Big News
Trending

ಸ್ವಾಸ್ಥ್ಯ ಜಗತ್ತು ನಿರ್ಮಾಣದಲ್ಲಿ ಭಾರತದ ಮಹತ್ವದ ಕೊಡುಗೆ ಯೋಗ

ವಿಶ್ವ ಯೋಗದ ದಿನ ಹಿನ್ನಲೆ
ಸಾಹಿತಿ ಉಮೇಶ್ ಮುಂಡಳ್ಳಿ ಲೇಖನ

ವಿಶ್ವದ ಆರಂಭದಿಂದಲೇ ಭಾರತವು ಭಾರತೀಯ ಸಂಸ್ಕ್ರತಿ ಸಂಪ್ರದಾಯ ಆಚರಣೆಗಳಿಂದ ವಿಶಿಷ್ಟ ಹಾಗೂ ಗೌರವದಿಂದ ಗುರುತಿಸಿಕೊಂಡಿದೆ. ಭಾರತದ ವೇದಗಳು, ಆಯುರ್ವೇದ, ಜ್ಯೋತಿಷ್ಯಶಾಸ್ತ್ರ, ಖಗೋಳ ವಿಜ್ಞಾನ, ಮೊದಲಾದವು ಜಗತ್ತಿಗೆ ಹೊಸ ಸಾಧ್ಯತೆಗಳನ್ನೇ ತೆರೆದು ಕೊಟ್ಟಿವೆ. ಸದೃಡ ಜಗತ್ತು ನಿರ್ಮಾಣದ ಕಡೆ ವಿಶ್ವಕ್ಕೆ ಭಾರತ ನೀಡಿದ ಮಹತ್ವದ ಕೊಡುಗೆ ಯೋಗ. ಭರತ ಭೂಮಿಯಲ್ಲಿ ಜನ್ಮತಳೆದ ಯೋಗ ಇಂದು ಬರಿಯ ಭಾರತದ ವಿದ್ಯೆಯಲ್ಲ. ಅದು ಭಾರತದಲ್ಲಿ ಹುಟ್ಟಿರುವ ಜಾಗತಿಕ ವಿದ್ಯೆ. ಆರೋಗ್ಯ ಮತ್ತು ಆಧ್ಯಾತ್ಮ ಎರಡೂ ಮುಖದಿಂದಲೂ ಯೋಗಕ್ಕೆ ತನ್ನದೇ ಆದಂತಹ ಅಗ್ರಗಣ್ಯ ಸ್ಥಾನ ಇದೆ. ತನ್ನನ್ನು ನಂಬಿದವರನ್ನು ಪೊರೆಯಬಲ್ಲ ಪಾರಂಪರಿಕ ಕಲೆ ಯೋಗ.

ವೇದಕಾಲದ ಋುಷಿಗಳಿಂದ ಹುಟ್ಟಿ ಬೆಳೆದು, ಕ್ರಿ.ಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಮಹರ್ಷಿಯಿಂದ ಸರ್ವಾಂಗೀಣ ಆರೋಗ್ಯ- ಅಧ್ಯಾತ್ಮ ವಿದ್ಯೆಯಾಗಿ ಪರಿಷ್ಕರಿಸಲ್ಪಟ್ಟ ಯೋಗ ಇಂದು ಬರೀ ಶಾಸ್ತ್ರವಾಗಿ ಉಳಿಯದೇ ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗುವ ಜೊತೆಗೆ ಇನ್ನೂರಕ್ಕೂ ಹೆಚ್ಚು ದೇಶಗಳಲ್ಲಿ ಸರ್ವಮಾನ್ಯತೆ ಪಡೆದುಕೊಂಡಿದೆ.

