲಿ ನಮ್ಮ ದೇಶದ ಕಾನೂನಿಗೆ ವಿರುದ್ಧವಾಗಿ ಹಾಗೂ ಧರ್ಮ ಪರಂಪರೆಗೆ ವಿರುದ್ಧವಾಗಿ ಧ್ವನಿವರ್ಧಕ ಹಾಗೂ ಡಿಜೆ ಜೊತೆಗೆ ಲೇಸರ್ ಲೈಟಗಳನ್ನು ಬಳಸುವ ಅನಿಷ್ಟ ಸಂಪ್ರದಾಯ ಶುರು ಆಗಿದ್ದು ಈ ಡಿಜೆ ಸುಮಾರು ೮ ಕಿಲೋಮೀಟರ್ ತನಕ ಭೂಮಿಯನ್ನೂ ನಡುಗಿಸುವಂತೆ ಇರುತ್ತದೆ.
ಇದನ್ನೂ ಓದಿ: ಹೆಸರಿಗಷ್ಟೇ ಪ್ರಮುಖ ರಾಜ್ಯ ಹೆದ್ದಾರಿ: ಎಲ್ಲಿ ನೋಡಿದ್ರೂ ಹೊಂಡ ಗುಂಡಿಗಳು
ಇದರಿಂದ ಶಿಶುಮಕ್ಕಳು, ರೋಗಿಗಳು, ಗರ್ಭಿಣಿ ಸ್ತ್ರೀಯರು, ಮಕ್ಕಳು, ಮುದುಕರು ಭಾರಿ ತೊಂದರೆ ಅನುಭವಿಸುತ್ತಾರೆ. ಎಷ್ಟೋ ಜನ ಶಾಶ್ವತ ಕಿವುಡುತನಕ್ಕೆ ಒಳಗಾಗಿದ್ದಾರೆ ಹಾಗೂ ಹೃಯಾಘಾತಕ್ಕೆ ಒಳಗಾಗಿದ್ದಾರೆ. ಹಿಂದಿನ ವರ್ಷ ಗಣೇಶ ಚತುರ್ಥಿ ಸಮಯ ಮುಂಬೈಯಲ್ಲಿ ಬಳಸಿದ ಲೇಸರ್ ಲೈಟ್ ನಿಂದ ೬೫ ಜನ ಕುರುಡರಾಗಿದ್ದಾರೆ ಎಂದು ನ್ಯಾಯಾಲಯದಲ್ಲಿ ತಿಳಿಸಲಾಗಿದೆ. ಹೀಗೆ ಜನರನ್ನು ಹಿಂಸೆ ಮಾಡುವ ಡಿಜೆಯನ್ನು ಪೊಲೀಸರು ಕಾನೂನು ಪ್ರಕಾರ ಸೀಜ್ ಮಾಡಿ ಕ್ರಮ ಕೈಗೊಳ್ಳುವುದು ಸಮಂಜಸ ಕ್ರಮ ಆಗಿದೆ.
ಇನ್ನು ಮುಂದೆ ನಮ್ಮ ಸುತ್ತ ಮುತ್ತ ಯಾರೇ ಕಾನೂನು ವಿರುದ್ಧ ಡಿಜೆ ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ನಾವೇ ನೇರವಾಗಿ ಪೊಲೀಸ್ ದೂರನ್ನು ದಾಖಲಿಸುವದಾಗಿ ಖ್ಯಾತ ವೈದ್ಯರಾದ ಡಾ ರವಿರಾಜ್ ಕಡ್ಲೆ ಹೇಳಿದರು. ಸೆಪ್ಟೆಂಬರ್ 10 ರಂದು ಕುಮಟಾ ತಾಲೂಕಿನ ಕಡ್ಲೆ ಹಾಗೂ ಆಸುಪಾಸಿನ ಕೆಲವು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಬಳಸಿದ ಡಿಜೆಯಿಂದಾಗಿ ಆ ಭಾಗದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಕುಮಟಾದ ಹೃದಯಭಾಗದಲ್ಲಿ ೫ ಪ್ರಮುಖ ಆಸ್ಪತ್ರೆಗಳಿದ್ದು ಆ ಆಸ್ಪತ್ರೆಗಳ ಸುತ್ತಮುತ್ತಲಿನ ಭಾಗವು ಸಂಪೂರ್ಣ ಶಬ್ದ ನಿಷೇಧಿತ ವಲಯವಾಗಿರುತ್ತದೆ.
ಆದರೆ ಈ ಭಾಗದ ಆಸುಪಾಸಿನಲ್ಲಿ ಮದ್ಯರಾತ್ರಿಯ ವೇಳೆಗೆ ಕರ್ಕಶ ಶಬ್ದದೊಂದಿಗೆ ಡಿಜೆ ಹಾಕಿ ತೊಂದರೆಯನ್ನು ಉಂಟುಮಾಡಿದ್ದಾರೆ. ಈ ಡಿಜೆ ಶಬ್ದವು ಕುಮಟಾ ಪಟ್ಟಣದಿಂದ ೮ ಕಿಲೋಮೀಟರ್ ತನಕ ಕೇಳಿಸುತ್ತಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಇದು ಕಾನೂನಿನ ಉಲ್ಲಂಘನೆಯಾಗಿದ್ದು ಸಾರ್ವಜನಿಕರ ಹಿತದೃಷ್ಠಿಯಿಂದ ಪ್ರಜ್ಞಾವಂತ ನಾಗರೀಕರು ವಿರೋಧ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದರು.
ಕಡ್ಲೆ ಊರಿನ ಸಾರ್ವಜನಿಕರಾದ ಜ್ಯೋತಿ ನಾಯ್ಕ ಮಾತನಾಡಿ ಕಳೆದ ವರ್ಷ ಡಿಸೆಂಬರ್ ೨೪ ರಿಂದ ಮುಂದಿನ ೪೨ ದಿನದಲ್ಲಿ ಸುಮಾರು ೩೫ ದಿನಗಳ ಕಾಲ ಧ್ವನಿವರ್ಧಕ ಹಾಗೂ ಡಿಜೆ ಶಬ್ದವನ್ನು ಕೇಳುತ್ತಲೇ ಇದ್ದು ಈ ಶಬ್ದದಿಂದ ಬೇಸತ್ತು ಹೋಗಿದ್ದೇವೆ. ಮಕ್ಕಳಿಗೆ ಓದಲು ಸಹ ಆಗುತ್ತಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಮನೆಯಲ್ಲಿನ ವೃದ್ಧರಿಗೆ ತುಂಬಾ ತೊಂದರೆಯಾಗಿದೆ. ನಾವು ಇದರ ಬಗ್ಗೆ ಇಲಾಖೆಗೆ ದೂರು ನೀಡಿದ್ದೇವೆ. ಈ ಬಾರಿ ಅಧಿಕಾರಿಗಳು ಉತ್ತಮವಾದ ಕ್ರಮ ಕೈಗೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ತಿಮ್ಮಪ್ಪ ಮುಕ್ರಿ, ಸಾರ್ವಜನಿಕರಾದ ಶ್ರೀಧರ್ ಮುಕ್ರಿ, ಮಂಜುನಾಥ್ ಹಳ್ಳೇರ, ಡಾ ರವಿರಾಜ್ ಕಡ್ಲೆ, ಜ್ಯೋತಿ ನಾಯ್ಕ್, ಲತಾ ನಾಯ್ಕ್, ಶ್ವೇತಾ ಗೌಡ, ಮಹೇಶ ಆಚಾರಿ, ಗಣಪತಿ ಪಟಗಾರ, ನಾಗವೇಣಿ ಗೌಡ, ವಿಗ್ನೇಶ್ವರ್ ಪಟಗಾರ, ಜೂಜೆ ಲೋಪಿಸ್, ರಾಜೇಶ್ ಫರ್ನಾಂಡಿಸ್, ಗಣೇಶ ನಾಯ್ಕ್, ಮಹೇಂದ್ರ ಗೌಡ, ಮಾರುತಿ ಶೆಟ್ಟಿ, ಪ್ರತಿಭಾ ನಾಯ್ಕ್, ವಿದ್ಯಾ ಗೌಡ, ಭಾರತಿ ನಾಯ್ಕ್ ಹಾಗೂ ಇತರರು ಇದ್ದರು.