ಭೌತಿಕ ನೆಲೆಗಟ್ಟಿನಲ್ಲಿ ಯೋಗವು ಶರೀರವನ್ನು ಆರೋಗ್ಯಕರವಾಗಿಡುವ ಜೊತೆ ಜೊತೆಗೆ ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಯನ್ನು ಈಡೇರಿಸುತ್ತದೆ. ಚೀನಾ, ಜಪಾನ್‌ ಮುಂತಾದ ಬೌದ್ಧ ಧರ್ಮವೇ ಪ್ರಧಾನವಾಗಿರುವ ದೇಶಗಳಲ್ಲಿ ಯೋಗದ ನಾನಾ ರೂಪಗಳು ಝೆನ್‌ ಮೊದಲಾದ ಹೆಸರಿನಲ್ಲಿ ಮಾನ್ಯತೆ ಪಡೆದಿವೆ. ಅಮೆರಿಕ, ಬ್ರಿಟನ್‌ ಮುಂತಾದ ಕ್ರೈಸ್ತ ಧರ್ಮೀಯರೇ ಹೆಚ್ಚಾಗಿರುವ ದೇಶಗಳಲ್ಲಿ ಆರೋಗ್ಯಕ್ಕಾಗಿ ಯೋಗವನ್ನು ಅಂಗೀಕರಿಸಲಾಗಿದೆ. ಇರಾನ್‌ ಮುಂತಾದ ಮುಸ್ಲಿಂ ದೇಶಗಳಲ್ಲಿ ಕೂಡ, ಓಂಕಾರ ಮುಂತಾದ ಹಿಂದೂ ಧರ್ಮೀಯ ಚಹರೆಗಳನ್ನು ಹೊರಗಿಟ್ಟು ಯೋಗವನ್ನು ಕ್ರೀಡೆಯ ಮಾದರಿಯಲ್ಲಿ ಒಪ್ಪಿಕೊಂಡಿದ್ದಾರೆ. ಕೊನೆಗೂ ದೊಡ್ಡ ಸಂಖ್ಯೆಯ ವಿದೇಶೀಯರು ಯೋಗಕ್ಕೆ ಮಾರುಹೋಗುತ್ತಿರುವ ರೀತಿಯನ್ನು ನೋಡಿದಾಗ ನಮ್ಮ ಯೋಗದ ಶಕ್ತಿ ಏನೆಂಬುದು ಅರಿವಾಗದೇ ಇರದು.
ಜಗತ್ತು ಇಂದು ಸ್ಪರ್ಧಾತ್ಮಕವಾಗಿ ಮುನ್ನುಗ್ಗುತ್ತಿದೆ ಒತ್ತಡದ ಜೀವನ ಕ್ರಮ ಬಿಡುವಿಲ್ಲ ಕೆಲಸ ಇದರಿಂದ ಮಾನಸಿಕ ಒತ್ತಡವು ದಿನೇ ದಿನೇ ನಮ್ಮನ್ನು ಅನಾರೋಗ್ಯದ ಕಡೆಗೆ ದೂಡುತ್ತಿದ್ದೆ. ಇದಕ್ಕಾಗಿಯೇ ಪ್ರಾಣಾಯಾಮ ಧ್ಯಾನಗಳನ್ನು ನಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ ಅದೆಷ್ಟೋ ಮಾನಸಿಕ ಕಾಯಿಲೆಗಳನ್ನು ದೂರವಿಡಲು ಸಾಧ್ಯವಿದೆ ಹಾಗು ಅಂತಡ ಒತ್ತಡಗಳಿಂದ ಹೊರಬರಲು ಸಾಧ್ಯವಿದೆ ಎನ್ನುತ್ತಾರೆ ಅನುಭವಿಗಳು ತಜ್ಞರು.

ಯೋಗ ವ್ಯಾಯಾಮ ಮಾತ್ರವಲ್ಲದೆ ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ ಎನ್ನುತ್ತಾರೆ ಅನೇಕ ಯೋಗ ಗುರುಗಳು.

ಯೋಗ ಎಂಬುದು ವಿಶ್ವಕ್ಕೆ ಭಾರತ ನೀಡಿದ ಒಂದು ಅಭುತಪೂರ್ವ ಕೊಡುಗೆ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸುಮಾರು ಒಂಬತ್ತು ಸಾವಿರ ವರ್ಷಕ್ಕೂ ಹಳೆಯದಾದ ಈ ಪದ್ಧತಿಯನ್ನು ಪ್ರಸ್ತುತ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಅನುಸರಿಸುತ್ತಿವೆ. ಪರಿಣಾಮ ಇಂದು ಜನರ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿ ಯೋಗ ಬದಲಾಗುತ್ತಿರುವುದನ್ನು ಗಮನಿಸಲಾಗಿದೆ. ಈ ಕಾರಣಕ್ಕೆ ಯೋಗದ ಮಹತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಬೇಕು ಹಾಗೂ ಅಧಿಕೃತವಾಗಿ ಯೋಗ ದಿನಾಚರಣೆಯನ್ನು ಆಚರಿಬೇಕು ಎಂದು ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರು ಆರಂಭದಿಂದಲೇ ಪ್ರಯತ್ನಿಸುತ್ತಾ ಬಂದಿದ್ದರು. ಕೊನೆಗೂ ಅವರ ಅವಿರತ ಪ್ರಯತ್ನದಿಂದ ಭಾರತೀಯ ಯೋಗವಿದ್ಯೆಯ ಮಹತ್ವವನ್ನು ಅದರ ಪ್ರಯೋಜನವನ್ನು, ವಿಶ್ವಮಾನ್ಯತೆಯನ್ನು ಮನಗಂಡ ವಿಶ್ವಸಂಸ್ಥೆ, 2015ರಲ್ಲಿ ಜೂನ್‌ 21ನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವಾಗಿ ಗುರುತಿಸಿತು.

ಇಂದು ಸೂರ್ಯ ಗ್ರಹಣದ ಕಾರಣ ಕೆಲವು ಅಡತಡೆಗಳಿದ್ದರೂ ವಿಶ್ವದಾದ್ಯಂತ ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಶುಭ ದಿನದಿಂದ ಯೋಗವನ್ನ ನಮ್ಮ ದಿನಚರಿಯಲ್ಲಿ  ಸೇರಿಸಿಕೊಂಡು  ನಾವು ರೋಗ ಮುಕ್ತವಾಗಿ ಬದುಕುವ ಜೊತೆ ಜೊತೆಗೆ ಸ್ವಸ್ಥ ಸಮಾಜವನ್ನ ನಿರ್ಮಾಣ ಮಾಡುವ ಕಡೆ ನಾವೂ ಕೈಜೋಡಿಸೋಣ.

<strong>ಲೇಖನ:</strong> <br><strong>ಉಮೇಶ ಮುಂಡಳ್ಳಿ ಭಟ್ಕಳ</strong>
ಲೇಖನ:
ಉಮೇಶ ಮುಂಡಳ್ಳಿ ಭಟ್ಕಳ

mobile: 9945840552
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಉಮೇಶ್ ಮುಂಡಳ್ಳಿಯರ
ಸೋಷಿಯಲ್ ಪೇಜ್‌ಗೆ
ಭೇಟಿ ನೀಡಬಹುದು.

Back to top button